ಲಾಗಾಯ್ತಿನಿಂದಲೂ ಕೇಂದ್ರದಲ್ಲಿ ಪೆಟ್ರೋಲಿಯಂ ಮಂತ್ರಾಲಯವನ್ನು ವಹಿಸಿಕೊಂಡ ಮಂತ್ರಿಗಳು ಅನತಿ ಕಾಲದಲ್ಲೇ ವಿವಾದಗ್ರಸ್ತರಾಗುವುದು ನಡೆದುಬಂದ ಸಂಪ್ರದಾಯ. ಒಂದು ಕಾಲದಲ್ಲಿ ಪ್ರಧಾನಿಯ ಆಪ್ತರೇ ಆ ಖಾತೆ ನಿರ್ವಹಿಸುತ್ತಿದ್ದರು. ವೀರಪ್ಪ ಮೊಯಿಲಿ ಕಾರ್ಪೊರೇಟ್ ವಲಯದ ವ್ಯವಹಾರದ ಮಂತ್ರಿಯಾಗಿದ್ದಾಗ, ಅದನ್ನು ನಿರ್ವಹಿಸಿದ ರೀತಿ - ನೀತಿ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಆಗೇನೂ ಆರೋಪಗಳು ಇರಲಿಲ್ಲ ಎಂದೇನೂ ಅಲ್ಲ. ಆದರೂ ಉದ್ಯಮಪತಿಗಳ ವ್ಯವಹಾರ ಚೆನ್ನಾಗಿ ತಿಳಿದುಕೊಂಡು, ಆ ಜ್ಞಾನದ ಆಧಾರದ ಮೇಲೇ ಮಂತ್ರಾಲಯವನ್ನು ನಿರ್ವಹಿಸಿದ್ದು ಮೊಯಿಲಿ ಅವರ ಜಾಣ್ಮೆ.
ಹಲವು ತಿಂಗಳ ಹಿಂದೆ, ಮುಖೇಶ್ ಅಂಬಾನಿ ಅವರ ರಿಲೈಯನ್ಸ್ ತೈಲ ಕಂಪನಿಗಳ ವ್ಯವಹಾರದಲ್ಲಿ, ಆಗಿನ ಸಚಿವ ಜೈಪಾಲರೆಡ್ಡಿ ಅವರು ಸ್ವಲ್ಪ ಕಠಿಣವಾಗಿ ವರ್ತಿಸಿದ ಪರಿಣಾಮವಾಗಿ, ಅವರು ಆ ಮಂತ್ರಾಲಯದಿಂದ ಹೊರಬೀಳಬೇಕಾಯಿತು. (ಅದನ್ನು ಸರ್ಕಾರವೂ ನಿರಾಕರಿಸಿದೆ. ಜೈಪಾಲ ರೆಡ್ಡಿ ಅವರೂ ನಿರಾಕರಿಸಿದ್ದಾರೆ. ಅನಂತರದ ದಿನಗಳಲ್ಲಿ ಜೈಪಾಲ ರೆಡ್ಡಿ ಮುಕ್ತವಾಗಿ ಮಾತಾಡಿದ್ದೇ ಕಡಿಮೆ).
ಆಗ, ಪ್ರಧಾನಿ ಮನಮೋಹನ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ಕಣ್ಣಿಗೆ ಬಿದ್ದಿದ್ದು ವೀರಪ್ಪ ಮೊಯಿಲಿ. ಸರಿ. ಕಾರ್ಪೊರೇಟ್ ವ್ಯವಹಾರ ಮಂತ್ರಾಲಯದಿಂದ ಪೆಟ್ರೋಲಿಯಂ ಹಾಗೂ ಇಂಧನ ಸಚಿವಾಲಯಕ್ಕೆ ಮೊಯಿಲಿ ಅವರೇ ಅಧಿಪತಿಯಾಗಿ ಬಂದರು. ಪೆಟ್ರೋಲಿಯಂ ಮಂತ್ರಾಲಯದ ವ್ಯವಹಾರಗಳ ಗರ್ಭದಲ್ಲೇ ವಿವಾದಗಳು ಅಡಗಿವೆ. ಸಮಸ್ಯೆಗಳೂ ಬೇಕಾದಷ್ಟಿವೆ. ಅನೇಕ ವಿಷಯಗಳಲ್ಲಿ ಮಂತ್ರಿ ಯಾವುದೇ ರೀತಿಯ ನಿರ್ಧಾರವನ್ನು ಪ್ರಕಟಿಸಿದರೂ ಅದರಿಂದ ಯಾರಿಗಾದರೂ ಲಾಭವಾಗಲೇಬೇಕು, ಇನ್ಯಾರಿಗೋ ನಷ್ಟವಾಗಬೇಕು ಎನ್ನುವ ಸ್ಥಿತಿ ಅಲ್ಲಿನದು.
