ಬೇಡ ಅಂದರೆ ಬಿಡುವರೆ? ಬೇಕೆಂದರೆ ಕೊಡುವರೇ? ನೋವುಗಳು ನನ್ನ ಹಿಂದೆ ಬಿದ್ದು, 'ಅನುಭವಿಸು ನನ್ನ' ಎನ್ನುವುದು. ಅನುಭವಿಸುವ ನೋವನ್ನು ನಾಲ್ಕು ದಿಕ್ಕಿನಿಂದಲೂ ಗೋಡೆಗಳು ನೋಡಿ ನಗುವುದು. ಎಷ್ಟು ಸಮಯ ನನಗೆ ಈ ರೀತಿಯ ಟೀಕೆಗೆ ಒಳಪಡುವ ಬಂಧನ. ಅವರಿಬ್ಬರನ್ನು ಕಾಣುವುದಕ್ಕಿಂತ ಹೆಚ್ಚಾಗಿ ನಾನು ಈ ನಿರ್ಜೀವ ಟೀಕಾಕಾರರನ್ನೇ ಕಂಡೆ. ಕುಣಿದಾಡುವ ಬಯಕೆ ನನಗೂ ಇದೆ. ಆದರೆ, ಕಾಲುಗಳು ಸ್ಪಂದಿಸುತ್ತಿಲ್ಲ. ನಗುವಿನ ಆಕಾರವನ್ನೇ ಮರೆತು ಹೋದಂತಾಗಿದೆ. ನಿತ್ಯ ಕಣ್ಣೀರಿನ ಮಟ್ಟದ ಪರೀಕ್ಷೆ. ಇನ್ನೂ ಕಿಂಚಿತ್ತು ಕಡಿಮೆಯಾಗದ ಕಣ್ಣ ನೀರು.
ಪ್ರೀತಿಯ ಅಪ್ಪ, ಮುದ್ದಿನ ಅಮ್ಮ ನಿಮ್ಮನ್ನು ನೆನೆಯದ ದಿನಗಳಿಲ್ಲ. ಅದನ್ನು ತಿಳಿಯಬೇಕೆಂದಿದ್ದರೆ ಈ ಪೆನ್ನು ಪುಸ್ತಕವನ್ನೇ ಕೇಳಿ ನೋಡಿ. ದೂರ ಇರಿಸಿರುವ ನಿಮಗೆ ಪತ್ರ ಬರೆದು ನೋವು ಮಾಡುವ ಹಂಬಲ ನನಗಿಲ್ಲ. ಹಾಗಂತ ಇನ್ನೊಬ್ಬರಲ್ಲಿ ಹೇಳಿಕೊಳ್ಳುವ ಮನಸು ನನ್ನದಲ್ಲ. ಅಲ್ಲದೆ ಯಾರಿಗೂ ಹೇಳದೆ ನೋವನ್ನು ನನ್ನಲ್ಲೇ ತೋಡಿಕೊಳ್ಳಲು ನನಗೆ ಸಾಧ್ಯವಿಲ್ಲ. ಸದ್ಯ ಅನಾಥಳಂತಿರುವ ನನಗೆ ಈಗ ನನ್ನ ಡೈರಿಯೇ ಅಪ್ಪ ಅಮ್ಮ.
ಅಂದು ಎಳೆಯ ವಯಸ್ಸು, ಒಂದೆಡೆ ಭಯ. ಇನ್ನೊಂದೆಡೆ ಬಾಸುಂಡೆ ಬೀಳುವುದೆಂಬ ಆತಂಕ. ಬೇಡ, ನಾನು ದೂರ ಹೋಗಲಾರೆ ಎಂದು ಹೇಳುವ ಧೈರ್ಯವೂ ಇರಲಿಲ್ಲ. ಅವರು ನನ್ನ ಅಕ್ಕರೆಯಿಂದ ಕಳುಹಿಸಿದರೋ. ಅಥವಾ ನನ್ನ ಆರೈಕೆಗೆ ನಿಮ್ಮ ಬಿಡುವು ಒಂದಾಗಲಿಲ್ಲವೋ? ಯಾಕೋ ಏನೋ ನನ್ನ ತಳ್ಳಿ ಬಿಟ್ಟಿರಿ. ಈ ಹಾಸ್ಟೆಲ್ ಲೈಫ್‌ಗೆ. ನಿಮ್ಮ ಪ್ರೀತಿಯು ಹರಿದಾಡುತ್ತಿದ್ದ ನಮ್ಮ ಮನೆಗೆ ನಾನೇ ನೆಂಟಳಾದೆ. ನನ್ನ ನೆರಳು ನಿಮಗೆ ಕಾಡುವ ಭೂತದಂತೆಯೇ. ಯಾಕೋ ನಿಮ್ಮ ಮೇಲಿನ ಕೋಪವನ್ನೆಲ್ಲ ನನ್ನ ಬಳಿ ಇದ್ದ ಪುಟ್ಟ ಗೊಂಬೆಯ ಮೇಲೆ ತೀರಿಸುತ್ತೇನೆ. ಕೊನೆಗೆ 'ಐ ಲವ್ ಯು' ಎನ್ನುತ್ತಾ ಕಣ್ಣೀರಿಡುತ್ತಾ ಮುತ್ತು ನೀಡುತ್ತೇನೆ.
