ಮೈಸೂರು ದಸರಾ ಆನೆ ಅಂಬಾರಿಯ ದಸರಾವಾಗಿದ್ದರೆ ಮಂಜಿನ ನಗರಿಯಾದ ಮಡಿಕೇರಿಯಲ್ಲಿ ಜರಗುವುದು ಬೆಳಕಿನ ಸಂಭ್ರಮದ ದಸರಾ. ಹೀಗಾಗಿ ವಿಜಯದಶಮಿಯಂದು ಮಡಿಕೇರಿಯಲ್ಲಿ ಎಲ್ಲೆಲ್ಲೂ ಬೆಳಕಿನ ಚಿತ್ತಾರ.
ಇಡೀ ಮಡಿಕೇರಿ ವರ್ಣಮಯ ಬೆಳಕಿನ ಸೊಬಗಿನಿಂದ ಶೃಂಗರಿಸಿಕೊಂಡಿರುತ್ತದೆ. ರಾತ್ರಿ 9 ಗಂಟೆ ವೇಳೆಗೆ ಮಡಿಕೇರಿಯ ವಿವಿಧೆಡೆಗಳಲ್ಲಿರುವ ದಶ ದೇವಾಲಯಗಳಿಂದ ಆಯಾ ದೇವಾಲಯ ಸಮಿತಿಯವರು ರೂಪಿಸಿದ ಅತ್ಯಾಕರ್ಷಕ ಮಂಟಪಗಳು ಶೋಭಾಯಾತ್ರೆ ಆರಂಭಿಸುತ್ತವೆ. ಮಡಿಕೇರಿಯ ದಶದಿಕ್ಕುಗಳಿಂದ ದಶಮಂಟಪಗಳು ಹೊರಟು ಮಧ್ಯರಾತ್ರಿ ವೇಳೆಗೆ ಮಡಿಕೇರಿಯ ಮುಖ್ಯರಸ್ತೆಯಲ್ಲಿ ಒಟ್ಟುಗೂಡಿ ಸಾಲುಸಾಲಾಗಿ ಬೆಳಗ್ಗಿನ ಜಾವದವರೆಗೂ ಶೋಭಾಯಾತ್ರೆ ನಡೆಸುತ್ತವೆ.
ದಶಮಂಟಪಗಳಲ್ಲಿ ದೇವಾನುದೇವತೆಗಳ ಕಲಾಕೃತಿ, ರಕ್ಕಸರು, ಪುರಾಣ ಕಾಲದ ಸನ್ನಿವೇಶ ಬಿಂಬಿಸುವ ಕಲಾಕೃತಿಗಳು ಗಮನ ಸೆಳೆಯುತ್ತವೆ. ಋಷಿ ಮುನಿಗಳ ಮಂತ್ರಪಠಣ, ದೇವದೇವಿಯರ ಆಶೀರ್ವಚನ, ರಕ್ಕಸರ ಆರ್ಭಟಗಳ ಧ್ವನಿಯೂ ಈ ಮಂಟಪಗಳ ಕಲಾಕೃತಿಯಲ್ಲಿ ಕೇಳಿಬರುತ್ತವೆ. ಧ್ವನಿ, ಸಂಗೀತ, ಬೆಳಕಿನ ಅಚ್ಚುಕಟ್ಟುತನದೊಂದಿಗೆ ಪುರಾಣ ಕಾಲದ ಸನ್ನಿವೇಶಗಳನ್ನು ಹೊಂದಿರುವ ಮಂಟಪಗಳು ಪ್ರೇಕ್ಷಕ ಸಮೂಹಕ್ಕೆ ಪ್ರದರ್ಶನ ನೀಡುತ್ತಾ ನಿಧಾನಗತಿಯಲ್ಲಿ ಮಂಜು ಮುಸುಕಿದ ಮಡಿಕೇರಿಯಲ್ಲಿ ಸಾಗುತ್ತವೆ.
ಗಾಂಧಿ ಮೈದಾನದಲ್ಲಿ ರಾತ್ರಿಯಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸುತ್ತವೆ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಅತ್ಯುತ್ತಮ ಮಂಟಪಕ್ಕೆ ಬಹುಮಾನ ಇರುವುದರಿಂದಾಗಿ ಮಂಟಪಗಳ ನಡುವೇ ಬಿರುಸಿನ ಪೈಪೋಟಿ ಇರುತ್ತದೆ.
ರಾಜರ ಕಾಲದಿಂದಲೂ ಮಡಿಕೇರಿಯಲ್ಲಿ ದಸರಾ ಆಚರಣೆಯಲ್ಲಿತ್ತು, ಮಡಿಕೇರಿಯ ಕೋಟೆಯಲ್ಲಿನ ಅರಮನೆಯಲ್ಲಿ ರಾಜರು ವಿಜಯದಶಮಿ ಆಚರಿಸುತ್ತಿದ್ದರು. ರಾಜರ ಗದ್ದುಗೆ ಈಗಿರುವ ಸ್ಥಳದ ಬಳಿಯಲ್ಲಿಯೇ ಬನ್ನಿ ಮಂಟಪವಿದ್ದು, ಇಲ್ಲಿ ರಾಜರು ಬನ್ನಿ ಕಡಿಯುತ್ತಿದ್ದರು. ರಾಜರ ನಂತರ ಬ್ರಿಟಿಷರ ಆಳ್ವಿಕೆ ಕಾಲದಲ್ಲಿಯೂ ಮಡಿಕೇರಿ ದಸರಾ ಸಾಂಗವಾಗಿ ನಡೆಯುತ್ತಿತ್ತು. ತದನಂತರ ಉತ್ತರ ಭಾರತ ಮೂಲದ ಭೀಮ್‌ಸಿಂಗ್ ಎಂಬ ವರ್ತಕರು ಮಡಿಕೇರಿ ದಸರಾಕ್ಕೆ ಮಂಟಪ ಮೆರವಣಿಗೆಯ ಮೆರಗು ನೀಡಿದ್ದರು.
ದಸರಾ ಆರಂಭವಾಗುವ ದಿನ ಮಡಿಕೇರಿಯ ನಾಲ್ಕು ಶಕ್ತಿದೇವತೆಗಳ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಡಹಬ್ಬಕ್ಕೆ ಚಾಲನೆ ನೀಡುವ ಸಂಪ್ರದಾಯ. ಶಕ್ತಿದೇವಿಯರ ನಾಲ್ಕು ಕರಗಗಳು 10 ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಿ ಭಕ್ತರಿಂದ ಪೂಜಿಸಲ್ಪಡುತ್ತವೆ. ಶೋಭಾಯಾತ್ರೆ ತೆರಳುವ 10 ದೇವಾಲಯಗಳಿಗೂ ಧಾರ್ಮಿಕ, ಐತಿಹಾಸಿಕ ಮಹತ್ವವಿದೆ. ಜನರ ಸಮಿತಿಯೇ ಪ್ರಮುಖವಾಗಿರುವ ಮಡಿಕೇರಿ ದಸರಾ ಜನೋತ್ಸವವಾಗಿ ಅರ್ಥಪೂರ್ಣವಾಗಿ ಆಚರಿಸಲ್ಪಡುತ್ತಿದೆ.
- ಅನಿಲ್ ಎಚ್.ಟಿ.