ಕಾಲೇಜು ದಿನಗಳು ಅಂದ್ಮೇಲೆ ಕೇಳ್ಬೇಕೇ? ಅಲ್ಲಿ ಏನುಂಟು... ಏನಿಲ್ಲ... ಅದು ಸ್ನೇಹದ ಕಡಲು. ಮೋಜು- ಮಸ್ತಿ, ತಮಾಷೆ, ಮುನಿಸು, ವ್ಯಂಗ್ಯಗಳಿಗೆ ಕೊನೆ ಮೊದಲಿಲ್ಲದ ಸದಾವಕಾಶದ ಒಡಲು. ಅದರಲ್ಲೂ ನಮ್ಮದು ಹೇಳಿ-ಕೇಳಿ ಹುಡುಗಿಯರ ಕಾಲೇಜು. ಶಿಸ್ತಿನ ಮಧ್ಯ ಸ್ವಲ್ಪಮಟ್ಟಿಗಿನ ಚೇಷ್ಟೆಯೂ ಮೇಳೈಸಿತ್ತು... ನಮ್ಮದು ಬರೋಬ್ಬರಿ ಹತ್ತು ಗೆಳತಿಯರ ಪಟಾಲಂ. ಆದರೆ ನಮಗೆಲ್ಲರಿಗೂ ಇದ್ದದ್ದು ಒಬ್ಬನೇ ಬಾಯ್‌ಫ್ರೆಂಡ್..!
ಮೂರು ವರ್ಷಗಳಿಂದ ಆತ ಸ್ವಲ್ಪವೂ ಬೇಸರಿಕೊಳ್ಳದೆ ನಮ್ಮ ಮಾತುಗಳಿಗೆ ಕಿವಿಯಾನಿಸಿದ್ದ. ನಗುವಲ್ಲಿ ನಗುವಾಗಿ, ದುಃಖದಲ್ಲಿ ಭಾಗಿಯಾಗಿ, ಕನಸುಗಳಿಗೆ ಬೆಂಬಲವಾಗಿ ನಿಂತಿದ್ದ ಆತ!
ಏನಪ್ಪಾ? ಗರ್ಲ್ಸ್ ಕಾಲೇಜು ಹುಡುಗಿಯರಿಗೆ ಮಣಿಯರಿಗೆ ಒಬ್ಬನೇ ಬಾಯ್‌ಫ್ರೆಂಡಾ ಎಂದು ಅಚ್ಚರಿಪಟ್ರಾ? ಜಾಸ್ತಿ ತಲೆಕೆಡಿಸ್ಕೊಳ್ಳೋಕೆ ಹೋಗ್ಬೇಡಿ. ನಮ್ಮೀ ಬಾಯ್‌ಫ್ರೆಂಡ್ ನೀವಂದುಕೊಂಡಂತಿಲ್ಲ. ಸಾಮಾನ್ಯವಾಗಿ ಒಂದೊಂದು ಗೆಳೆಯರ ಪಟಾಲಂಗೂ ಅವರದ್ದೇ ಆದ ಒಂದು ಅಡ್ಡವಿರುತ್ತದೆ. ಆ ಗೆಳೆಯರ ಆಟ, ಹರಟೆ, ಹೊಸ-ಹೊಸ ಆಲೋಚನೆ, ಕನಸುಗಳು ಚಿಗುರೊಡೆಯುವುದೇ ಅಲ್ಲಿ. ಅದೇ ರೀತಿ ನಮಗೂ ಒಂದು ಅಡ್ಡವಿತ್ತು. ಅದು ನಮ್ಮ ಪ್ರೀತಿಯ 'ಲಾಸ್ಟ್ ರೂಮ್'. ಆದರೆ, ಈ ಲಾಸ್ಟ್‌ರೂಂ ನಮ್ಮೆಲ್ಲರ ಪಾಲಿಗೆ ಪ್ರೀತಿಯ ಬಾಯ್‌ಫ್ರೆಂಡ್ ಆಗಿತ್ತು! ನಮಗೆ ಈ ಬಾಯ್‌ಫ್ರೆಂಡ್ ಮೇಲೆ ಎಷ್ಟು ಪ್ರೀತಿ ಅಂದ್ರೆ ಬೇರೆ ವಿದ್ಯಾರ್ಥಿನಿಯರು ಅಲ್ಲಿ ಬಂದು ಕೂತರೆ ಮೂಗು ಕೆಂಪಾಗುತ್ತಿತ್ತು. ಆಗ ಬರುತ್ತಿದ್ದ ಕೋಪ ಹೇಗಿರುತ್ತಿತ್ತು ಗೊತ್ತಾ? ಯಾರಾದ್ರೂ ಹುಡುಗಿ ನಮ್ಮ ಬಾಯ್‌ಫ್ರೆಂಡ್ ಮೈ ಮೇಲೆ ಕೈ ಹಾಕಿದ್ರೆ ಬರುತ್ತದಲ್ವಾ ಅಂಥ ಕೋಪ! ಅವರು ಜಾಗ ಖಾಲಿ ಮಾಡುವವರೆಗೂ ನಮ್ಮ ಕೋಪ ಆರುತ್ತಿರಲಿಲ್ಲ.