ಹೈಸ್ಕೂಲಿನ ಬದುಕಲ್ಲಾದರೂ ನಾನು ಮನೆಯ ಬಾಗಿಲನ್ನು ಹಾದು, ನಿಮ್ಮ ಬೆಚ್ಚನೆಯ ಅಪ್ಪುಗೆ ಪಡೆದು ಹೋಗುವೆನೇನೋ ಎಂದು ಕನಸು ಕಟ್ಟಿದ್ದೆ. ಆದರೆ ಅಲ್ಲೂ ನನ್ನ ಕನಸು ನನಸಾಗಲಿಲ್ಲ. ಮತ್ತದೇ ಬಂಧನದಲ್ಲಿ ಬಂಧಿಯಾಗಿ ಪ್ರೀತಿಯು ದೊರೆಯದ ಕೈದಿಯಾದೆ. ಮನಸು ಮನದ ಮೂಲೆಯಲ್ಲಿ ಒಂದು ರೀತಿಯ ಕೆಟ್ಟ ಅನುಮಾನವನ್ನು ಹೂಡಲಾರಂಭಿಸಿತು. ನನ್ನ ಜನನವೇ ನಿಮಗೆ ಅನಿಷ್ಟವೇನೋ. ನನ್ನ ಮುಖದ ಚಿತ್ರಣ ನಿಮಗೆ ದುರಂತದ ಹಾದಿಯಾಗಿ ಕಾಣಿಸಿತ್ತೇನೋ. ನನ್ನ ಅವಶ್ಯ ನಿಮಗಿಲ್ಲವೇನೋ. ಅಪ್ಪಿ ತಪ್ಪಿ ಹುಟ್ಟಿ ನಿಮ್ಮಿಬ್ಬರ ಪ್ರೀತಿಯ ಜೀವನಕ್ಕೆ ನಾನು ಮುಳ್ಳು ತಂತಿಯಾದನೇನೋ. ಈ ರೀತಿಯಾಗಿ ಏನೇನೋ ಪ್ರಶ್ನೆಗಳ ಸುರುಳಿಯನ್ನು ಸುತ್ತಿ ಪದಗಳ ಮೂಲಕ ಶೇಖರಿಸಲು ಆರಂಭಿಸಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದು, ಕರಗಿ ಹೋದ ಐಸ್‌ನ ತುಂಡಿನಂತೆ.
ಕಾಲೇಜಿಗೆ ಕಾಲಿಡುವ ಸಂದರ್ಭ ಹುಚ್ಚು ಧೈರ್ಯ ನನ್ನದಾಯಿತು. ಕಾಣದ ಪ್ರೀತಿಯನ್ನು ಹುಡುಕುತ್ತಾ ನಾನೇ ಕಣ್ಮರೆಯಾಗುವಂತೆ. ಆಗಾಗ ವಾರ್ಡನ್ ಕಣ್ತಪ್ಪಿಸಿ ನನಗಿಂತ ಎತ್ತರದ ಗೋಡೆಯ ಬಂಧನವನ್ನು ಭೇದಿಸಿ ನಿಮ್ಮ ಮುಂದೆ ಬಂದು ಯುದ್ಧ ಮಾಡಬೇಕೆಂದು. ಆದರೆ ಹದ್ದಿನ ಕಣ್ಣಿನ ವಾರ್ಡನ್‌ಗಳು, ನೊಂದು ಬೆಂದು ಬೇಸತ್ತ ಮನಸು ಧೈರ್ಯವನ್ನು ಕೈ ಬಿಡುವಂತೆ ಮಾಡಿತು. ನಿಮಗೆ ನಾ ಬೇಡವಾದ ಮೇಲೆ ನನಗ್ಯಾಕೆ ನೀವು ನಿಮ್ಮ ಪ್ರೀತಿ? ಎಂದೆಲ್ಲ ಅನಿಸಿದ್ದುಂಟು. ಆದರೆ ಎಷ್ಟಾದರೂ ಜೀವ ಕೊಟ್ಟವರು ನೀವು. ನರಕ ಸ್ವರ್ಗವು ಒಂದೇ ಕಡೆ ಇರುವಂಥ ಈ ಪ್ರಪಂಚವನ್ನು ಪರಿಚಯಿಸಿದವರು ನೀವು. ಕೋಪಗೊಂಡು ಮನಬಂದಂತೆ ಬೈದರೂ, ಗೋಡೆಯ ಮೂಲೆಯ ಅಳುಬುರುಕಿ ನಾನಾದೆ. ಸ್ನೇಹಿತರು ನನ್ನ ಬಳಿ ತೋಡಿಕೊಳ್ಳುವ ಬಾಂಧವ್ಯದ ಘಳಿಗೆಯು ನನಗೆ ವಿಷ ಗುಳಿಗೆಯಂತೆ ಕಾಣುತಿದ್ದವು. ನಾನು ಪಾಪಿಯೆಂದು, ನನಗಂಥ ಪ್ರೀತಿಯ ಪಡೆಯಲಾಗಲಿಲ್ಲವೆಂದು. ಆದರೂ ಒಂದು ರೀತಿಯ ನಂಬಿಕೆ ನನಗಿದೆ. ಮುಂದೊಂದು ದಿನವಾದರು ಸಾವಿರ ಪಟ್ಟು ಪ್ರೀತಿ ಕೊಡುವಿರಿ, ಒಂದು ಕ್ಷಣವೂ ನನ್ನ ಬಿಟ್ಟು ಇರದಿರುವಿರಿ, ನೋವಿನ ವಿಚಾರಗಳೆಲ್ಲ ಮುಂದೊಂದು ದಿನ ದೂರದ ವಿಚಾರವಾಗುದೆಂದು ನಾನು ನಂಬಿದ್ದೇನೆ.
