ಸಾಪ್ತಾಹಿಕಪ್ರಭ

ಸಾಮವೇದವೇ ಸಂಗೀತದ ಬೇರು!

ಹೀಗೆ ನಾದಮಯವಾದ ಬ್ರಹ್ಮಾಂಡದಲ್ಲಿ ಓತಪ್ರೋತವಾಗಿರುವ ಇನ್ನೊಂದು ಅಂಶವೆಂದರೆ 'ಗತಿ'- ನಿಯಮಿತವಾದ ಚಲನೆ. ಆ 'ನಿಯಮ'ವೇ 'ಲಯ'. ಹಗಲು-ರಾತ್ರಿಯ ಚಕ್ರ, ಸಮುದ್ರದಲ್ಲಿ ಉಕ್ಕೇರುವ ಅಲೆಗಳು, ಕ್ರಮಬದ್ಧವಾಗಿ ಬರುವ ಋತುಗಳು, ಭ್ರಮಿಸುತ್ತಿರುವ ಗ್ರಹಗಳು, ಎದೆಯ ಬಡಿತ, ನಮ್ಮ ನಡಿಗೆ, ವಿಜ್ಞಾನಿಗಳ  ಕಣ್ಣಿಗೆ ಕಾಣುವ ಪರಮಾಣುಗಳು, ಹಕ್ಕಿಯ ರೆಕ್ಕೆಯ ಚಲನೆ, ನಮ್ಮ ಮಾತುಗಳು, ವಿಚಾರಗಳು -ಪ್ರತಿಯೊದರಲ್ಲೂ 'ಲಯ'ವಿದೆ, ಒಂದು ಗತಿಯಿದೆ. ಹೀಗೆ ಬ್ರಹ್ಮಾಂಡದ ಅನಂತತೆಯಲ್ಲಿ ಗುಹ್ಯವಾಗಿರುವ ಈ 'ನಾದ' ಹಾಗೂ 'ಗತಿ' ನಮ್ಮ ಪಂಚೇಂದ್ರಿಯಗಳಿಗೆ ಗ್ರಹ್ಯವಾಗುವ 'ಸ್ವರ' ಮತ್ತು 'ಲಯ'ಗಳಾಗಿವೆ.
ಸೃಷ್ಟಿಯ ವೈಚಿತ್ರ್ಯಗಳನ್ನು, ವಿಶಿಷ್ಟತೆಯನ್ನು ಕಂಡು ಮಾನವನಲ್ಲಿ ಮೂಡಿದ ಭಗವಂತನ ಆರಾಧನಾ ಮನೋಭಾವಕ್ಕೂ ಹಾಗೂ ಸಂಗೀತಕ್ಕೂ ಅಪರಿಮಿತವಾದ ನಂಟು. ಯಾಕೆಂದರೆ ಆನಂದಸ್ವರೂಪ ಈ ಭವ್ಯ ಪ್ರಕೃತಿಯನ್ನು ಸೃಷ್ಟಿಸಿದಾತ. ಅದ್ಭುತ ಎಂಬ ಭಗವಂತನ ಲಕ್ಷಣಗಳನ್ನು ಸರಿಯಾಗಿ ಮಾತಿನಲ್ಲಿ ತಿಳಿಸುವುದು ಕಷ್ಟವೇ. ಆದರೆ ಸಂಗೀತ ಇಂಥ ವಿಚಾರಗಳನ್ನು ಬಹಳ ಚೆನ್ನಾಗಿ ತಿಳಿಸಬಲ್ಲದು. ಅಷ್ಟೇ ಅಲ್ಲ, ಆ ಭಾವನೆಗಳನ್ನು ಉದ್ದೀಪನಗೊಳಿಸಬಲ್ಲದು. ಹೀಗಾಗಿ ಸಂಗೀತ ಹಾಗೂ ಧರ್ಮ ಅಥವಾ ಧಾರ್ಮಿಕ ಭಾವನೆಗಳು ಸದಾ ಒಂದರ ಜೊತೆ ಇನ್ನೊಂದಾಗಿ, ಒಂದಕ್ಕೆ ಇನ್ನೊಂದು ಪೂರಕವಾಗಿ, ಸಹಾಯಕವಾಗಿ ಬೆಳೆಯುತ್ತ ಬಂದಿವೆ. ಸಂಗೀತ ಹುಟ್ಟಿದ್ದೇ ಈ ಧಾರ್ಮಿಕ ಭಾವನೆಗಳನ್ನು ಉದ್ದೀಪನಗೊಳಿಸಲು, ಭಗವಂತನನ್ನು ಆರಾಧಿಸಲು. ಕೇವಲ ಭಾರತವೊಂದೇ ಅಲ್ಲ, ಬ್ಯಾಬಿಲೋನ್, ಸಿರಿಯಾ ಸೇರಿದಂತೆ ಬಹುತೇಕ ಎಲ್ಲ ದೇಶಗಳಲ್ಲೂ ಸಂಗೀತ ಜನನವಾದದ್ದೇ ದೇವರು ಹಾಗೂ ಧಾರ್ಮಿಕ ಭಾವದಿಂದ ಹಾಗೂ ಅಂಥ ಭಾವನೆಗಳ ಉದ್ದೀಪನಕ್ಕಾಗಿ ಎಂದರೆ ತಪ್ಪಲ್ಲ.