ನಾವು ಕ್ಲಾಸ್‌ರೂಮ್‌ಗಿಂತ ಈ ಪ್ರೀತಿಯ ಲಾಸ್ಟ್‌ರೂಮ್‌ನಲ್ಲೇ ಸಮಯ ಕಳೆಯುತ್ತಿದ್ದುದು ಹೆಚ್ಚು.
ಯಾರಾದರೂ ಕ್ಲಾಸ್ ಲೀಡರ್ ಎಲ್ಲಿ? ಕಲ್ಚರಲ್ ಸೆಕ್ರೆಟರಿ ಏಲ್ಲಿ? ಎಂದು ಕೇಳಿದ್ರೆ ಬರುತ್ತಿದ್ದುದು ಒಂದೇ ಉತ್ತರ. ಅದು ಲಾಸ್ಟ್ ರೂಂ! ಇದೇ ಕಾರಣಕ್ಕೆ ಎಲ್ಲಾ ತರಗತಿಗಳಿಗೂ ಮೆಮೋ ನೀಡುವ ರಾಜು ಲಾಸ್ಟ್ ರೂಂಗೂ ತಪ್ಪದೇ ಮೆಮೋ ನೀಡುತ್ತಿದ್ದರು. ಎಲ್ಲ ಶಿಕ್ಷಕರಿಗೂ ತಿಳಿದಿದ್ದ ಸಾಮಾನ್ಯ ವಿಷಯವೆಂದರೆ ನಮ್ಮ ತರಗತಿಯ ಮೊದಲ ಮೂರು ಬೆಂಚ್‌ಗಳು ಖಾಲಿ ಇದ್ದರೆ, ಲಾಸ್ಟ್ ರೂಂ ಖಾಲಿ ಇಲ್ಲ ಅಂತ. ಹಾಗಾಗಿ ಅವರು ಮೊದಲ ಮೂರು ಬೆಂಚ್‌ನವರು ಕಾಣಿಸದಿದ್ದರೆ ಲಾಸ್‌ರೂಂನಲ್ಲೇ ಇರುತ್ತಾರೆ ಕರೆಯಿರಿ ಎನ್ನುತ್ತಿದ್ದರು. ನಮ್ಮ ಹಾಗೂ ಲಾಸ್ಟ್‌ರೂಂನ ಗೆಳೆತನ ಕಾಲೇಜಿನಲ್ಲಿ ಆ ಮಟ್ಟಿಗೆ ಫೇಮಸ್!