ಪ್ರೀತಿಯ ಅಪ್ಪ ಮುದ್ದಿನ ಅಮ್ಮ... ಸುಸ್ತಾಯಿತು ನನಗೆ, ನಿದ್ದೆ ಬರ್ತಾ ಇದೆ. ಇನ್ನೂ ನಾಳೆ ಮಾತಾಡೋಣ. ನನ್ನ ಪೆನ್ನಿಗೂ ನಿದ್ರೆ ಬರ್ತಾ ಇದೆಯಂತೆ. ಡೈರಿಯು ಪೆನ್ನಿಗೆ ಹೊದಿಕೆಯಾಗಬೇಕೆನ್ನುತ್ತಿದೆ. ಬಾಯ್... ಗುಡ್‌ನೈಟ್... ಇತಿ ನಿಮ್ಮ ಪ್ರೀತಿಯ ಮಗಳು ಎಂದು ಆಕೆ ಆ ದಿನದ ಡೈರಿ ಮುಗಿಸಿದಳು.
ಇಂಥ ನೋವು ಹಾಸ್ಟೆಲ್ಲನ್ನೇ ಮನೆಯಾಗಿ ಕಾಣುತ್ತಿರುವ ಎಲ್ಲ ಮನಸಿನೊಳಗೂ ಗೂಡು ಕಟ್ಟಿರುತ್ತದೆ. ಹಾಗೆಂದ ಮಾತ್ರಕ್ಕೆ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲವೆಂದಲ್ಲ ಪರಿಸ್ಥಿತಿಯ ಆಟಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಇದೇ ರೀತಿಯ ನೋವು ಆ ನಿಮ್ಮ ಪೋಷಕರಲ್ಲೂ ಕಾಣುತ್ತದೆ. ನನಗ್ಯಾರೂ ಇಲ್ಲ, ನಾ ಯಾರಿಗೂ ಬೇಕಿಲ್ಲ ಎಂಬ ಮನೋಭಾವನ್ನು ಹೋಗಲಾಡಿಸಿ ಎಲ್ಲರೂ ನನ್ನೊಂದಿಗೆ ಇರುವರು ಅಂದುಕೊಂಡಾಗ ಅದರಲ್ಲಿ ಇರೋ ತೃಪ್ತಿ ಇನ್ನಾವುದೂ ಇಲ್ಲ. ಓದು ಅನ್ನೋದು ತಪಸ್ಸು. ಆ ತಪಸ್ಸಿನ ನಡುವೆ ಇಂಥ ಹಲವು ಸಂಕಷ್ಟ ಹಾದುಹೋಗಲೇಬೇಕು. ಆಗಲೇ ನಾವು ಇನ್ನೊಬ್ಬರಿಗೆ ದಾರಿ ಆಗಲು ಸಾಧ್ಯ.
ಫೋನು ಮಾಡಿದಾಗ 'ನೀನು ಚೆನ್ನಾಗಿ ಓದುತ್ತಿರುವೆ ಅಲ್ಲವೇ?' ಎಂದು ಪೋಷಕರು ಮಕ್ಕಳಿಗೆ ಕೇಳದಿರಿ. ಮೊದಲು ಅವರ ಆರೋಗ್ಯಕ್ಷೇಮ ವಿಚಾರಿಸಿ. ಏಕೆಂದರೆ ನಾನು ದೂರವಿದ್ದರೂ ನನ್ನ ಮೇಲೆ ಕಾಳಜಿ ಅವರಿಗಿಲ್ಲ. ನನ್ನ ಓದೇ ಅವರಿಗೆ ಮುಖ್ಯ ಎಂದು ಓದಿನಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಡೈರಿ ಬರೆಯುವ ಅಭ್ಯಾಸ ಎಲ್ಲ ಮಕ್ಕಳಲ್ಲಿ ಇದ್ದರೆ ಇಂಥ ನೋವಿನಿಂದ ತುಸು ಮಟ್ಟಿಗೆ ದೂರ ಇರಬಹುದು. ಯಾಕೆಂದರೆ ಇಲ್ಲಿ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯ.
ಕಾರ್ತಿಕ್ ಹೆಗಡೆ