ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವಕ್ಕೆ ಮೂಲ, ಪ್ರೇರಣೆ ಎಲ್ಲಿಯದು ಗೊತ್ತೆ? ಕನ್ನಡಿಗರ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ್ದು. ಅಂದರೆ ಇಂದಿನ ಹಂಪಿಯೇ ಅದರ ನೆಲೆ. ಕ್ರಿ.ಶ. 1500ರಿಂದಲೂ ಇದು ಆಚರಣೆಯಲ್ಲಿತ್ತು.
ವಿಜಯನಗರ ಅರಸರು ಮಹಾನವಮಿ ದಿಬ್ಬವನ್ನು ಸ್ಥಾಪಿಸಿ, ಅದರ ಮೇಲೆ ಕುಳಿತುಕೊಂಡು ದಸರಾ ಉತ್ಸವ ವೀಕ್ಷಿಸುತ್ತಿದ್ದರು ಎಂಬ ಕಥೆ ನೀವು ಕೇಳಿರಬಹುದು. ಈಗಿರುವ ಮಹಾನವಮಿ ದಿಬ್ಬವೇ ಅದಕ್ಕೆ ಸಾಕ್ಷಿ. ಈಗ ಮೈಸೂರಿನಲ್ಲಿ ನಡೆಯುವ ದಸರಾದಂತೆ ವಿಜಯನಗರದಲ್ಲೂ ಆಚರಿಸಲಾಗುತ್ತಿತ್ತು.
ವಿಜಯನಗರ ಅರಸರ ಕಾಲದಲ್ಲಿ 9 ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಮಲಾಪುರದಿಂದ ಪಾಪಿನಾಯಕನ ಹಳ್ಳಿಗೆ ಹೋಗುವ ದಾರಿಯಲ್ಲಿ ಒಂದು ಮಂಟಪವಿದ್ದು, ಅಲ್ಲಿಯೇ ದೇವಿಯ ಚಿಕ್ಕ ದೇವಸ್ಥಾನವಿದೆ. ನವಮಿಯಂದು ಅಲ್ಲಿಗೆ ಆಗಮಿಸುತ್ತಿದ್ದ ರಾಜರು ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಸ್ನಾನ ಮಾಡಿ ಹಂಪಿಗೆ ಮೆರವಣಿಗೆ ಹೊರಡುತ್ತಿದ್ದರು.
ಉಬ್ಬುಶಿಲ್ಪಿಗಳೇ ಸಾಕ್ಷಿ
ಹಂಪಿಯ ಹಜಾರರಾಮ ದೇವಸ್ಥಾನದ ಹೊರಗಡೆ ಕೆತ್ತಿರುವ ಉಬ್ಬುಶಿಲ್ಪಗಳು ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ದಸರಾ ಉತ್ಸವದ ಮೇಲೆ ಬೆಳಕು ಚೆಲ್ಲುತ್ತವೆ. ಮಹಾರಾಜರು ದಿಬ್ಬದ ಮೇಲೆ ಕುಳಿತುಕೊಂಡು ವೀಕ್ಷಿಸುತ್ತಿರುವುದು, ಜಟ್ಟಿ ಕಾಳಗ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿರುವ ವಿವಿಧ ಕೆತ್ತನೆಗಳು ಅಂದಿನ ದಸರಾ ಉತ್ಸವಕ್ಕೆ ಸಾಕ್ಷಿ. ಇನ್ನು ರಾಬರ್ಟ್ ಸಿವಿಲ್ಸ್ ಬರೆದಿರುವ ಮರೆತುಹೋದ ಸಾಮ್ರಾಜ್ಯ ಪುಸ್ತಕದಲ್ಲಿ ಆ ಕಾಲದ ದಸರಾ ಉತ್ಸವದ ಉಲ್ಲೇಖವಿದೆ. ಇದನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಪ್ರೊ. ಡಾ.ಸಿ.ಎನ್. ವಾಸುದೇವನ್ ಖಚಿತಪಡಿಸಿದ್ದಾರೆ.
ಆದರೆ ಹಂಪಿಯ ಹಳೆಯ ವೈಭವವನ್ನು ಎತ್ತಿ ತೋರಿಸು ಯಾವ ಆಚರಣೆಗಳೂ ಇಂದು ಇಲ್ಲಿ ನಡೆಯುತ್ತಿಲ್ಲ.
- ಚಿತ್ರಲೇಖನ-ಶಶಿಧರ ಮೇಟಿ