ಇಂಥ ಕ್ಲಿಷ್ಟಕರ ಮಂತ್ರಾಲಯದ ಉಸ್ತುವಾರಿಯ ಹೊಣೆ ಹೊತ್ತ ಮೊಯಿಲಿ, ತಮಗೆ ತಾವೇ ರೂಪಿಸಿಕೊಂಡಿರುವ ಕೆಲವು ಗುರಿಗಳನ್ನು ಮುಟ್ಟಲು ಕೈಗೊಳ್ಳಬೇಕಾದ ಕ್ರಮಗಳನ್ನು ಸದ್ಯಕ್ಕೆ ಪ್ರಾರಂಭಿಸಬಹುದಷ್ಟೇ. ಗುರಿ ಸಾಧನೆಯಾಗುವವರೆಗೂ ಅವರೇನೂ ಅಲ್ಲೇ ಇರುತ್ತಾರೆ ಎಂದೇನೂ ಅಲ್ಲ. ಇನ್ನು ನಾಲ್ಕೈದು ತಿಂಗಳಲ್ಲಿ ಲೋಕಸಭೆ ಚುನಾವಣೆ. ಆಗ ಮೊಯಿಲಿ ಮತ್ತೆ ಚಿಕ್ಕಬಳ್ಳಾಪುರ ಚುನಾವಣೆ ಮೈದಾನದಲ್ಲೋ ಅಥವಾ ಇನ್ನೆಲ್ಲೋ ಜನರ ಮುಂದೆ ನಿಲ್ಲಬೇಕಾಗುತ್ತದೆ. ಅವರಿಗೀಗ 74 ವಯಸ್ಸು. ಆರೋಗ್ಯವಾಗಿದ್ದಾರೆ. ದೈಹಿಕ ಕಸುವು, ಮಾನಸಿಕ ಉತ್ಸಾಹ ಎರಡೂ ಇದೆ. ಹಿಂದೆಯೂ ಹಲವಾರು ವಿವಾದಗಳನ್ನು ನಿಭಾಯಿಸಿದ್ದಾರೆ. ಈಗಲೂ ವಿವಾದಗಳಿಗೆ ಹೆದರುವುದಿಲ್ಲ.
1940ರ ಜನವರಿ 12, ಮೂಡಬಿದರೆಯಲ್ಲಿ ಜನನ. ತೀರಾ ಹಿಂದುಳಿದ ಜಾತಿಯ, ಅತಿ ಬಡತನದ ಕುಟುಂಬ. ಊರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಆ ಕಾಲದಲ್ಲಿ ಅವರ ಮನೆತನದ ಧಾರುಣ ಬಡತನ ಕುರಿತ ಕತೆಗಳು ಈಗ ದಂತಕತೆಗಳಾಗಿವೆ. ಕಾನೂನು ಪದವಿ ಪಡೆದವರಿವರು.
