ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿ
ಊರು, ಹೆಸರಿಲ್ಲ
ನಾನು ರೆವಿನ್ಯೂ ಸೈಟ್ ಖರೀದಿಸಬಹುದೇ? ಅದನ್ನು ನೋಂದಣಿ ಮಾಡಿಸಿಕೊಳ್ಳಬಹುದೇ? ನೋಂದಣಿ ಪತ್ರ ಬರೆಯುವವರಿಗೆ ಭದ್ರತೆ ಇದೆಯೇ? ಅವರ ಸಂಭಾವನೆ ಪರಿಷ್ಕರಣೆಗೆ ಅವಕಾಶವಿದೆಯೇ?
- ಸದ್ಯಕ್ಕೆ ಅಕ್ರಮ-ಸಕ್ರಮ ಕಾನೂನು ಜಾರಿಯಲ್ಲಿಲ್ಲ. ಆದ್ದರಿಂದ ನೋಂದಣಿ ಸಾಧ್ಯವಿಲ್ಲ. ದಸ್ತಾವೇಜು ಪತ್ರ ಬರೆಯುವವರು ಲೈಸನ್ಸ್ ಪಡೆದ ಖಾಸಗಿ ವ್ಯಕ್ತಿ. ಹಾಗಿರುವಾಗ ಅವರಿಗೆಂತಹ ಭದ್ರತೆ? ಅವರ ಫೀ ಪರಿಷ್ಕರಣೆಗೆ ಕರ್ನಾಟಕ ಡೀಡ್ ರೈಟರ್ಸ್ ಲೈಸೆನ್ಸ್ ಕಾಯ್ದೆಯಡಿ ಅರ್ಜಿಯನ್ನು ಜಿಲ್ಲಾ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬಹುದು
ಯೋಗೇಶ್, ಅರಕಲಗೂಡು
ಮುಸ್ಲಿಮ್ ವಾರಸುದಾರರಿಗೆ ಜನ್ಮತಃ ಹಕ್ಕಿಲ್ಲ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ. ಪುಸ್ತಕಗಳು ಹಾಗೂ ತೀರ್ಪುಗಳಿದ್ದರೆ ತಿಳಿಸಿ. ನಾವು ಪಂಚಾಯ್ತಿ ಲೈಸನ್ಸ್ ಪಡೆದು ಕಟ್ಟಡ ಕಟ್ಟಲು ಹೋದರೆ ತಂಟೆ ತಕರಾರು ಮಾಡುತ್ತಾರೆ.
- ನೀವು ಪಂಚಾಯ್ತಿ ಲೈಸನ್ಸ್ ಪಡೆದಿದ್ದರೆ ಅದಕ್ಕೆ ಸೂಕ್ತ ರಕ್ಷಣೆ ನೀಡಲು ನ್ಯಾಯಾಲಯ ಹಾಗೂ ಪೊಲೀಸರಿಗೆ ಅರ್ಜಿ ನೀಡಿ. ಅಲ್ಲದೆ, ಇದಕ್ಕೆ ಸಂಬಂಧಪಟ್ಟ ಕಾನೂನು ಎಎಎ.ಫೈಜೀಯವರ 'ಔಟ್‌ಲೈನ್ಸ್ ಆಫ್ ಮಹಮ್ಮಡನ್ ಲಾ'- ಪಬ್ಲಿಶ್ಡ್ ಬೈ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ ಇದರ 13ನೇ ಅಧ್ಯಾಯ- ಸುನ್ನಿ ಲಾ ಆಫ್ ಇನ್‌ಹೆರಿಟನ್ಸ್. ಇದರಲ್ಲಿ ವಿಶದವಾಗಿ ಹೇಳಲಾಗಿದೆ. ಬರ್ಥ್ ರೈಟ್, ಎಸ್‌ಪಿಇಎಸ್ ಸಕ್ಸೆಷನ್ಸ್ “Islamic law does not recognise a birth-right: Rights of inheritance arise only on the death of a certain person...’’ ಇದಲ್ಲದೆ ಅನೇಕ ಪುಸ್ತಕಗಳಿದ್ದು ಮುಖ್ಯವಾಗಿ ಕೆಳಕಂಡ ಎರಡು ಪುಸ್ತಕಗಳು ಮುಖ್ಯವಾದವು.
1. D.F. Muna- Principles of Mohamadan Law.
2. F.B. Tyasji- Muslim Law.
ಇದನ್ನು ಆಧರಿಸಿ ನೀವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಈ ಪುಸ್ತಕಗಳಲ್ಲೇ ನಿಮಗೆ ಸಾಕಷ್ಟು ಕೋರ್ಟು ಸಿಗುತ್ತವೆ.
ಮರಳಿ ಪಡೆಯುವುದು ಸಾಧ್ಯವಿಲ್ಲ
ಎಂ.ಜಿ. ಪಾಟೀಲ್, ಬೆಳಗಾವಿ
(ರಂಕಲಕೊಪ್ಪ) ಟೆನೆಂಟ್ ಕಾಯ್ದೆಯಡಿ ಜಮೀನು ಕಳೆದುಕೊಂಡವರಿಗೆ ಆ ಜಮೀನು ಮರಳಿ ಪಡೆಯಲು ಅವಕಾಶವಿದೆಯೇ?
- ಭೂಸುಧಾರಣಾ ಕಾಯ್ದೆಯನ್ವಯ ಪ್ರಕರಣ ಅಖೈರಾಗಿ ಇತ್ಯರ್ಥವಾಗಿದ್ದರೆ ಈಗ ಅದನ್ನು ಮರಳಿ ಪಡೆಯುವ ಪ್ರಶ್ನೆಯೇ ಇಲ್ಲ.
ನೀವೇ ವಾದ ಮಂಡಿಸಬಹುದು
ಆರ್ ಮಂಜುನಾಥ, ಬಾವಿಕೆರೆ, ತರೀಕೆರೆ ತಾ.
ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ವಕೀಲರ ಮೂಲಕವೇ ಆಗಬೇಕೆ? ಸಮಸ್ಯೆಯ ಜತೆಗೆ ಪರಿಹಾರವನ್ನೂ ರೂಪಿಸಿ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಬಹುದೇ?
- ಪಿಐಎಲ್ ಸಲ್ಲಿಸಲು ವಕೀಲರೇ ಆಗಬೇಕೆಂದೇನೂ ಇಲ್ಲ. ಆದರೆ ಅರ್ಜಿ ಸಲ್ಲಿಸುವವರು ತಾವೇ ತಮ್ಮ ಪ್ರಕರಣದಲ್ಲಿ ವಾದ ಮಂಡಿಸಬೇಕು. ಪರಿಹಾರವನ್ನು ರೂಪಿಸಿ ಕೊಡಲು ಅವಕಾಶವಿದೆ.
- ಎಚ್.ಆರ್. ಕಸ್ತೂರಿರಂಗನ್