ಹಲವು ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡಿ ಸಿನಿಮಾ, ಪಾರ್ಕ್, ಶಾಪಿಂಗ್ ಎಂದು ಹೋಗುತ್ತಾರೆ. ಆದರೆ ನಮಗೆ ಕ್ಲಾಸ್‌ಗೆ ಚಕ್ಕರ್ ಹೊಡೆದು ಲಾಸ್ಟ್‌ರೂಂನಲ್ಲಿ ಹರಟೆ ಹೊಡೆಯುವುದೆಂದರೆ ಇಷ್ಟ. ನಾನು ಪ್ರತಿ ವಾರವೂ ಒಂದೊಂದು ಟೈಂ ಟೇಬಲ್ ಹಾಕುತ್ತಿದೆ. ಲಾಸ್ಟ್‌ರೂಂನಲ್ಲಿ ಕುಳಿತು ಈ ದಿನ ಈ ವಿಷಯದ ಪುಸ್ತಕ ಓದಬೇಕು ಅಂತ ನಿರ್ಧರಿಸಿಕೊಳ್ಳುತ್ತಿದ್ದೆ. ಆದರೆ, ಅದು ಆಚರಣೆಯಲ್ಲಿರುತ್ತಿದ್ದುದು 2 ದಿನ ಮಾತ್ರ. ಉಳಿದ ದಿನಗಳು ಬರೇ ಹರಟೆ ಹರಟೆ... ಹರಟೆ... 'ಫ್ರೆಂಡ್‌ಶಿಪ್ ಡೇ'ಯಂದು ನಮ್ಮ ಗೆಳೆಯನನ್ನು ಚೆಂದವಾಗಿ ಅಲಂಕರಿಸುತ್ತಿದ್ದೆವು. ಇತರರಿಗೆ ಇದು ತಮಾಷೆಯಾಗಿ ಕಂಡರೂ ನಮಗದು ಖುಷಿ ಕೊಡುತ್ತಿತ್ತು.
ಈ ನಮ್ಮ ಬಡಪಾಯಿ ಗೆಳೆಯ ಮೂರು ವರ್ಷ ನಮ್ಮ ಕೀಟಲೆ, ಕಿರುಚಾಟಗಳನ್ನೆಲ್ಲಾ ಕೇಳಿಸಿಕೊಂಡಿದ್ದಾನೆ. ಎಷ್ಟೋ ಲವ್‌ಸ್ಟೋರಿಗಳು ಅರಳಿದ್ದು, ಅದೆಷ್ಟೋ ಲವ್‌ಸ್ಟೋರಿಗಳು ಮುದುಡಿದ್ದಕ್ಕೆ ಮೌನ ಸಾಕ್ಷಿಯಾಗಿದ್ದಾನೆ.
ಕೊನೆಯ ವರ್ಷ ಬೀಳ್ಕೊಡುಗೆ ಸಮಾರಂಭದ ದಿನವೂ ನಮಗೆ ಸ್ನೇಹಿತರು ದೂರಾಗುತ್ತಿದ್ದಾರೆ ಅನ್ನುವ ನೋವು ಕಾಡುತ್ತಿರಲಿಲ್ಲ. ಬದಲಾಗಿ ನಮ್ಮೆಲ್ಲರ ನಡುವೆ ಸ್ನೇಹದ ಬಂಧವನ್ನು ಗಟ್ಟಿಗೊಳಿಸಿದ ಈ ಬಾಯ್‌ಫ್ರೆಂಡ್‌ನನ್ನು ಬಿಟ್ಟು ಹೋಗುವುದು ಹೇಗೆ ಎನ್ನುವ ಚಿಂತೆ ಕಾಡಿದ್ದೇ ಹೆಚ್ಚು. ಕಾಲೇಜು ಬಿಟ್ಟು 2 ವರ್ಷ ಕಳೆದಿದೆ. ಆದರೂ ನಾವೆಲ್ಲರು ಒಟ್ಟಿಗೆ ಭೇಟಿಯಾದಾಗ ಕಾಲೇಜಿಗೆ ಹೋಗಿ ಸ್ವಲ್ಪ ಕಾಲವಾದರೂ ಲಾಸ್ಟ್‌ರೂಮ್‌ನಲ್ಲಿ ಕೂತು ಬರುತ್ತೇವೆ. ನಮ್ಮ ಗೆಳೆಯನ ಮುಂದೆ ಹರಟಿ ಬರುತ್ತೇವೆ.
- ಪಾವನ ಎಚ್.ಎಸ್
pavanahsgowda@gmail.com