ಸಾಪ್ತಾಹಿಕಪ್ರಭ

ಛೀ ಕಳ್ಳಾ... ಓನ್ ಮಾತ್ತಾ ಇದೀಯಾ...?

ಪಕ್ಕನೆ ನೋಡಿದರೆ ಅದು ಜೇನ ಹುಟ್ಟಿನಿಂದ ಜಾರುತ್ತಿರುವ ತುಪ್ಪ. ನುಣುನುಣುಪು ಸೇಬುಗಲ್ಲದ ಕೆಂಪಿನ ಮೇಲೆ ಬೊಚ್ಚುಬಾಯಿಂದ ಜೊಲ್ಲು ಜಾರಿ ಬರುತ್ತಿದ್ದರೆ ಹಾಗೆಯೇ ಬಿಗಿದಪ್ಪಿ ಮುದ್ದಾಡಿಬಿಡಬೇಕೆಂಬ ಬಯಕೆ ಹುಟ್ಟದಿದ್ದವ ಪಾಪಿ. ಅಲ್ಲಿ ಸೌಂದರ್ಯ ದೇವತೆಯ ಸಾಕ್ಷಾತ್ಕಾರ. ಹೊಳೆವ ಬಟ್ಟಲು ಕಂಗಳ ಚಮತ್ಕಾರ. ಬಯಸಿಬಯಸಿ ಪಡೆದ ಅದು ಪುಟವಿಟ್ಟ ಬಂಗಾರ. ಅದೆಷ್ಟು ಮುದ್ದು!  
=
ಅಯ್ಯೋ ನನ್ನದೇ ದೃಷ್ಟಿ ತಾಕಿಬಿಟ್ಟಿತೇನೋ? ಹಾಗಲ್ಲದಿದ್ದರೆ ಅಂಬೆಗಾಲಿಕ್ಕುತ್ತಿದ್ದ ಚಿನ್ನಾರಿಗೆ ಅದೇನಾಗಿ ಹೋಯಿತು? ಇದ್ದಕ್ಕಿದ್ದ ಹಾಗೆ ಮುಗ್ಗರಿಸಿಕೊಂಡುಬಿಟ್ಟಳಲ್ಲಾ! ಅಯ್ಯೋ, ಉಸಿರು ತೆಗೆದುಕೊಳ್ಳುತ್ತಲೇ ಇಲ್ಲ. ಮುಖ ಕಪ್ಪಿಟ್ಟು ಹೋಯಿತು. ದೇವರೇ, ನನ್ನ ಕಂದಮ್ಮನಿಗೆ ಏನಾಗಿಹೋಯಿತು? ಬೆನ್ನು ನೀವಿದರೂ ಸದ್ದಿಲ್ಲ. ಚಿನ್ನಮ್ಮಾ, ಅತ್ತಾರೂ ಅತ್ತುಬಿಡೆ ತಾಯಿ! ಛೆ, ನಾನೆಷ್ಟು ಬೇಜವಾಬ್ದಾರಿ. ನೋಡನೋಡುತ್ತಿದ್ದಂತೆಯೇ ಮಗುವನ್ನು ಬೀಳಿಸಿಬಿಟ್ಟೆನಲ್ಲಾ. ಕಾಲಮೇಲೆ ಮಕಾಡೆ ಮಲಗಿಸಿಕೊಂಡಾದರೂ ತಿಕ್ಕುತ್ತೇನೆ. ಇಲ್ಲ ನನರಾಣಿ, ಒಂದೇ ಒಂದುಬಾರಿ ಅತ್ತುಬಿಡು. ನಿನ್ನ ದಮ್ಮಯ್ಯ ಮಗಳೇ, ಇನ್ನೆಂದೂ ನಿನ್ನ ನೋಯಗೊಡುವುದಿಲ್ಲ. ಅಯ್ಯೋ! ಕ್ಷಣದ ಹಿಂದೆ ಜೇನು ಉಕ್ಕಿಸುತ್ತಿದ್ದ ತೊಂಡೆತುಟಿಗಳು ಬಿರಿದು ರಕ್ತ ಒಸರುತ್ತಿದೆ. ಎಷ್ಟು ನೋವಾಗುತ್ತಿದೆಯೋ ನನ್ನ ಕಂದಮ್ಮನಿಗೆ. ಸ್ವಲ್ಪ ಸಕ್ಕರೆಯನ್ನಾದರೂ ತಿನ್ನಿಸುತ್ತೇನೆ. ಆ...