ಆಧುನಿಕ ಮಹಿಳೆಯ ಪಾರಮ್ಯ ಆರಂಭವಾಗಿ ಬಹುದಿನಗಳಾದವು. ಶಿಕ್ಷಿತ ವರ್ಗದಲ್ಲಿ ಇದು ಸಾಮಾನ್ಯ ಸಂಗತಿ. ಆದರೆ ಹೆಚ್ಚು ಕಲಿತಿರದ ಹಾಗೂ ಅನಕ್ಷರಸ್ಥ ಮಹಿಳೆಯರು ಗಂಡಸರಿಗೆ ಮೀಸಲಾದ ಕೆಲಸಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತ, ಪುರುಷರಿಗೆ ಸರಿಸಮಾನರಾಗಿ, ಕೆಲವೊಮ್ಮೆ ಪುರುಷರಿಗಿಂತ ಹೆಚ್ಚೇ ದುಡಿಯುವ ದೃಶ್ಯ ಅಪರೂಪ. ಇಂತಹ ಕಷ್ಟಸಹಿಷ್ಣು, ಶ್ರಮಿಕ, ಸ್ವಾಭಿಮಾನೀ ಸ್ತ್ರೀಯರ ದಂಡೇ ಕಾರವಾರದಲ್ಲಿದೆ!
ನಿಜ, ಕಡಲ ಕಿನಾರೆಯ ಸುಂದರ ನಗರಿ ಕಾರವಾರ ಕೇವಲ ಅದ್ಭುತ ನೈಸರ್ಗಿಕ ತಾಣವೊಂದೇ ಅಲ್ಲ. ಅದು ಕ್ರಿಯಾಶಾಲಿ ಹಾಗೂ ಉತ್ಸಾಹೀ ಮಹಿಳೆಯರ ಬೀಡೂ ಸಹ.
ಮೀನುಗಾರಿಕೆಯಲ್ಲಿ ಮುಂಚೂಣಿ
ಮೀನುಗಾರಿಕಾ ಕೈಂಕರ್ಯ ಕಾರವಾರದ ಮೂಲನಿವಾಸಿಗಳ ಪ್ರಮುಖ ಕಸುಬು. ಸರಿಸುಮಾರು 50 ವರ್ಷಗಳ ಹಿಂದಿನವರೆಗೂ ಇಲ್ಲಿನ ಮಹಿಳೆಯರು ಕೂಡ ಕಾಳಿನದಿಗೆ ತೆರಳಿ ಮೀನು ಹಿಡಿದು ತರುತ್ತಿದ್ದರಂತೆ. ಇದೀಗ ಇಂಥವರ ಸಂಖ್ಯೆ ವಿರಳವಾಗಿದ್ದು, ಬದಲಾಗಿ ಮೀನು ಮಾರುವ ಪ್ರಕ್ರಿಯೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ತೊಡಗಿಕೊಂಡಿದ್ದಾರೆ. ದೋಣಿಗಳಿಂದ ಮೀನು ಖರೀದಿಸಿ, ಬುಟ್ಟಿಗಳಲ್ಲಿಟ್ಟುಕೊಡು ಮಾರುವ ಸ್ತ್ರೀಯರ ದೃಶ್ಯ ಕಾರವಾರದಲ್ಲಿ ಸರ್ವೇಸಾಮಾನ್ಯ. ಇದಲ್ಲದೇ, ಎದೆಮಟ್ಟದ ನೀರಿನಲ್ಲಿ ಮುಳುಗಿ ತೀರಪ್ರದೇಶಗಳಿಂದ ಚಿಪ್ಪಿಕಲ್ಲುಗಳನ್ನು ಆಯ್ದುತಂದು ಬೀದಿಬೀದಿ ಸುತ್ತಿ ಮಾರಾಟಮಾಡುವ ಕೆಲಸವೂ ಇಲ್ಲಿನ ಸ್ತ್ರೀಯರದೇ ಆಗಿದೆ.
ಸೈಕಲ್ ಸವಾರಿಗೂ ಸೈ
ಶಾಲಾ-ಕಾಲೇಜು ಕನ್ಯೆಯರು ಸೈಕಲ್ ತುಳಿಯುವದು ಇಂದು ಎಲ್ಲ ಕಡೆಗಳಲ್ಲಿ ಸಾಮಾನ್ಯ. ಆದರೆ ಸೀರೆಯುಟ್ಟ ನಾರಿಯರು ಸೈಕಲ್ ಸವಾರಿ ಮಾಡುವುದು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅಪರೂಪ. ಕಾರವಾರದ ರಸ್ತೆಗಳಲ್ಲಿ ಮಹಿಳೆಯರು ಸೀರೆ ಧರಿಸಿ ಸೈಕಲ್ ಓಡಿಸುವ ದೃಶ್ಯ ಪದೇ ಪದೇ ಕಂಡುಬರುತ್ತದೆ. ಮನೆಗೆಲಸ, ಕಾರ್ಪೋರೇಶನ್ ಕಾರ್ಯ ಮೊದಲಾದವುಗಳನ್ನು ನಿರ್ವಹಿಸುವ 40-50 ವಯಸ್ಸಿನ ಸ್ತ್ರೀಯರು ಸೈಕಲ್ ಮೂಲಕವೇ ಕ್ರಮಿಸಿ, ತಮ್ಮ ಹಣ ಹಾಗೂ ಆರೋಗ್ಯಗಳನ್ನು ವೃದ್ಧಿಸಿಕೊಳ್ಳುವದರೊಂದಿಗೆ, ಕಾರವಾರದ ವಾತಾವರಣ ಶುದ್ಧಿಗೂ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಲ್ಲವೆ?
