400 ವರ್ಷಗಳ ಇತಿಹಾಸ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕಿದೆ. ಮೈಸೂರು ದಸರಾಕ್ಕೆ ನಾಡಹಬ್ಬದ ಪರಿಕಲ್ಪನೆಯನ್ನು ತುಂಬಿ ಅರ್ಥಪೂರ್ಣವಾಗಿ ಆಚರಿಸಲು ಶ್ರೀರಂಗಪಟ್ಟಣ ದಸರಾ ಮಹೋತ್ಸವ ಭದ್ರ ಬುನಾದಿ ಹಾಕಿತ್ತು ಎಂಬ ಸಂಗತಿ ಅನೇಕರಿಗೆ ಗೊತ್ತಿಲ್ಲ.
ಒಂದು ಕಾಲದಲ್ಲಿ ಮೈಸೂರಿನ ರಾಜಧಾನಿಯಾಗಿ ಮೆರೆದ ಶ್ರೀರಂಗಪಟ್ಟಣ ಅನೇಕ ಅರಸರ ಆಳ್ವಿಕೆಗೆ ಒಳಪಟ್ಟಿದೆ. ಕನ್ನಡದ ಸಾಹಿತಿ ಗೋವಿಂದ ವೈದ್ಯ ತನ್ನ ಕೃತಿ ಕಂಠೀರವ ನರಸರಾಜ ವಿಜಯಂನಲ್ಲಿ ಬರೆದಿರುವಂತೆ ವಿಜಯನಗರ ಅರಸರು ಹಂಪೆಯಲ್ಲಿ ಆಚರಣೆ ಮಾಡುತ್ತಿದ್ದ ವಾರ್ಷಿಕ ಬಜೆಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರತಿರೂಪವೇ ದಸರಾ ಹಬ್ಬಕ್ಕೆ ಪ್ರೇರಣೆ ಆಯ್ತ. ವಿಜಯನಗರ ಅರಸರಿಗೆ ಸಾಮಂತರಾಗಿದ್ದ ಮೈಸೂರಿನ ರಾಜ ಒಡೆಯರ್ 1610ರಲ್ಲಿ ಶ್ರೀರಂಗಪಟ್ಟಣದಲ್ಲೇ ಮೊದಲ ಬಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀರಂಗನಾಥನ ದೇವಸ್ಥಾನದಿಂದ ಹೊರಡುವ ದಸರಾ ಮೆರವಣಿಗೆ ನಂತರ ಈಗಿನ ದರಿಯಾ ದೌಲತ್ ಬಳಿ ಇದ್ದ ಬನ್ನಿ ಮಂಟಪಕ್ಕೆ ಬಂದು ಬನ್ನಿ ಪೂಜೆ ನಂತರ ಅಂತ್ಯಗೊಳ್ಳುತ್ತಿತ್ತು. ಇಡಿ ಶ್ರೀರಂಗ ಪಟ್ಟಣವನ್ನು ಪನ್ನೀರಿನಿಂದ ಸಿಂಪಡಿಸಲಾಗುತ್ತಿತ್ತು. ಸಂಪ್ರದಾಯ ಮತ್ತು ಭಕ್ತಿಯ ಸಮ್ಮಿಲನವನ್ನು ಕಾಣಬಹುದಿತ್ತು. ತಂಜಾವೂರ್ ಅರಸು ಸೇರಿದಂತೆ ಮೈಸೂರು ಅರಸರಿಗೆ ಸಾಮಂತರಾಗಿದ್ದ ಅನೇಕ ಸಾಮಂತರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರೆಂಬುದನ್ನು ಗೋವಿಂದ ವೈದ್ಯ ತಮ್ಮ ಕೃತಿಯಲ್ಲಿ ಬಣ್ಣಿಸಿದ್ದಾರೆ.
1610ಕ್ಕೆ ರಾಜ ಒಡೆಯರ್ ಆರಂಭಿಸಿದ ಶ್ರೀರಂಗಪಟ್ಟಣ ದಸರಾ ಮುಂದೆ 200 ವರ್ಷ ಸುಸೂತ್ರವಾಗಿ ನಡೆದುಕೊಂಡು ಬಂತು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕಾಲಕ್ಕೆ ವೈಭವ ಮರೆಯಾಯಿತು. 1805ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರು ದಸರಾ ಹಬ್ಬವನ್ನು ಅರಮನೆಯಲ್ಲಿ ಚಿಕ್ಕದಾಗಿ ಆರಂಭಿಸಿದರು.
ಈಗಿನ ದರಿಯಾ ದೌಲತ್‌ನ ಕಟ್ಟಡದ ಅಡಿಪಾಯ ಎಲ್ಲವೂ ಬನ್ನಿ ಮಂಟಪದ ಗದ್ದುಗೆ ಆಗಿತ್ತು. ಪಟ್ಟಣದ ಸಮೀಪದಲ್ಲಿರುವ ಗಂಗಾಧರೇಶ್ವರ ದೇವಸ್ಥಾನ ಹಾಗೂ ಕಿಂರಗೂರು ಗ್ರಾಮದ ಬಳಿಯ ಹದಿನಾರು ಕಾಲಿನ ಕಂಬಗಳ ಮಂಟಪವನ್ನು ವೈರಮುಡಿ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತಿತ್ತು. ಈಗ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಬನ್ನಿ ಪೂಜೆಗಾಗಿ ಈ ಮಂಟಪಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಕಳೆದ ಐದು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಇದು ಕಾಟಾಚಾರದ ದಸರಾ ಆಗಿದೆ.
- ಕೆ. ಎನ್. ರವಿ