ಡಾ. ಗಜಾನನ ಶರ್ಮ ಅವರ 'ಮೈಸೂರು ವಿಶ್ವವಿದ್ಯಾಲಯದ ರೂವಾರಿ ಸರ್ ಎಂ. ವಿಶ್ವೇಶ್ವರಯ್ಯ' ಕೃತಿಗೆ ಎಸ್.ಎಲ್. ಭೈರಪ್ಪನವರು ಬರೆದ ಮುನ್ನುಡಿಯಿಂದ ಆಯ್ದ ಭಾಗ. ಅಂಕಿತ ಪ್ರಕಟಣೆಯ ಈ ಕೃತಿ ಹಾಗೂ ಟಿ.ಪಿ.ಅಶೋಕ ಅವರ 'ಸಾಹಿತ್ಯ ಸಮೃದ್ಧಿ' ಕೃತಿಗಳು ಇಂದು ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಯಾಗಲಿವೆ.
ಈ ವರ್ಷದ (2012) ಮಧ್ಯಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು, ವಿಶ್ವವಿದ್ಯಾಲಯವು ಸ್ಥಾಪನೆಯಾದ ನೂರನೇ ವರ್ಷದ ನೆನಪಿಗಾಗಿ ಅದರ ಸ್ಥಾಪನೆಗೆ ಕಾರಣರಾದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅದು ಸ್ಥಾಪನೆಯಾಗುವುದು ಸಂಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯವಶ್ಯವೆಂದು ಎಲ್ಲರಿಗೂ ಮನಗಾಣಿಸಿ, ಅದಕ್ಕೆ ವಿರುದ್ಧವಾಗಿದ್ದ ಮದರಾಸು ಪ್ರಾಂತದ ತಮಿಳರು ಮತ್ತು ಆ ಪ್ರಾಂತದ ನೇರ ಆಡಳಿತಗಾರರಾಗಿದ್ದ ಬ್ರಿಟಿಶರ ಹುನ್ನಾರಗಳನ್ನು ಭೇದಿಸಿ, ಭಾರತದ ಸರ್ವೋಚ್ಚ ಅಧಿಕಾರಿಯಾಗಿದ್ದ ವೈಸ್ರಾಯಿಯ ಸಮ್ಮತಿಯನ್ನು ಪಡೆದುಕೊಂಡು ವಿಶ್ವವಿದ್ಯಾಲಯವನ್ನು ಸಾಕಾರಗೊಳಿಸಿದ ದಿವಾನ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ನಿರ್ಣಯಿಸಿತ್ತು. ಈ ನಿರ್ಣಯವನ್ನು ಹಳೆಯ ಮೈಸೂರು ಸಂಸ್ಥಾನದ ಇಡೀ ಜನತೆಯು ಸ್ವಾಗತಿಸಿ ಸಂತೋಷಪಟ್ಟಿತ್ತು.
ಆದರೆ ಮೂವರು ವ್ಯಕ್ತಿಗಳು ತಮ್ಮವೇ ಆದ ಪ್ರತ್ಯೇಕ ಕಾರಣಗಳಿಂದ ಒಟ್ಟುಗೂಡಿ ಈ ನಿರ್ಣಯದ ವಿರುದ್ಧ ಪತ್ರಿಕಾ ಹೇಳಿಕೆಗಳ ಮೂಲಕ ಕಿರು-ಚಳವಳಿಯನ್ನು ಆರಂಭಿಸಿದರು. ಕಳೆದ ನಾಲ್ಕೈದು ವರ್ಷಗಳಿಂದ ಮಹಾರಾಜರ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ತಮ್ಮ ಜಾತಿಯ ಸಭೆಗಳಲ್ಲಿ ಮತ್ತು ಇತರ 'ಪ್ರಗತಿಪರ ವೇದಿಕೆ'ಗಳಲ್ಲಿ ಸಂಸ್ಥಾನದ ಸಮಸ್ತ ಅಭಿವೃದ್ಧಿಗೂ ಮಹಾರಾಜರು ಮಾತ್ರವೇ ಕಾರಣರು ಎಂಬ ಮತ್ತು ವಿಶ್ವೇಶ್ವರಯ್ಯನವರ ಜಾತಿಯವರು ಲೇಖನಗಳ, ಪುಸ್ತಕಗಳ ಹಾಗೂ ಪ್ರಚಾರ ಮಾಧ್ಯಮದ ಮೂಲಕ ವಿಶ್ವೇಶ್ವರಯ್ಯನವರೇ ಕಾರಣಪುರುಷರೆಂಬ ಮಿಥ್ಯಾಪ್ರಚಾರ ಮಾಡಿ ಮಹಾರಾಜರ ಪ್ರಖರತೆಯನ್ನು ಮಸಕುಗೊಳಿಸಿದ್ದಾರೆ ಎಂಬ ವಾದವನ್ನು ತೇಲಿಬಿಡುತ್ತಿದ್ದರು. ಈಗ ಅದೇ ವ್ಯಕ್ತಿಯು 'ಮಹಾರಾಜರು ಧಣಿ, ವಿಶ್ವೇಶ್ವರಯ್ಯನು ಸಂಬಳಕ್ಕೆ ಸೇರಿದ್ದ ನೌಕರ. ಧಣಿಯ ಅಪ್ಪಣೆಯಿಂದ ಕೆಲಸ ಮಾಡಿದ ನೌಕರನನ್ನೂ ಮತ್ತು ಧಣಿಯನ್ನೂ ಒಂದೇ ಎತ್ತರದಲ್ಲಿ ಜೊತೆಯಲ್ಲಿ ನಿಲ್ಲಿಸುವುದು ಅನ್ಯಾಯ. ಆದ್ದರಿಂದ ಅವರಿಬ್ಬರ ಪ್ರತಿಮೆಗಳನ್ನು ಒಟ್ಟಿಗೆ ನಿರ್ಮಿಸುವುದೂ ನಿಲ್ಲಿಸುವುದೂ ಖಂಡನೀಯ' ಎಂಬ ವಾದವನ್ನು ಮುಂದೆ ಮಾಡಿದರು. ಭಾರತದ ಇಂದಿನ ಅಧೋಗತಿಗೆ ಚಾತುರ್ವರ್ಣ್ಯವನ್ನು ಸ್ಥಾಪಿಸಿದ ಬ್ರಾಹ್ಮಣಜಾತಿಯ ಕುಟಿಲತೆಯೇ ಕಾರಣವೆಂದು ಸದಾ ಭಾಷಣಗಳಲ್ಲಿಯೂ ಲೇಖನಗಳಲ್ಲಿಯೂ ಪುನಃ ಪುನಃ ಪುನರಾವರ್ತಿಸುವ ಅಭ್ಯಾಸದ ಇನ್ನೊಬ್ಬ ವ್ಯಕ್ತಿಯೂ 'ಬ್ರಾಹ್ಮಣ ಲೇಖಕರು ಮತ್ತು ದಾಖಲೆದಾರರು ವಿಶ್ವೇಶ್ವರಯ್ಯನ ಚಿತ್ರವನ್ನು ಮಿಥ್ಯಾಪ್ರಮಾಣದಲ್ಲಿ ಬೆಳೆಸಿ ನಿಲ್ಲಿಸಿದ್ದಾರೆ. ಅದನ್ನು ಸರಿಪಡಿಸಬೇಕು ಎಂದು ವಿಶ್ವೇಶ್ವರಯ್ಯನವರನ್ನು ಅನ್ನದಾತರೆಂದು ಸದಾ ಗೌರವಿಸುತ್ತಿರುವ ಮಂಡ್ಯ ಪ್ರಾಂತದ ಸ್ವಬಾಂಧವರ ಮನಸ್ಸನ್ನು ತಿರುಗಿಸುವ ಪ್ರಯತ್ನವನ್ನು ಕೆಲವು ವರ್ಷಗಳಿಂದ ಮಾಡುತ್ತಿರುವವರು. ಅವರೂ ಸಿಂಡಿಕೇಟ್ ನಿರ್ಣಯದ ವಿರುದ್ಧದ ತ್ರಿಮೂರ್ತಿಗಳಲ್ಲಿ ತತ್‌ಕ್ಷಣ ಒಬ್ಬರಾದರು. ತ್ರಿಮೂರ್ತಿಗಳಲ್ಲಿ ಮತ್ತೊಬ್ಬರು ಇಡೀ ಭಾರತದ ಇತಿಹಾಸವನ್ನು ದಲಿತರಿಗೆ ಆದ ಅನ್ಯಾಯದ ಏಕಮೇವ ದೃಷ್ಟಿಯಿಂದ ನೋಡುವವರು. ಸಮಸ್ತ ದಲಿತರನ್ನೂ ಉಳಿದ ವರ್ಗಗಳ ಮಟ್ಟಕ್ಕೆ ಎತ್ತರಿಸುವವರೆಗೆ ಮೀಸಲಾತಿ ಇರಬೇಕೆಂಬ ಮತ್ತು ಮೀಸಲಾತಿಯ ಏಕೈಕ ಮಾರ್ಗದಿಂದ ದಲಿತರ ಏಳ್ಗೆಯಾಗಬೇಕೆಂಬ ಸಿದ್ಧಾಂತವನ್ನು ಸದಾ ಪ್ರತಿಪಾದಿಸುವವರು. ಮೀಸಲಾತಿಯ ವಿರೋಧದ ಏಕದೃಷ್ಟಿಯಿಂದಲೇ ರಾಜೀನಾಮೆ ನೀಡಿದರೆಂಬ ಆಧಾರಹೀನ ಗ್ರಹಿಕೆಯಿಂದ ವಿಶ್ವೇಶ್ವರಯ್ಯನವರ ನೆನಪಿನ ನೆರಳನ್ನು ಕೂಡ ಸಹಿಸದವರು.
