ಕೆಂಬರಲು (Scarlet Lbis) ಪಕ್ಷಿಯು ದಕ್ಷಿಣ ಅಮೆರಿಕ, ಟ್ರಿನಿಡಾಡ್-ಟೊಬೆಗೊ ಸೇರಿದಂತೆ ಕೆಲವು ದ್ವೀಪ ರಾಷ್ಟ್ರಗಳಲ್ಲಿ ಕಂಡುಬರುವ ಪಕ್ಷಿ. ಭಾರತದಲ್ಲೂ ಈ ಜಾತಿಗೆ ಸೇರಿದ ಪಕ್ಷಿಗಳಿವೆ. ಭಾರತದಲ್ಲಿ ಕಂಡುಬರುವ ಕೆಂಬರಲಿಗೆ ಮೈ ಪೂರ್ತಿ ಕೆಂಪಗಿರುವುದಿಲ್ಲ. ಕಂದು ಮಿಶ್ರಿತ ಕಪ್ಪು ಬಣ್ಣ ಮತ್ತು ಬೆಳ್ಳಗಿನ ಬಣ್ಣದಿಂದ ಕೂಡಿರುತ್ತದೆ. ಭಾರತದಲ್ಲಿ ಕಾಣಸಿಗುವ ಕೆಂಬರಲು ಹಕ್ಕಿಗೂ ಸ್ಕಾರ್ಲೆಟ್ ಕೆಂಬರಲು ಹಕ್ಕಿಗೂ ಆಕಾರದಲ್ಲಿ ಅಷ್ಟಾಗಿ ವ್ಯತ್ಯಾಸ ಕಾಣಬರುವುದಿಲ್ಲ.
ಸ್ಕಾರ್ಲೆಟ್ ಕೆಂಬರಲು ಟ್ರಿನಿಡಾಡ್-ಟೊಬೆಗೊ ದೇಶಗಳ ರಾಷ್ಟ್ರಪಕ್ಷಿ ಕೂಡ ಹೌದು. ಇದು ಓಟ, ಹಾರಾಟದಲ್ಲಿ ಒಂದು ಹೆಜ್ಜೆ ಮುಂದೆ. ಸ್ಕಾರ್ಲೆಟ್ ಕೆಂಬರಲಿನ ಕೊಕ್ಕು ತುಂಬಾ ಗಟ್ಟಿಯಾಗಿರುತ್ತದೆ. ಎಲ್ಲ ಕೆಂಬರಲಿನಂತೆ ನೀಳವಾಗಿ ಸ್ವಲ್ಪ ಬಾಗಿಕೊಂಡಿರುತ್ತದೆ. ಕತ್ತು ಮತ್ತು ಕೊಕ್ಕು ಸೇರುವ ಜಾಗದಲ್ಲಿ ಚಿಕ್ಕದೊಂದು ಚೀಲವಿರುತ್ತದೆ. ಈ ಚೀಲದಲ್ಲಿ ಅದು ಆಹಾರ ಸಂಗ್ರಹಿಸಿಟ್ಟುಕೊಳ್ಳುತ್ತದೆ.
ಸಾಮಾನ್ಯವಾಗಿ ಕೆಸರು ಗದ್ದೆಗಳಲ್ಲಿ ಇರುವ ಈ ಹಕ್ಕಿಗೆ ಕೀಟಗಳೇ ಪ್ರಮುಖ ಆಹಾರ. ಸಣ್ಣಸಣ್ಣ ಗುಂಪು ಮಾಡಿಕೊಂಡು ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ 25ರಿಂದ 28 ಸೆಂ.ಮೀ. ಎತ್ತರ, 650 ಗ್ರಾಂ. ತೂಕ ಹೊಂದಿರುವ ಕೆಂಬರಲು ಸುಮಾರು 15ರಿಂದ 22 ವರ್ಷ ಬದುಕುತ್ತವೆ. ಮರಗಳ ಮೇಲೆ ಕಡ್ಡಿಗಳಿಂದ ಗೂಡು ಕಟ್ಟುತ್ತವೆ. ನವೆಂಬರ್-ಜನವರಿ ಅವಧಿಯಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಒಮ್ಮೆ 3-4 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆ ಇಟ್ಟ 22ರಿಂದ 28 ದಿನಗಳೊಳಗೆ ಮರಿ ಮಾಡುತ್ತವೆ.