ಇತಿಹಾಸದಲ್ಲಿ ಮೊಟ್ಟಮೊದಲು ಸ್ವರ, ಶೃತಿ, ವಾದ್ಯಗಳು, ಸಂಗೀತ ಎಂಬ ಸ್ಪಷ್ಟವಾದ ಚಿತ್ರಣ ಸಿಗುವುದು ವೇದ ಕಾಲದಲ್ಲಿ. ಅದರಲ್ಲೂ 'ಸಾಮವೇದ' ನಮ್ಮ ಸಂಗೀತದ ಬೇರು ಎನ್ನಬಹುದು. ನಮ್ಮ ನಾಲ್ಕು ಪ್ರಮುಖ ವೇದಗಳಲ್ಲಿ ಮೂರನೇಯದಾದ ಈ ವೇದ, ಪ್ರತ್ಯೇಕವಾದ ವೇದ ಎನ್ನಿಸಿಕೊಂಡಿರುವುದೇ ಅದರಲ್ಲಿರುವ ಸಂಗೀತದ ಅಂಶಗಳಿಂದ. ಸಾಮವೇದ ಎಂದರೆ - ಋಗ್ವೇದದ ಮಂತ್ರಗಳನ್ನು ಸ್ವರಬದ್ಧವಾಗಿ ಹಾಡುವುದು ಎಂದರ್ಥ. 'ಗೀತರೂಪಾ ಮಂತ್ರಾ- ಸಾಮಾನಿ' ಎನ್ನುತ್ತಾರೆ. ಬಹುಮಟ್ಟಿಗೆ ಋಗ್ವೇದದ ಮಂತ್ರಗಳನ್ನೇ ಒಳಗೊಂಡಿರುವ ಈ ವೇದ ಈ ಮಂತ್ರಗಳನ್ನೆಲ್ಲ ಸ್ವರಬದ್ಧವಾಗಿಸಿ ಗಾಯನ ಯೋಗ್ಯವಾಗಿಸಿದೆ. ವೇದಕಾಲ ಎಂದರೆ ಅದು ಯಜ್ಞ-ಯಾಗಾದಿಗಳ ಕಾಲ. ಈ ಯಜ್ಞ ಯಾಗಾದಿಗಳ ಸಮಯದಲ್ಲಿ ಈ ಗೀತರೂಪದ ಮಂತ್ರಗಳನ್ನು ಹಾಡುವುದು ಯಜ್ಞದ ಒಂದು ಪ್ರಮುಖ ಭಾಗವಾಗಿತ್ತು. ಯಜ್ಞದಲ್ಲಿನ ಮುಖ್ಯ ಋತ್ವಿಜ - ಯಜ್ಞ ನಡೆಸುವವನು ಸಾಮವೇದದ ಈ ಮಂತ್ರಗಳನ್ನು ಹಾಡುವುದು ಅಂದಿನ ಪದ್ಧತಿಯಾಗಿತ್ತು. ಕಾಲಕ್ರಮೇಣ ಸಾಮಗಾನಕ್ಕಾಗಿಯೇ ಒಬ್ಬ ಋತ್ವಿಜನನ್ನು ನೇಮಿಸುವ ಪದ್ಧತಿ ಬಳಕೆಗೆ ಬಂತು. ಈ ಸಾಮಗಾಯನ ಮಾಡುವವರನ್ನೇ 'ಸಾಮಗ' ಎಂದು ಗುರುತಿಸುತ್ತಿದ್ದರು.
ಈ ಘಟ್ಟದಲ್ಲಿ ಮೊದಲು ಕೇವಲ ಮೂರು ಅಥವಾ ನಾಲ್ಕು ಸ್ವರಗಳನ್ನು (ಉದಾತ್ತ, ಅನುದಾತ್ತ ಹಾಗೂ ಸ್ವರಿತ ಎಂದು ಆ ಸ್ವರಗಳಿಗೆ ಹೆಸರು) ಅವರೋಹಣದಲ್ಲಿ ಬಳಸಲಾಗುತ್ತಿತ್ತು. ನಂತರ ಕಾಲಕ್ರಮೇಣ ಈ  ಸ್ವರಗಳಿಗಿಂತಲೂ ಕೆಳಗಿನ ಸ್ವರ, ಮೇಲಿನ ಸ್ವರ ಹೀಗೆ ಏರಿಸಿ ಇಳಿಸುತ್ತ, ಅವು 'ಸಪ್ತ ಸ್ವರ'ಗಳಾಗಿ ಮೂಡಿಬಂದವು. ಸಾಮವೇದ ಕಾಲದಲ್ಲಿ ಹೇಗೆ ಹಾಡುತ್ತಿದ್ದರೆಂಬುದನ್ನು ಲೇಖಕರೊಬ್ಬರು ಹೀಗೆ ಚಿತ್ರಿಸುತ್ತಾರೆ -    'ಯಜ್ಞಕಾಲದಲ್ಲಿ ಇಬ್ಬರು ಸಹಾಯಕರು ಕುಳಿತು ತಂಬೂರಿಯಂತಹ ವಾದ್ಯವೊಂದನ್ನು ಹಿಡಿದು ಅದನ್ನು ನುಡಿಸುತ್ತಲೇ ಅದೇ ಶ್ರುತಿಯನ್ನು ಆಧಾರವಾಗಿಟ್ಟುಕೊಂಡು ಋತ್ವಿಜನಾದವನು ಸಾಮವೇದದ ಮಂತ್ರಗಳನ್ನು ಸ್ವರ ಬದ್ಧವಾಗಿ ಹಾಡುತ್ತಿದ್ದನು'. ಈ ಕಾಲದಲ್ಲೇ ವೀಣೆ, ವಾನ ಎಂಬ ವಾದ್ಯ, ಕೊಳಲು ಮೊದಲಾದ ವಾದ್ಯಗಳು ಬಳಕೆಯಲ್ಲಿದ್ದು ಕ್ರಮೇಣ ತಾಳ, ಮೃದಂಗ ಮೊದಲಾದವು ಬಳಕೆಗೆ ಬಂದವು.

(ಮುಂದುವರಿಯುವುದು)

- ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!