ಕರ್ನಾಟಕ ಅತ್ಯಾಚಾರಿಗಳ ನಾಡಾಗುತ್ತಿದೆಯೇ? ಈ ಸುಶಿಕ್ಷಿತ ನಾಡಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲವೇ?
ಈಗ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದ ಬಳಿಕ ಎಲ್ಲ ಹೆಣ್ಣುಮಕ್ಕಳ ತಲೆಯಲ್ಲಿ ಇಂಥದ್ದೊಂದು ಪ್ರಶ್ನೆ ಸಹಜವಾಗಿ ಕಾಡಲಾರಂಭಿಸಿದೆ.
ಸರ್ಕಾರದ ಚುಕ್ಕಾಣಿ ಹಿಡಿದವರು ಈ ಅಮಾನವೀಯ ಕೃತ್ಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚಿಸುವಾಗಲೇ ನಿದ್ರಿಸುತ್ತಾರೆ! ರೇಪ್ ಆದ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿಯುತ್ತಾರೆ, ಇನ್ನೊಂದು ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ದೂರು ನೀಡಲು ಮುಂದಾದರೂ ಸಾಕ್ಷ್ಯಗಳನ್ನು ಪರಿಶೀಲಿಸುವುದಿಲ್ಲ. ದೂರನ್ನೇ ದಾಖಲಿಸಿಕೊಳ್ಳುವುದಿಲ್ಲ. ಏಕೆ ಹೀಗಾಗುತ್ತಿದೆ?
ರಾಜ್ಯದಲ್ಲಿ ಒಂದೇ ದಿನ ಹತ್ತಕ್ಕೂ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆ ಎಷ್ಟಿದೆಯೋ? ಕೇವಲ ವಾರವೊಪ್ಪತ್ತಿನಲ್ಲಿನ ಈ ಪ್ರಕರಣಗಳಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಕಳಿಸಲೂ ಹೆದರುವಂತಾಗಿದೆ. ಈ ಹಿಂದೆ ಬಿಹಾರ, ಉತ್ತರಪ್ರದೇಶಗಳು ಅತ್ಯಾಚಾರಕ್ಕೆ ಕುಖ್ಯಾತಿಗಳಿಸಿದ್ದವು. ಈಗ ಈ ರಾಜ್ಯಗಳ ಸಾಲಿಗೆ ವಿದ್ಯಾವಂತರ, ಬುದ್ಧಿವಂತರ ನಾಡಾದ ಕರ್ನಾಟಕವೂ ಸೇರಿದೆಯಲ್ಲ ಇದಕ್ಕೆ ಏನನ್ನೋಣ?
ಕ್ಷಣಿಕ ಕಾಮತೃಷೆ ತೀರಿಸಿಕೊಳ್ಳಲು ಮಕ್ಕಳು-ಮರಿಗಳೆನ್ನದೆ ಎಲ್ಲರ ಮೇಲೂ ಪುರುಷರು ಪಶುಗಳಂತೆ ಎರಗುತ್ತಿರುವುದು ದಿಗಿಲು ಹುಟ್ಟಿಸಿದೆ. ತಂದೆಯ ಸಮಾನನಾಗಿರಬೇಕಿದ್ದ ಮಾವನೇ ಸೊಸೆಯ ಮೇಲೆ ಅತ್ಯಾಚಾರ ನಡೆಸುತ್ತಾನೆ, ಮೂರು ತಿಂಗಳು ಸಂಸಾರವನ್ನೂ ಮಾಡುತ್ತಾನೆಂದರೆ ಹೆಣ್ಣಿಮಕ್ಕಳು ನಂಬುವುದಾದರೂ ಯಾರನ್ನು?
ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಹೆಣ್ಣನ್ನು ಆರಾಧಿಸಿದ, ಮಾತೃದೇವೋಭವ ಎಂದು ಕರೆದ ಪರಂಪರೆ ನಮ್ಮದು. ಸ್ವಾಮಿ ವಿವೇಕಾನಂದರು ಪಾಶ್ಚಾತ್ಯರಿಗೆ ಹೆಣ್ಣು ಕೇವಲ ಭೋಗದ ವಸ್ತು. ಆದರೆ, ಭಾರತೀಯರಿಗೆ ಹೆಣ್ಣೆಂದರೆ ತಾಯಿ, ಜಗನ್ಮಾತೆ ಎಂದಿದ್ದರು. ಇಂಥ ಸುಸಂಸ್ಕೃತರ ನೆಲದಲ್ಲೇ ಈಗ ಹೆಣ್ಣು ಭೋಗದ ವಸ್ತುವಾಗುತ್ತಿದ್ದಾರೆ. ಇದೆಂಥ ವಿಪರ್ಯಾಸ...!
- ಶ್ರೀಗೌರಿ ಎಸ್. ಜೋಶಿ
ಪತ್ರಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು, ಮೂಡುಬಿದಿರೆ