ತರಕಾರಿ ಸಂತೆ
ಇನ್ನು, ಸ್ಥಳೀಯ ಸ್ತ್ರೀಯರು ಥರ-ಥರದ ತರಕಾರಿಗಳನ್ನು ಬೆಳೆಯುವಲ್ಲಿ ಸಿದ್ಧಹಸ್ತರು. ಕಾರವಾರದ ಕಡವಾಡ, ಸುಂಕೇರಿ, ಚೆಂಡೀಯ ಮೊದಲಾದೆಡೆ ವಿವಿಧ ತರಕಾರಿಗಳನ್ನು ಸ್ವಂತಶ್ರಮದಿಂದ ಬೆಳೆಯುವದಷ್ಟೇ ಅಲ್ಲದೇ ರಸ್ತೆಬದಿಗಳಲ್ಲಿಟ್ಟು ಮಾರುವವರೂ ಇಲ್ಲಿನ ಮಹಿಳೆಯರೆ. ನಗರದ ಶಿವಾಜಿ ವ್ರತ್ತ, ಸುಭಾಶ ವ್ರತ್ತ, ಸವಿತ ಹೋಟೆಲ್ ಬಳಿ ಹೀರೆಕಾಯಿ, ಪಡುವಲಕಾಯಿ, ಮಡಹಾಗಲಕಾಯಿ, ಕರಿಕೆಸು, ಮೊಟ್ಟೆಕೆಸು, ದಂಟು ಕೆಸು, ನೀರುಹಲಸು, ಬೇರುಹಲಸು, ಕತ್ತಿಅವರೆ, ಸೊಡಿಗೆ, ಸ್ಥಳೀಯ ಬದನೆ, ಬಿಳಿ ಬೆಂಡೆ, ಬಸಳೆಸೊಪ್ಪು, ಬಿಳಿಹರಿವೆ ಸೊಪ್ಪು, ಕೆಂಪುಹರಿವೆ ಸೊಪ್ಪು, ಮಳೆಗಾಲದಲ್ಲಿ ಮಚಳೆ ಸೊಪ್ಪು... ಮೊದಲಾದ ಅತ್ಯಪರೂಪದ ತರಕಾರಿಗಳು ಇವರಲ್ಲಿಯೇ ಲಭ್ಯವಾಗುವದು ವಿಶೇಷ. ವರ್ಷಪೂರ್ತಿ ರಸ್ತೆಬದಿಯಲ್ಲಿಯೇ ಮಳೆಬಿಸಿಲೆನ್ನದೆ ತರಕಾರಿ ಮಾರುವ ಸುಮಾರು 15 ಸ್ಥಳೀಯ ಮಹಿಳೆಯರಿದ್ದಾರೆ. ಇವರ ಬಳಿ ಒಮ್ಮೊಮ್ಮೆ ತರಕಾರಿಯ ಜತೆ ನಾಟಿಕೋಳಿ, ಮೊಟ್ಟೆ, ಜೇನುತುಪ್ಪ, ಮುರುಗಲು, ಕರಬಲು, ಅವಳೆ ಕಾಯಿ, ನೆಲ್ಲಿ ಕಾಯಿ, ಹಸಿ ಗೇರು ಬೀಜ ಸುಲಿದಿದ್ದು, ಇಬ್ಬುಡಲ ಹಣ್ಣು, ತೆಂಗಿನ ಕಾಯಿ ದೊರೆಯುತ್ತವೆ.
ಬೆಳಗ್ಗೆ 8ಗಂಟೆಗೂ ಮೊದಲೇ ತಮ್ಮ ತರಕಾರಿ ವ್ಯವಹಾರ ಪ್ರಾರಂಭಿಸುವ ಇಲ್ಲಿನ ಮಹಿಳೆಯರು ರಾತ್ರಿ 9ರ ತನಕವೂ ತರಕಾರಿಗಳನ್ನು ಮಾರುತ್ತಾರೆ. ಇವರನ್ನು ಆತ್ಮೀಯವಾಗಿ ಮಾತನಾಡಿಸಿ ಕುಟುಂಬದ ಕುರಿತಾಗಿ ವಿಚಾರಿಸಿದರೆ ಕುಡುಕಗಂಡ, ಕಿತ್ತು ತಿನ್ನುವ ಬಡತನ, ಗಂಡನನ್ನು ಕಳೆದುಕೊಂಡು ಸಂಸಾರದ ನೊಗ ಹೊತ್ತಿರುವ ವಿಷಯ ಬೆಳಕಿಗೆ ಬರುತ್ತದೆ. ಏನೇ ಆಗಲಿ, ನಾವಂತೂ ಓದಿಲ್ಲ, ತರಕಾರಿ ಮಾರಿಯಾದರೂ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತೇವೆ ಎಂದೆನ್ನುವಾಗ ಇವರ ಬಗ್ಗೆ ಅಭಿಮಾನವುಕ್ಕಿ ಬರುವದು ಖಂಡಿತ.
ಕಟ್ಟಿಗೆ ಸಂಗ್ರಹಣೆ ನಿಸ್ಸೀಮರು
ಕಾರವಾರವೆಂಬುದು ಕರಾವಳಿ ಪ್ರದೇಶವಾದರೂ ಇಲ್ಲಿ ಕಾಡಿಗೇನೂ ಬರವಿಲ್ಲ. ಹೀಗಾಗಿ ಒಣಕಟ್ಟಿಗೆ ಸಂಗ್ರಹಣೆಯೂ ಇಲ್ಲಿನ ಸ್ಥಳೀಯರ ಉದ್ಯೋಗಗಳಲ್ಲೊಂದು. ಇದರಲ್ಲಿ ಕೂಡ ಮಹಿಳೆಯರದೇ ಪ್ರಧಾನ ಪಾತ್ರ. ಕಾರವಾರದಿಂದ ಸರಿಸುಮಾರು 8-10 ಕಿ.ಮೀ ನಡೆದೇ ಕ್ರಮಿಸಬೇಕಾದ ಗುಡ್ಡಳ್ಳಿಯನ್ನೂ ಹಿಡಿದು ಹತ್ತಿರದಲ್ಲಿಯೇ ಲಭ್ಯವಾಗುವ ಒಣಕಟ್ಟಿಗೆಗಳನ್ನು ಒಟ್ಟುಮಾಡಿ ಹೊತ್ತು ತರುವ ಸ್ಥಳೀಯ ಸ್ತ್ರೀಯರ ಮನೋಬಲ ನಿಜಕ್ಕೂ ಮೆಚ್ಚಬೇಕಾದದ್ದೇ. ನಸುಬೆಳಕಿನಲ್ಲಿಯೇ ಒಣಕಟ್ಟಿಗೆ ತರುವ ಇವರಲ್ಲಿ ಹೊರೆಯ ಗಾತ್ರಕ್ಕೆ ತಕ್ಕಂತೆ ಮಾರಿ ಕುಟುಂಬ ನಿರ್ವಹಿಸುವ ಸ್ತ್ರೀಯರ ಸಂಖ್ಯೆ ಅಧಿಕವಾಗಿದೆ.
ಸ್ಥಳೀಯ ಮಹಿಳೆಯ ಕಾರ್ಯವೈಖರಿಯಿಂದ ಪರಊರಿನ ಮಹಿಳೆಯರೂ ಪ್ರಭಾವಿತರಾಗಿದ್ದರೆ. ಹೆಚ್ಚಾಗಿ ಉತ್ತರ-ಕರ್ನಾಟಕದ ಜನ ಕಾರವಾರಕ್ಕೆ ಕೂಲಿ ಕೆಲಸಕ್ಕೆಂದು ಬಂದು ಉಳಿದುಕೊಳ್ಳುತ್ತಾರೆ. ಈ ಕುಟುಂಬದ ಮಹಿಳೆಯರು ಬಾಳೆಹಣ್ಣು, ಮಂಡಕ್ಕಿ, ರೊಟ್ಟಿ ಮಾರಿ ಸ್ವಾವಲಂಬಿಗಳೆನಿಸಿದ್ದಾರೆ. ಇನ್ನು ಮಾವಿನ ಹಣ್ಣಿನ ಕಾಲದಲ್ಲಂತೂ ಸ್ಥಳೀಯರ ಜೊತೆ ಅಂಕೋಲದಿಂದ ಹಾಲಕ್ಕಿ ಮಹಿಳೆಯರು ಕರಿಈಶಾಡು ಮಾವಿನ ಹಣ್ಣು ಮಾರುವಾಗ ಇಡಿಪೇಟೆಯೆ ಮಹಿಳಾ ವ್ಯಾಪಾರಿಗಳಿಂದ ತುಂಬಿರುತ್ತದೆ. ಒಟ್ಟಿನಲ್ಲಿ ಕಾರವಾರದ ಮೂಲನಿವಾಸಿ ಸ್ತ್ರೀಯರ ಇಚ್ಛಾಶಕ್ತಿ, ಉತ್ಸಾಹಶೀಲತೆ ಅಪಾರ.
- ಪ್ರೊ ಶಿವಾನಂದ ಎಸ್ ಭಟ್ಟ