ಅಲ್ಲೊಂದು ವಿಶಾಲವಾದ ಪಕ್ಷಿಗಳ ತಾಣವಿತ್ತು. ಗಿಳಿ, ಗೊರವಂಕ, ಹದ್ದು, ಕೋಗಿಲೆ, ಕೋಳಿ ಇನ್ನಿತರ ಪಕ್ಷಿಗಳೂ ಅಲ್ಲಿ ವಾಸವಾಗಿದ್ದವು. ಒಮ್ಮೆ ಆಗಸದಲ್ಲಿ ಹದ್ದು ಹಾರುತ್ತಿತ್ತು. ನೆಲದಲ್ಲಿ ಕೋಳಿ ಕಾಳು ಹೆಕ್ಕುತ್ತಿತ್ತು. ಹಾರುತ್ತಲೇ ಹದ್ದು ತನ್ನ ಮರಿಗಳೊಂದಿಗಿದ್ದ ಕೋಳಿಯನ್ನು ಗಮನಿಸಿತು. ಮನದಲ್ಲೇ ಏನೋ ಲೆಕ್ಕಾಚಾರ ಹಾಕಿತು.
ಅದೊಂದು ದಿನ ಕೋಳಿ ಕಾಳು ಹೆಕ್ಕಲು ಗೂಡಿನಿಂದ ಹೊರ ಹೋಯಿತು. ಈ ಸಮಯ ಕಾಯುತ್ತಿದ್ದ ಹದ್ದು ಬಂದು ಕೋಳಿ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ಮೊಟ್ಟೆಯನ್ನು ಅಲ್ಲಿಯೇ ಬಿಟ್ಟು ಹಾರಿ ಹೋಯಿತು. ಕಾಳು ತಿಂದ ಕೋಳಿ ಗೂಡಿಗೆ ಮರಳಿತು. ತನ್ನ ಮೊಟ್ಟೆಗಳೊಂದಿಗೆ ಇದ್ದ ಹದ್ದಿನ ಮೊಟ್ಟೆಗೂ ಕಾವು ಕೊಟ್ಟಿತು. ಹೀಗೆ ದಿವಸಗಳು ಕಳೆದವು. ಕೆಲ ಸಮಯದಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರ ಬಂದವು. ಅದರಲ್ಲಿ ಹದ್ದಿನ ಮರಿಯನ್ನು ಕಂಡ ಕೋಳಿ ತನ್ನ ಮರಿಗಳಂತೆ ಆ ಮರಿಯನ್ನು ಜೋಪಾನ ಮಾಡಿ ಲಾಲನೆ ಪಾಲನೆಯಲ್ಲಿ ತೊಡಗಿತು.
ಕೋಳಿ ಮರಿಗಳು ಅತ್ತಿತ್ತ ಓಡಾಡ ತೊಡಗಿದವು. ಗಲ್ಲಿ ಗಟಾರಗಳಲ್ಲಿ ಆಹಾರ ಹುಡುಕ ತೊಡಗಿದವು. ಆದರೆ ಹದ್ದಿನ ಮರಿ ಮಾತ್ರ ಆಗಸದತ್ತ ದೃಷ್ಟಿ ಹರಿಸಿತು. ನೆಲದಲ್ಲಿ ಹೆಜ್ಜೆ ಹಾಕುವ ಬದಲು ರೆಕ್ಕೆ ಬಡಿಯತೊಡಗಿತು. ಬಾನಿನಲ್ಲಿ ಹದ್ದು ಹಾರುವುದು ಕಂಡಿತು. ತಾನೂ ಅದರಂತೆಯೇ ಹಾರಬೇಕೆಂದು ಪ್ರಯತ್ನಿಸುತ್ತಲೇ ಇತ್ತು. ಬಡಿಯುತ್ತಾ ಬಡಿಯುತ್ತಾ ರೆಕ್ಕೆಗಳು ಬಲಿತು ಬಲಿಷ್ಠವಾದವು. ಹದ್ದಿನ ಮರಿ ಹಾರಿ ಹೋಯಿತು.