ಆಗಿನ ದಿನಗಳಲ್ಲಿ ಬಡವರನೇಕರು ಮಾಡುವಂತೆ ಸಣ್ಣಪುಟ್ಟ ಕೆಲಸಗಳಲ್ಲಿ ದುಡಿದರು. ಅದರಲ್ಲಿ ಬೆಂಗಳೂರಿನ ಎಲ್‌ಐಸಿ ಒಂದು ಕಾರ್ಯಕ್ಷೇತ್ರ. ಅವರ ಸಹಪಾಠಿಗಳಲ್ಲಿ ಅನೇಕರು ಈಗಲೂ ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಮುಂದೆ ವಕೀಲ ವೃತ್ತಿಗೆ ಆರಿಸಿಕೊಂಡಿದ್ದು ಕಾರ್ಕಳ. ಆಗ ಭೂ ಸುಧಾರಣೆಯ ಘೋಷಣೆ ಜೋರಾಗಿ ಕೇಳಿಬಂದಿತ್ತು. ಮೊಯಿಲಿ ಅವರು ಗೇಣಿದಾರ ಒಕ್ಕಲ ಕುಟುಂಬಗಳ ಪರ ನಿಂತರು. ಒಳ್ಳೆಯ ಹೆಸರು ಗಳಿಸಿದರು.
1972. ಮೊದಲ ಬಾರಿಗೆ ಇಂದಿರಾ ಕಾಂಗ್ರೆಸ್ ಪರವಾಗಿ ವಿಧಾನಸಭೆಗೆ ಆಯ್ಕೆ. ಕಳೆದ ನಾಲ್ಕು ದಶಕಗಳಿಂದಲೂ ಒಂದೇ ಪಕ್ಷ. ಅವರ ಪಕ್ಷನಿಷ್ಠೆ ಪ್ರಶ್ನಾತೀತ. ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಸಹಾಯಕ ಮಂತ್ರಿಯಾದರು. ಸಣ್ಣ ಕೈಗಾರಿಕೆ ಅಭಿವೃದ್ಧಿಯ ಇಲಾಖೆ ಅವರ ಪಾಲಿಗೆ ಬಂದಿದ್ದು, ಅದೇ ಪಂಚಾಮೃತವಾಯಿತು. ಕೆಲವು ಕಾಲ ಮಂತ್ರಿಸ್ಥಾನದಿಂದ ಹೊರಬಿದ್ದಿದ್ದರು.
ಮುಂದೆ ರಾಜ್ಯ ಸರ್ಕಾರದ ಕಾಯಿದೆ ಮಂತ್ರಿ, ಹಣಕಾಸು ಮಂತ್ರಿಯೂ ಆದರು. ಆರೇಳು ಬಜೆಟ್ ಮಂಡಿಸಿದರು. ಕೊನೆಗೊಮ್ಮೆ ಮುಖ್ಯಮಂತ್ರಿಯೂ ಆದರು. ಕರ್ನಾಟಕಕ್ಕೆ ಅಷ್ಟೇ ಏಕೆ ಇದೇ ಭಾರತಕ್ಕೆ ಮೊಯಿಲಿ ಶಿಕ್ಷಣ ಮಂತ್ರಿಯಾಗಿ ಕೊಟ್ಟ ಅತಿದೊಡ್ಡ ವರವೆಂದರೆ ವೈದ್ಯ, ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷಾಪದ್ಧತಿ. ಮುಖ್ಯಮಂತ್ರಿ ಸ್ಥಾನ ಬಿಟ್ಟ ನಂತರ ಲೋಕಸಭೆಗೆ ಸ್ಪರ್ಧಿಸಿದಾಗ ಸೋತರು. ಎಸ್.ಎಂ. ಕೃಷ್ಣರ ಕಾಲದಲ್ಲಿ ಆಡಳಿತ ಹಾಗೂ ಕಾನೂನು, ತೆರಿಗೆ ನೀತಿ ಸುಧಾರಣೆ ಆಯೋಗದ ಅಧ್ಯಕ್ಷರಾದರು. ನಂತರ ಕೇಂದ್ರದಲ್ಲಿ ಎರಡನೇ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರಾಗಿ ಬರೋಬ್ಬರಿ ಹನ್ನೆರಡು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದರು.