ಆ... ಎಲ್ಲಿ ಚಿನ್ನಾರಿ ಸ್ವಲ್ಪ ಬಾಯಿ ಕಳೆದುಬಿಡು, ಆ....ಆ....ಹಾಗೆ....ಹೋಯ್ತು ನನ್ನವ್ವ. ಹೊರಟೋಯ್ತು. ಆ ನೆಲಕ್ಕೆ ಬುದ್ಧೀನೇ ಇಲ್ಲ. ಅದಕ್ಕೆ ಹತ್ತ ಮಾಡಿಬಿಡುತ್ತೇನೆ. ಓಹೋ, ಏನು ಸೊಕ್ಕು. ನನ್ನ ಪುಟಾಣಿಗೆ ನೋವಾಗುತ್ತೆ ಅಂತ ಗೊತ್ತಿಲ್ವಾ? ಇನ್ನೊಂದು ಸಾರಿ ನನ್ನ ಮುದ್ದುಗೆ ನೋವು ಮಾಡಿ ನೋಡು ಏನ್ ಮಾಡ್ತಿನಿ ಅಂತ. ಅಬ್ಬಬ್ಬಾ... ಹೊರಟೋಯ್ತು ಮುನ್ನಾಲಿ, ಅದಾ... ಅಲ್ಲಿ ನೋಡು ಚಂದಮಾಮ ತೋರಿಸ್ಲಾ ನಿನಗೇ? ನೋಡು, ನೋಡು. ಚಂದಮಾಮ ನಿನ್ನನ್ನೇ ನೋಡ್ತಿದಾನೆ. ಚಂದಮಾಮನ್ನ ಕರಿ ಮರಿ. ಚಂದಮಾಮಾ ಬಾಬಾ, ಚಕ್ಕುಲಿ ಮಾಮ ಬಾಬಾ...ಹ್ಞಾಂ ಸಿಕ್ಕೆ ಬಿಟ್ಟ ಚಂದಮಾಮ. ಆಹಾ, ನನ್ನ ಕಂದಮ್ಮನ ಮುಖಕ್ಕೆ ಬಂದು ಕುಳಿತುಬಿಟ್ಟನಲ್ಲಾ...
=
ಅಮ್ಮನ ಸಂತೈಕೆ ಮುಂದುವರಿಯುತ್ತಿದ್ದಂತೆ ಮಗುವಿನ ನೋವು ಕರಗಿ ಹೋಗಿತ್ತು. ಅಳು ಮರೆಯಾಗಿತ್ತು. ಹಾಲುಚೆಲ್ಲಿದ ಬೆಳದಿಂಗಳು ಮುಖದ ಮೇಲೆ ಪ್ರತಿಫಲಿಸುತ್ತಿದ್ದಂತೆಯೇ ಅಳುವಿನ ಸ್ಥಾನವನ್ನು ಕೇಕೆ ಆಕ್ರಮಿಸಿಕೊಂಡಿತ್ತು. ಆ ಅನುಭೂತಿಯಲ್ಲಿ ಅಮ್ಮ ಕಳೆದು ಹೋಗಿದ್ದಳು. ಪುಟ್ಟ ಪುಟ್ಟ ಕೈಗಳನ್ನು ಎತ್ತಿ ಚಂದಮಾಮನನ್ನು ಕರೆಯುವ ಪ್ರಯತ್ನನಿರತವಾಗಿದ್ದ ಮಗುವಿನ ಕಂಕುಳಿಗೆ ಮೆಲ್ಲನೆ ಕಚಗುಳಿ ಇಟ್ಟಿದ್ದೇ ತಡ, ಸುತ್ತಲೆಲ್ಲ ಕಿಲಕಿಲ. ತುಸು ಹೊತ್ತು ಅಲ್ಲಿಯೇ ಆಟವಾಡಿಸಿಕೊಂಡಿದ್ದು, ನಿಧಾನಕ್ಕೆ ಒಳ ಕರಕೊಂಡು ಬಂದಾಗ ನೆಮ್ಮದಿಯ ನಿಟ್ಟುಸಿರು. ಇನ್ನು ಹೆಚ್ಚು ಹೊತ್ತು ಮಗು ಎಚ್ಚರ ಇರಲಾರದು. ಅತ್ತೂ ಅತ್ತೂ ಸುಸ್ತಾಗಿದೆ. ಮತ್ತೆ ಹಸಿವೆಯಲ್ಲೇ ನಿದ್ದೆಗೆ ಜಾರಿಬಿಟ್ಟೀತು, ಹಸಿವಿನಲ್ಲಿ ಇನ್ನಷ್ಟು ರಚ್ಚೆ ಹಿಡಿದುಬಿಟ್ಟೀತು ಎಂಬ ಮುನ್ನೆಚ್ಚರಿಕೆ ಮನದಲ್ಲಿ ಸುಳಿದದ್ದೇ ತಡ ಲಗು ಬಗೆಯಿಂದ ಅಮ್ಮ ಮಗುವನ್ನು ಸೊಂಟದಲ್ಲಿ ಚಚ್ಚಿಕೊಂಡೇ ಮಣ್ಣಿ ಸಿದ್ಧಪಡಿಸಲಾರಂಭಿಸಿದಳು. ಮುದ್ದುಮುದ್ದು ಭಾಷೆಯಲ್ಲಿ ಮಗುವನ್ನು ಮಾತನಾಡಿಸಿಕೊಳ್ಳುತ್ತಲೇ ಮಣ್ಣಿ ಕಲೆಸುವುದನ್ನು ತನ್ಮಯದಿಂದ ಮಗು ನೋಡುತ್ತಲೇ ಇತ್ತು.
=
ನನ್ನ ಚಿನ್ನುಮರಿ ಈಗ ಮಮ್ಮು ತಿನ್ನಬೇಕಲ್ಲಾ... ಅಮ್ಮ ಚೆಂದಚೆಂದ ಮಾಡಿ ಶಿಯ್ಯ ಮಮ್ಮು ತಿನ್ನಿಸ್ತೀನಿ. ಜಾಣಮರಿ ಆಗಿ ಈಗ ಮಮ್ಮು ತಿಂದು ತೊಟ್ಟಿಲಲ್ಲಿ ಜೋಯಿ ಮಾಡಿಬಿಡಬೇಕು. ನನ್ನ ಕಂದ ಮರಿಗೇ ಎಲ್ಲ. ಇಲ್ಲಾ ಅಂದ್ರೆ ಬೆಕ್ಕು ಬಂದು ತಿನ್ಕೊಂಡು ಹೋಗಿಬಿಡುತ್ತೆ. ಕಾಕಕ್ಕ ಬಂದು ಕಚ್ಚಿಕೊಂಡು ಹೋಗಿ ಬಿಡುತ್ತೆ. ಅವಕ್ಕೆಲ್ಲಾ ಕೊಡೋದೇ ಬೇಡ ಚಿನ್ನಮ್ಮಾ. ಎಲ್ಲನೂ ತಿಂದು ಬಿಡು. ಎಲ್ಲಿ...ಆ, ಆ...ಅನ್ನು...