ಜನ ಅವನನ್ನು ಜೋಗಯ್ಯ ಎಂದು ಕರೆಯುತ್ತಿದ್ದರು. ಊರೂರು ಸುತ್ತಿ ಭಿಕ್ಷೆ ಎತ್ತಿ ಜೀವನ ಮಾಡುತ್ತಿದ್ದ ಅವನು ದೇವಸ್ಥಾನಗಳಲ್ಲಿ ಇಲ್ಲವೇ ಊರಾಚೆಯ ಸ್ಮಶಾನಗಳಲ್ಲಿ ಇರುಳು ಕಳೆದು ಬೆಳಗಾಗುತ್ತಿದ್ದಂತೆ ತನ್ನ ಕಾಯಕದಲ್ಲಿ ತೊಡಗುತ್ತಿದ್ದನು.
ತನ್ನ ಸುತ್ತಮುತ್ತಲಿನ ಊರುಗಳಲ್ಲಿ ಮದುವೆ ಮುಂಜಿ ಮುಂತಾದ ಶುಭಕಾರ್ಯಗಳು ನಡೆದರೆ ಅಲ್ಲಿ ಅವನು ತಪ್ಪದೆ ಹಾಜರಿರುತ್ತಿದ್ದ. ಯಾವುದೇ ಮನೆಗಳಲ್ಲಿ ಸಾವು ಸಂಭವಿಸಲಿ, ಇಲ್ಲವೆ ಮತ್ಯಾವುದಾದರೂ ಸಂಕಷ್ಟಗಳು ಎದುರಾಗಲಿ ಅವನಲ್ಲಿರುತ್ತಿದ್ದ. ಆ ಸಂದರ್ಭಗಳಲ್ಲಿ ಅವರ ನೋವು ನಲಿವುಗಳಲ್ಲಿ ಭಿನ್ನಭಾವ ಇಲ್ಲದ ರೀತಿಯಲ್ಲಿ ಭಾಗಿಯಾಗುತ್ತಿದ್ದ. ಜನರಿಗೆ ಇವನನ್ನು ನೋಡಿದರೆ ಅದೇನೋ ನಮ್ಮವನೆಂಬ ಭಾವ ಉಂಟಾಗುತ್ತಿತ್ತು.
ಇವನಿಗೊಂದು ವಿಚಿತ್ರ ಅಭ್ಯಾಸವಿತ್ತು. ತನ್ನ ಚೀಲವೊಂದರಲ್ಲಿ ಹೂ ಬೀಜಗಳನ್ನು ಇಟ್ಟುಕೊಂಡಿರುತ್ತಿದ್ದ. ಊರೂರು ಸುತ್ತುತ್ತಾ ಹೋಗುವಾಗ ರಸ್ತೆಯ ಇಕ್ಕೆಲಗಳಲ್ಲಿ ಹೂ ಬೀಜಗಳನ್ನು ಚೆಲ್ಲುತ್ತಾ ಹೋಗುತ್ತಿದ್ದ. ಇದನ್ನು ಕಂಡ ಜನ 'ಜೋಗಯ್ಯ, ಇದೇನು ಮಾಡುತ್ತಿರುವೆ' ಎಂದು ಪ್ರಶ್ನಿಸುತ್ತಿದ್ದರು. ಆಗ ಆತನು 'ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಈ ಬೀಜಗಳು ಮೊಳಕೆಯೊಡೆದು ಗಿಡಗಳಾಗಿ ಹೂ ಬಿಡುತ್ತವೆ' ಎನ್ನುತ್ತಿದ್ದನು. 'ಹೂಗಳು ಅರಳಿ ರಸ್ತೆಯ ಬದಿಯಲ್ಲಿ ನಿಂತರೆ ನಿನಗಾಗುವ ಪ್ರಯೋಜನವೇನು? ಮಾಡುವುದಕ್ಕೆ ನಿನಗೆ ಕೆಲಸವಿಲ್ಲ.' ಎನ್ನುತ್ತಿದ್ದರು ಜನ. 'ನಿಮ್ಮ ಮನೆಯ ಮುಂದಿರುವ ಹೂ ಗಿಡಗಳಲ್ಲಿ ಹೂಗಳು ಅರಳಿರುವುದನ್ನು ನೋಡಿ ನನಗೆ ಸಂತೋಷವಾಗುತ್ತದೆ. ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಅವು ಮರಗಳಾಗಿ ಬೆಳೆದು ನೆರಳು ನೀಡುವಾಗ ಮರದಡಿ ನಿಂತವರಿಗೆ ಆನಂದವಾಗುತ್ತದೆ. ಹಾಗೆಯೇ ನಾನು ಚೆಲ್ಲಿದ ಹೂ ಬೀಜಗಳು ಮೊಳಕೆಯೊಡೆದು ಸಸಿಗಳಾಗಿ ಹೂ ಬಿಟ್ಟಾಗ ಅದನ್ನು ನೋಡಿದವರಿಗೆ ಸಂತೋಷವಾಗುತ್ತದೆ. ನಾನು ಮತ್ತೆ ಈ ಹಾದಿಯಲ್ಲಿ ಬಾರದಿದ್ದರೇನು? ನನಗಿಂಥ ಕಲ್ಪನೆ ಬಂದರೆ ಸಾಕು, ನಾನು ಆನಂದದಿಂದ ತುಂಬಿ ಹೋಗುತ್ತೇನೆ.' ಎನ್ನುತ್ತಿದ್ದ ಜೋಗಯ್ಯ.
ನಮ್ಮಿಂದ ಯಾರಿಗಾದರೂ ಆನಂದವಾಗುತ್ತದೆಯೇ ಎಂದು ಪ್ರಶ್ನಿಸಿಕೊಳ್ಳೋಣ. ಬೇರೆಯವರಿಗೆ ಆನಂದವಾಗುವಂಥ ಕೆಲಸ ಮಾಡೋಣ. ಅವರು ಖುಷಿ ಪಡುವುದನ್ನು ಕಂಡು ನಾವೂ ಖುಷಿಯಿಂದ ನರ್ತಿಸೋಣ. ಇದುವೇ ಅಲ್ಲವೇ ನಾವು ಜೋಗಯ್ಯನಿಂದ ಕಲಿಯಬೇಕಾದ ಪಾಠ?
-ಎಂ. ಎಸ್. ಶಿವಕುಮಾರ್