ಒಟ್ಟಿನಲ್ಲಿ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಸ್ಥಾಪಿಸಿದರೆ ಹೋರಾಟ ಮಾಡುವುದಾಗಿ ಈ ಮೂವರೂ ಧಮಕಿ ಹಾಕಿದರು. ವಿಶ್ವವಿದ್ಯಾಲಯವು- ಎಂದರೆ ಅದರ ಆಡಳಿತದ ಕುರ್ಚಿಯಲ್ಲಿ ಕುಳಿತವರು- ಈ ಧಮಕಿಗೆ ಮಣಿದರು. ಅವರಿಗೂ ಧಮಕಿಕಾರರ ಜೋರಿನೊಡನೆ ಒಳಗೇ ಸಹಾನುಭೂತಿ ಇದ್ದಿರಲೂಬಹುದು. ಮೈಸೂರು ನಗರದ ಕೆಲವರು ಗಣ್ಯರು ವಿಶ್ವವಿದ್ಯಾಲಯದ ಮೊತ್ತಮೊದಲ ಘಟಿಕೋತ್ಸವದಲ್ಲಿ ಸ್ವಯಂ ಮಹಾರಾಜರೇ ವಿಶ್ವೇಶ್ವರಯ್ಯನವರ ಧೈರ್ಯ ಸಾಹಸ ಪ್ರಯತ್ನಗಳಿಲ್ಲದಿದ್ದರೆ ಈ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ, ಇದರ ಅಸ್ತಿತ್ವದ ಕೀರ್ತಿಯು ವಿಶ್ವೇಶ್ವರಯ್ಯನವರಿಗೆ ಸಲ್ಲಬೇಕು- ಎಂದು ಮುಕ್ತಮನಸ್ಸಿನಿಂದ ಹೇಳಿದ ಮಾತುಗಳ ಮುದ್ರಿತ ಪ್ರತಿಗಳನ್ನು ಕುರ್ಚಿಯಲ್ಲಿ ಕುಳಿತವರಿಗೆ ತೋರಿಸಿ ವಿನಂತಿಸಿದರು. ಹಲವರು ಪತ್ರಿಕೆ ಗಳಲ್ಲಿಯೂ ಆಧಾರಗಳನ್ನು ಕೊಟ್ಟು ಲೇಖನಗಳನ್ನು ಬರೆದರು. ಆದರೆ ಕುರ್ಚಿಯವರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ. ಆಡಳಿತದ ಕುರ್ಚಿಗೆ ಧಮಕಿದಾರರೊಡನೆ ಒಳಗೇ ಒಡಂಬಡಿಕೆ ಏನಾದರೂ ಇದ್ದಿತೇ ಎಂಬ ಅನುಮಾನವು ಇದರಿಂದ ಗಟ್ಟಿಯಾಗುತ್ತದೆ.
ಡಾ. ಗಜಾನನ ಶರ್ಮ ಅವರು 'ಮೈಸೂರು ವಿಶ್ವವಿದ್ಯಾಲಯದ ರೂವಾರಿ ಸರ್ ಎಂ. ವಿಶ್ವೇಶ್ವರಯ್ಯ' ಶೀರ್ಷಿಕೆಯ ಈ ಕೃತಿಯನ್ನು ಬರೆಯಬೇಕಾಗಿಬಂದ ಸಂದರ್ಭ ಇದು. ಸತ್ಯೇತರ ಉದ್ದೇಶಗಳಿಂದ ರಾಗದ್ವೇಷಗಳನ್ನು ತುಂಬಿಕೊಂಡವರು ಎಷ್ಟಾದರೂ ಗದ್ದಲ ಮಾಡಲಿ, ಪ್ರಾಮಾಣಿಕ ಇತಿಹಾಸಕಾರನ ನಿರ್ಲಿಪ್ತತೆಯಿಂದ ಸಮಸ್ತ ಆಕರಗಳೊಡನೆ ಸತ್ಯವನ್ನು ದಾಖಲಿಸುವುದರಲ್ಲಿ ಮಾತ್ರ ಈ ಕೃತಿಯು ಆಸಕ್ತವಾಗಿದೆ. ಪ್ರತಿಯೊಂದು ಗ್ರಂಥದ ಹುಟ್ಟಿಗೂ ಒಂದು ಸಂದರ್ಭ ಇರುತ್ತದೆ. ಹಾಗೆಯೇ ಪ್ರತಿಯೊಂದು ಮಾತಿಗೂ ಅದನ್ನಾಡುವ ಪಾತ್ರ ಮತ್ತು ಸಂದರ್ಭಗಳನ್ನು ತಿಳಿಯುವುದು ಅವಶ್ಯವಿದೆ. ನಾವೆಲ್ಲ ಪ್ರೌಢಶಾಲೆಯಲ್ಲಿ ಓದುವಾಗ, ಸಾಹಿತ್ಯ ಪಾಠಗಳ ಪರೀಕ್ಷೆಯಲ್ಲಿ 'ಇದನ್ನು ಯಾರು, ಯಾರಿಗೆ, ಯಾವ ಸಂದರ್ಭದಲ್ಲಿ ಹೇಳಿದರು?' ಎಂಬ ತಲಾ ಎರಡೆರಡು ಅಂಕಗಳ ಐದಾದರೂ ಪ್ರಶ್ನೆಗಳು ಇರುತ್ತಿದ್ದವು.
ತಾತ್ಪರ್ಯವೆಂದರೆ- ಸಂದರ್ಭ ಮತ್ತು ಪಾತ್ರಗಳ ಅಂತರಂಗವನ್ನು ವಿಶ್ಲೇಷಿಸದೆ ಸಾಹಿತ್ಯವು ಅರ್ಥವಾಗುವುದಿಲ್ಲ. ಹಾಗೆಯೇ ಸಾಂದರ್ಭಿಕತೆಯ ಅರಿವು ಇಲ್ಲದಿದ್ದರೆ ಜೀವನವಾಗಲಿ ಇತಿಹಾಸವಾಗಲಿ ಸಮಕಾಲೀನ ಸಾಮಾಜಿಕ ಸನ್ನಿವೇಶಗಳಾಗಲಿ ತಿಳಿಯುವುದಿಲ್ಲ. ವಿಶ್ವೇಶ್ವರಯ್ಯನವರ ಪ್ರತಿಮೆಯ ಸ್ಥಾಪನೆಯನ್ನು ವಿರೋಧಿಸಿದ ಮೂರು ಪಾತ್ರಗಳು ಮೂರು ಸಾಮಾಜಿಕ ಸಂದರ್ಭ ಮತ್ತು ಪ್ರವೃತ್ತಿಗಳನ್ನು ವ್ಯಕ್ತಪಡಿಸುತ್ತವೆ. ಹಾಗೆಯೇ ಇಂಥ ಪ್ರವೃತ್ತಿಗಳನ್ನು ವಿರೋಧಿಸಿ ಸತ್ಯವನ್ನು ಗೌರವಿಸದಿರುವ ಆಡಳಿತವೂ ನಮ್ಮ ಸಮಕಾಲೀನ ಭಾರತದ ಅಧಿಕಾರದ ಒಳಚಲನೆಯ ಪ್ರತೀಕವಾಗಿದೆ. ಈ ಪ್ರವೃತ್ತಿ ಮತ್ತು ಒಳಚಲನೆಯನ್ನು ವಿಶ್ಲೇಷಿಸುವುದು ಅವಶ್ಯವಾಗಿದೆ.
- ಎಸ್.ಎಲ್. ಭೈರಪ್ಪ