ಶ್ರೀನಿಧಿಗೆ ಅಪ್ಪಅಮ್ಮನಿಗಿಂತ ಅಜ್ಜಿಯೆಂದರೆ ಅಚ್ಚುಮೆಚ್ಚು. 'ನನ್ನ ಕಂಕುಳಿನಲ್ಲಿ ಗಳಿಗೆ ಕೂಡ ಇರದೆ ನನ್ನಮ್ಮನ ಕಂಕುಳಿಗೆ ಹನುಮನ ಹಾಗೆ ಹಾರುತ್ತಿಯಲ್ಲೋ ಬಡವ' ಎಂದು ಸುಶೀಲಮ್ಮ ರೇಗದ ದಿನವೇ ಇಲ್ಲ. ಶೇಷಪ್ಪ ಶ್ರೀನಿಧಿಯ ಬಳಿ 'ನೀನಾಯಿತು, ಅತ್ತೆಯಾಯ್ತು, ಇನ್ನು ನಮಗೇನು ಕೆಲಸ' ಅಂತ ನಿಟ್ಟುಸಿರು ಬಿಡುವುದು ಮಾಮೂಲು. ಸುಬ್ಬಜ್ಜಿ ಮೊಮ್ಮಗನನ್ನು ಸಂತೆ, ಜಾತ್ರೆ, ನವಿಲಳ್ಳಿ ಶಾಲಾ ಮೈದಾನದಲ್ಲಿ ಸರ್ಕಸ್ ಬೀಡು ಬಿಟ್ಟರೆ ಅಲ್ಲಿಗೆ ಹೀಗೆ ಹೊರಗೆ ಕರೆದೊಯ್ಯುತ್ತಲೇ ಇರುತ್ತಾರೆ. ಜೈಂಟ್‌ವೀಲ್‌ನಲ್ಲಿ, ಸುತ್ತು ಉಯ್ಯಾಲೆಯಲ್ಲಿ ಶ್ರೀನಿಧಿ ಕೂತಾಗ ಅವನಿಗಿಂತ ಅಜ್ಜಿಯೇ ಹೆಚ್ಚು ಖುಷಿಪಡುತ್ತಾರೆ. 'ನಿಮ್ಮಪ್ಪ ವಿಮಾನದಲ್ಲಿ ಹೋಗ್ತಾಯಿರ್ತಾನಲ್ಲ ಅವನು ಕೂಡ ನಿನ್ನಷ್ಟು ಹಿಗ್ಗಿರೋಲ್ಲ ಕಣೊ ಮರಿ' ಅಂತ ಅಜ್ಜಿ ಶ್ರೀನಿಧಿಯ ಕೆನ್ನೆ ಚಿವುಟುತ್ತಾರೆ.
ಆ ದಿನ ಭಾನುವಾರ. ಅಜ್ಜಿ ಬೆಳ್ಳಂಬೆಳಗ್ಗೆ ಆರು ಗಂಟೆಗೇ ಎದ್ದರು. ಅಪ್ಪ, ಅಮ್ಮನ ಮಧ್ಯೆ ಸಕ್ಕರೆ ನಿದ್ರೆಯಲ್ಲಿದ್ದ ಶ್ರೀನಿಧಿಯನ್ನು ಎಬ್ಬಿಸಿ 'ಮರಿ, ಬಾ ಬೇಗ. ನಿನಗೆ ಒಂದು ತಮಾಷೆ ತೋರಿಸ್ತೀನಿ ಇವತ್ತು. ಬೇಕಾದ್ರೆ ನಿನ್ನ ಅಪ್ಪ-ಅಮ್ಮನೂ ಬರ್ಲಿ' ಎಂದರು. ಸುಶೀಲಮ್ಮ 'ಅಯ್ಯೋ, ನಾವು ಬಂದ್ರೆ ನಿಧಿ ಬೇಡ ಅಂತ ರಂಪ ಮಾಡ್ತಾನೆ. ನೀವು ಬೇಗ ಹೋಗಿ ಬೇಗ ಬಂದ್ಬಿಡಿ. ಇಬ್ರಿಗೂ ತಿಂಡಿ ರೆಡಿ ಮಾಡ್ತೀನಿ' ಎಂದರು. ಸುಬ್ಬಜ್ಜಿ ಶ್ರೀನಿಧಿಯನ್ನು ನಿಧಾನಕ್ಕೆ ನಡೆಸಿಕೊಂಡು ಹೊಳೆಯ ತೀರಕ್ಕೆ ಹೆಜ್ಜೆಯಿಟ್ಟರು. ಅಲ್ಲೊಂದು ಕಟ್ಟೆ. ಹತ್ತಾರು ಮಂದಿ ಪ್ರತಿನಿತ್ಯ ಅದರ ಮೇಲೆ ನಿಂತು ಸೂರ್ಯೋದಯದ ದೃಶ್ಯ ನೋಡಿ ಆನಂದಿಸುತ್ತಾರೆ. ನೋಡಿದೆಯ ನಮ್ಮೂರಿನ ಹೊಳೆ ಹೇಗೆ ಹರಿಯುತ್ತದೆ? ಈ ಹೊಳೆ ಹರಿದರೇನೆ ಊರಿಗೆ ಜೀವ, ಜೀವನ ಮುಂತಾಗಿ ಅಜ್ಜಿ ವಿವರಿಸಿದರು. ತಂಗಾಳಿ ಬೀಸುತ್ತಿತ್ತು. ಇನ್ನೇನು ಸೂರ್ಯ ಉದಯಿಸುವ ಸಮಯ ಎಲ್ಲರೂ ಆ ಅಮೂಲ್ಯ ಕ್ಷಣಗಳಿಗೆ ತವಕದಿಂದ ಕಾದಿದ್ದರು. ಸರಿಯಾಗಿ ಆರು ಗಂಟೆ ಮೂವತ್ನಾಲ್ಕು ನಿಮಿಷಕ್ಕೆ ಸೂರ್ಯರಾಜ ಮೆಲ್ಲಗೆ ಹೊಳೆಯಿಂದ ಮೇಲೆದ್ದ. ನೀರಿನಲ್ಲಿ ಅವನ ರಶ್ಮಿಗಳು ಪ್ರತಿಫಲಿಸಿ ಇಡೀ ಹೊಳೆಗೆ ಚಿನ್ನದ ರಂಗು ಬಂದಿತು. ಕಟ್ಟೆಯ ಮೇಲಿನಿಂದ ಈ ಸೊಬಗಿನ ನೋಟ ಸವಿದ ಮಂದಿ, 'ಅಬ್ಬಬ್ಬ! ಎಷ್ಟು ಜನಕ್ಕುಂಟು ಇಂಥ ಯೋಗ?' ಅಂತ ಬೆರಗುಗೊಂಡರು. ಸುಬ್ಬಜ್ಜಿ ಶ್ರೀನಿಧಿಯನ್ನು ಎತ್ತಿಕೊಂಡು ಸೂರ್ಯೋದಯದ ದೃಶ್ಯ ತೋರಿಸಿದರು. ಆ ಪೋರನೂ ಅದೆಷ್ಟು ