ಮಳೆಗಾಲದಲ್ಲಿ ರಸ್ತೆಗಳಲ್ಲಿ ನಿಂತ ನೀರು ಕೆಲವೇ ಗಂಟೆಗಳಲ್ಲಿ ಕಣ್ಮರೆಯಾಗುವುದನ್ನು ನೋಡಿರಬಹುದು. ಬೇಸಿಗೆಯಲ್ಲಿ ಬಟ್ಟೆಗಳು ಬಲು ಬೇಗನೆ ಒಣಗುತ್ತವೆ. ಈ ನೀರು ಎಲ್ಲಿಗೆ ಹೋಗುತ್ತದೆ? ಈ ನೀರು ಇಬ್ಬನಿಯಾಗಿ ಪರಿವರ್ತನೆಗೊಳ್ಳುತ್ತದೆ. ಇದೇ ಬಾಷ್ಪೀಕರಣ.
ನೀರು ಹೇಗೆ ಆವಿಯಾಗುತ್ತದೆಂದರೆ, ಪ್ರತಿ ಪದಾರ್ಥ ಮಾಲಿಕ್ಯೂಲ್ಸ್ ಎಂದು ಕರೆಯಲಾಗುವ ಅತಿ ಸೂಕ್ಷ್ಮ ಕಣಗಳಿಂದ ರಚಿತವಾಗಿದೆ. ಈ ಸೂಕ್ಷ್ಮಕಣಗಳನ್ನು ಒಟ್ಟಿಗೆ ಬಂಧಿಸಿಡುವ ಒಂದು ಪ್ರಬಲ ಆಕರ್ಷಣಶಕ್ತಿ ಇರುತ್ತದೆ. ಸೂಕ್ಷ್ಮಕಣಗಳ ಚಲನೆಯಿಂದಾಗಿ ಉದ್ಭವಿಸುವ ವಿಕರ್ಷಣಾ ಶಕ್ತಿ, ಆಕರ್ಷಣಾ ಶಕ್ತಿಯನ್ನು ಪ್ರತಿರೋಧಿಸುತ್ತದೆ. ಸೂಕ್ಷ್ಮ ಕಣಗಳನ್ನು ಹಿಡಿದಿಡುವ ಆಕರ್ಷಣ ಶಕ್ತಿ ವಿಕರ್ಷಣಾ ಶಕ್ತಿಗಿಂತ ಬಹಳ ಹೆಚ್ಚಾಗಿರುವ ತನಕ ಆ ಪದಾರ್ಥ ಘನ ರೂಪದಲ್ಲೇ ಇರುತ್ತದೆ. ಈ ಪದಾರ್ಥವನ್ನು ಕಾಯಿಸಿದಾಗ ಅದು ಶಾಖದ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರಿಂದ ಸೂಕ್ಷ್ಮಕಣಗಳು ಶೀಘ್ರಗತಿಯಲ್ಲಿ ಚಲಿಸಲಾರಂಭಿಸುತ್ತವೆ. ಈ ಶೀಘ್ರಚಲನೆ ಸೂಕ್ಷ್ಮಕಣಗಳನ್ನು ಹಿಡಿದಿಡುವ ಶಕ್ತಿಯ ವಿರುದ್ಧ ಕೆಲಸ ಮಾಡುತ್ತದೆ. ಅಂದರೆ ಅದು ಆ ಕಣಗಳನ್ನು ಪ್ರತ್ಯೇಕಿಸುತ್ತದೆ. ಸೂಕ್ಷ್ಮಕಣಗಳ ಚಲನೆಯಿಂದ ಉಂಟಾಗುವ ವಿಕರ್ಷಣಶಕ್ತಿ ಅವನ್ನು ಹಿಡಿದಿಡುವ ಶಕ್ತಿಗೆ ಸಮವಾದರೆ, ಆಗ ಪದಾರ್ಥ ಘನರೂಪದಿಂದ ದ್ರವರೂಪಕ್ಕೆ ಬರುತ್ತದೆ. ಈ ದ್ರವವನ್ನು ಮತ್ತಷ್ಟು ಕಾಯಿಸಿದರೆ ಸೂಕ್ಷ್ಮಕಣಗಳು ಇನ್ನಷ್ಟು ಶೀಘ್ರಗತಿಯಲ್ಲಿ ಚಲಿಸುತ್ತವೆ. ಈ ಶೀಘ್ರ ಚಲನೆಯಿಂದ ಉಂಟಾದ ಶಕ್ತಿ, ಸೂಕ್ಷ್ಮಕಣಗಳನ್ನು ಹಿಡಿದಿಡುವ ಶಕ್ತಿಯನ್ನು ಮೀರಿಸಿದರೆ, ಆಗ ಸೂಕ್ಷ್ಮಕಣಗಳು ಪ್ರತ್ಯೇಕಗೊಂಡು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಹೀಗೆ ದ್ರವ ಆವಿಯಾಗಿ ಪರಿವರ್ತನೆಗೊಳ್ಳುತ್ತದೆ.
= ಮಾಹಿತಿ: ಹರಳಹಳ್ಳಿಪುಟ್ಟರಾಜು, ಪಾಂಡವಪುರ.
----