ಹ್ಞಾಂ ಹಾಗೇ. ಏಯ್, ಪೋಲಿ, ಬಾಯಲ್ಲಿ ಮಮ್ಮು ಇಟ್ಕೊಂಡು ಪುರ್ರ್ ಅನ್ತಿಯಾ. ಅಮ್ಮನ ಮುಖಕ್ಕೆಲ್ಲಾ ಹಾರಿ ಬಿಡ್ತಲ್ಲೋ. ಛೀ, ತುಂಟ, ಹಾಗೆಲ್ಲಾ ಮಾಡ್ಬಾರದು. ಏಟು, ಏಟು ಕೊಡ್ತಿನಿ. ಗೊಗ್ಗಯ್ಯನ್ನ ಕರೀತಿನಿ. ಏ ಗೊಗ್ಗಯ್ಯಾ ಬಾ, ನನ್ನ ಮುದ್ದು ಮಮ್ಮು ತಿನ್ನಲ್ಲಾ. ಕರಕೊಂಡುಹೋಗಿಬಿಡು. ನೋಡಿದ್ಯಾ, ಅಯ್ಯಯ್ಯೋ ಗೊಗ್ಗಯ್ಯ ಬಂದು ಬಿಡ್ತಾನೆ. ತಿಂದು ಬಿಡು ಮತ್ತೆ. ಸಾಕಾ, ಹೋಗ್ಲಿಬಿಡು. ಬಾಯೆಲ್ಲಾ ಒರೆಸಿ ತಾಚಿ ಮಾಡಿಸ್ತೀನಿ. ಅಮ್ಮ ಹಾಡು ಹೇಳ್ತೀನಿ. ಈಗ ನನ್ನ ರಾಣಿ ಪಾಚಿಕೊಂಡುಬಿಡಬೇಕು. ಲಾಲೀ...ಲಾಲಿ...
=
ಇನ್ನೇನು ಗೊಂಬೆಯ ಜೊತೆಗೆ ಅಮ್ಮನ ಆಟವಾಡುತ್ತಿದ್ದ ಆ ಪುಟ್ಟಿಗೂ ನಿದ್ದೆ ಹತ್ತುವುದರಲ್ಲಿತ್ತು. ಮಗಳ ಗೊಂಬೆಯ ಆಟವನ್ನೇ ತದೇಕ ಚಿತ್ತದಿಂದ ಗಮನಿಸುತ್ತಾ ನಸುನಗುತ್ತಿದ್ದ ಅಮ್ಮ ಥಟ್ಟನೆ ವಾಸ್ತವಕ್ಕೆ ಬಂದಳು. ಸಾಕು ಚಿನ್ನಮ್ಮಾ ಆಟ. ಪಾಪುಗೊಂಬೆ ಮಲಗಿದೆ ಅಲ್ವಾ, ನೀನು ಬಂದು ಊಟ ಮಾಡಿ ಹೋಗಿ ಅದರ ಜೊತೆಗೇ ತಾಚಿ ಮಾಡಿಬಿಡು ಬಂಗಾರ. ಪ್ಲೀಸ್ ಹಸಕೊಂಡೇ ಮಲಗಬೇಡ ಪುಟ್ಟಾ, ಹೋಗ್ಲಿ ಅಮ್ಮನೇ ಊಟ ಮಾಡಿಸಿಬಿಡ್ಲಾ? ಇಲ್ಲಾಂದ್ರೆ ಆವಾಗ ಗೊಂಬೆಗೆ ಕರದಿದ್ಯಲ್ಲಾ ಅದೇ ಗೊಗ್ಗಯ್ಯ ಬಂದುಬಿಡ್ತಾನೆ... ಬೇಗ ಬಾ ನನ್ನಮ್ಮಾ... ಮತ್ತೆ ರಮಿಸಲು ಆರಂಭ.
ಈ ಬಾರಿ ಅದು ಗೊಂಬೆ ಆಟ ಆಗಿರ್ಲಿಲ್ಲ. ನಿಜವಾದ ಅಮ್ಮನ ಸರದಿ. ಗೊಂಬೆ ಜಾಗದಲ್ಲಿ ಪುಟ್ಟಿ ಇದ್ಲು ಅಷ್ಟೆ. ಹೀಗೇ ಬೆಳಗು ರಾತ್ರಿಗಳಾಗುತ್ತಿದ್ದವೇ ಹೊರತು ದಿನ ಹೋದದ್ದು ಮಾತ್ರ ಗೊತ್ತಾಗುತ್ತಿರಲಿಲ್ಲ.

- ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!