ಕೊನೆಗೂ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದು ಚಿಕ್ಕಬಳ್ಳಾಪುರದಿಂದ. ಕೇಂದ್ರದಲ್ಲಿ ಹಿರಿಯ ನಾಯಕರಲ್ಲಿ ಅನೇಕರು ರಾಜಕೀಯದಲ್ಲಿ ತೆರೆಮರೆಗೆ ಸರಿದಿದ್ದ ಕಾಲ ಅದು. ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆಯುವುದು ಮೊಯಿಲಿ ಅವರಿಗೆ ಕಷ್ಟವೇನೂ ಆಗಲಿಲ್ಲ. ಒಳ್ಳೆಯ ಆಡಳಿತಗಾರ ಎನ್ನುವ ಹೆಸರಿದೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾದ ಅನಂತರ ರಾಜ್ಯದ ರಾಜಕೀಯದಲ್ಲಿ ಕೈಯ್ಯಾಡಿಸುವುದನ್ನು ತುಂಬಾ ಕಡಿಮೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಕಾಣಿಕೆ ನೀಡಿದ್ದಾರೆ.
ವೀರಪ್ಪ ಮೊಯಿಲಿ ತಮ್ಮ ಅಧಿಕಾರಾವಧಿಯಲ್ಲೇ ಸಾಧ್ಯವಾದರೆ, ಇಂಧನ ಹಾಗೂ ತೈಲವಲಯದಲ್ಲಿ ಭಾರತ ಸ್ವತಂತ್ರ ಸ್ವಾವಲಂಬಿ ದೇಶವನ್ನಾಗಿ ಮಾಡಲು ಮೊದಲ ಹೆಜ್ಜೆಗಳನ್ನಿಡುವ ಉದ್ದೇಶ ಪ್ರಕಟಿಸಿದ್ದೂ ಆಗಿದೆ. ಗ್ಯಾಸ್, ಡೀಸೆಲ್ ಬೆಲೆಗಳಲ್ಲಿರುವ ಸಬ್ಸಿಡಿಗಳ ಅವಾಂತರ ಅಳಿಸಿಹಾಕುವ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಮೊಯಿಲಿ ಅವರ ಮೂಲ ವೃತ್ತಿ ವಕೀಲಿ. ಅವರ ಪ್ರವೃತ್ತಿ ರಾಜಕಾರಣ, ಆಡಳಿತ. ಆದರೆ ದೀರ್ಘಕಾಲದಿಂದಲೂ ಅವರು ಸಾಹಿತ್ಯ ಪ್ರಪಂಚದಲ್ಲಿ ಜೀವಂತ, ಚೈತನ್ಯಪೂರ್ಣ ಆಸಕ್ತಿ ಉಳಿಸಿಕೊಂಡು- ಬೆಳೆಸಿಕೊಂಡು ಬಂದಿದ್ದಾರೆ.
ಇವರ 'ರಾಮಾಯಣ ಮಹಾನ್ವೇಷಣ' ಒಂದು ಮಹಾಗ್ರಂಥವೇ. ದ್ರೌಪದಿಯ ಪಾತ್ರವನ್ನು ಬೇರೆ ರೀತಿಯಲ್ಲಿ ಮೌಲ್ಯಮಾಪನ ಮಾಡುವ ಪ್ರಯತ್ನ ಕುರಿತ ಪುಸ್ತಕ ಇದೆ. ಒಂದು ಕಾದಂಬರಿಯನ್ನೂ ಬರೆದಿದ್ದಾರೆ. ಬೆಂಗಳೂರಿನಲ್ಲಿ ಅವರ ಮನೆಗೆ ಇದ್ದ ಹೆಸರು ಕೌಸ್ತುಭ. ಮಾಲತಿ ಅವರ ಪತ್ನಿ. ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಮೊಯಿಲಿ ಅವರ ಕತೆ ನಿಜಕ್ಕೂ ಬಲುದೊಡ್ಡದು. ಈಗ ಅವರು ನಿರ್ಣಾಯಕ ಹಂತ ತಲುಪಿದ್ದಾರೆ.
- ಸತ್ಯ