ಇದರಿಂದ ಕೋಳಿಗೆ ತೀವ್ರ ಬೇಸರವಾಯಿತು. ತಾನು ಕಾವು ಕೊಟ್ಟು ಸಲುಹಿದ ಮರಿ ತನ್ನನ್ನೇ ಬಿಟ್ಟು ಹೋಯಿತಲ್ಲವೆಂದು ಮರುಗಿತು. ಹಾರಿದ ಮರಿಯ ನೆನಪಿನಲ್ಲಿ ಬಳಲಿತು. ಅಂತಿಮವಾಗಿ ಪಕ್ಷಿಗಳ ಸಂಕುಲದಲ್ಲಿ ಈ ವಿಚಾರವನ್ನು ಮಂಡನೆ ಮಾಡಿತು. ಮರಿಯನ್ನು ಮರಳಿ ಕರೆತರುವಂತೆ ವಿನಂತಿಸಿತು. ಪಕ್ಷಿಗಳ ಮುಖಂಡ ಹದ್ದಿನ ಮರಿಯನ್ನು ಕರೆಸಿ ವಿಚಾರಣೆ ನಡೆಸಿ ಅಂತಿಮವಾಗಿ ಹೀಗೆ ತೀರ್ಪಿತ್ತಿತ್ತು.
'ಹದ್ದು ಕೋಳಿ ಗೂಡಿನಲ್ಲಿ ಮೊಟ್ಟೆ ಇಟ್ಟಿದ್ದೂ ನಿಜ. ಕೋಳಿ ಆ ಮೊಟ್ಟೆಗೆ ಕಾವು ಕೊಟ್ಟು ಮರಿಯನ್ನು ತನ್ನದೇ ಮರಿಯಂತೆ ಸಾಕಿ ಸಲುಹಿದ್ದು ನಿಜ. ಹದ್ದಿನ ಮರಿಗೂ ತನ್ನನ್ನು ಸಾಕಿ ಸಲುಹಿದ ತಾಯಿ ಕೋಳಿಯ ಬಗ್ಗೆ ಅತೀವ ಪ್ರೀತಿಯಿದೆ. ಹುಟ್ಟುತ್ತಲೇ ತನ್ನೊಂದಿಗೆ ಬಂದ ವಿಶೇಷ ಗುಣಗಳಿಂದಾಗಿ ಆ ಮರಿ ಹಾರಿತು. ಹಾರುವುದು ಹದ್ದಿನ ಸ್ವಭಾವ, ಹುಟ್ಟುಗುಣ. ಕೋಳಿಗೂ ರೆಕ್ಕೆ ಪುಕ್ಕಗಳಿವೆಯಾದರೂ ಅದು ಹದ್ದಿನಂತೆ ಆಗಸದಲ್ಲಿ ಹಾರಲಾಗದು. ಎತ್ತರದಲ್ಲಿ ಹಾರುತ್ತಾ ಜೀವನ ಸಾಗಿಸಲಾರವು. ಆದರೆ ಹದ್ದು ಎತ್ತರದಲ್ಲಿ ಹಾರುತ್ತಲೇ ತನ್ನ ಜೀವನ ಕಟ್ಟಿಕೊಳ್ಳುವುದು. ಹಾಗಾಗಿ ಹದ್ದಿನ ಮರಿ ಹಾರಿ ಹೋಗಿದ್ದರಲ್ಲಿ ತಪ್ಪಿಲ್ಲ. ಆದರೆ ಸಾಕಿ ಸಲುಹಿದ ತಾಯಿಯನ್ನು ಮರೆಯಬೇಕೆಂದಿಲ್ಲ. ಆಗಾಗ ಬಂದು ಸಾಕಿದ ತಾಯಿ ಕೋಳಿಯನ್ನು ನೋಡಿಕೊಂಡು ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಹೋಗಲಿ' ಎಂದು ತೀರ್ಪನ್ನು ಕೊಟ್ಟಿತು. ಈ ತೀರ್ಪಿನಿಂದ ಕೋಳಿಗೂ ಹಾಗೂ ಹದ್ದಿನ ಮರಿಗೂ ಸಂತೋಷವಾಯಿತು. ಪರಸ್ಪರ ಕೊಕ್ಕುಗಳನ್ನು ತಾಗಿಸಿಕೊಂಡು ಪ್ರೀತಿಯನ್ನು ಹಂಚಿಕೊಂಡವು. ಹದ್ದಿನ ಮರಿಯನ್ನು ತಾಯಿ ಕೋಳಿ ಬೀಳ್ಕೊಡುತ್ತಾ ಹೀಗೆಯೇ ಆಗಾಗ ಬರುತ್ತಿರಬೇಕೆಂದು ಮುದ್ದು ಮಾಡಿ ಕಳಿಸಿಕೊಟ್ಟು ತನ್ನ ಎಂದಿನ ಬದುಕನ್ನು ಸಾಗಿಸತೊಡಗಿತು.
= ಎಸ್.ಎನ್. ಚಂದ್ರಕಲಾ ಕೊಪ್ಪ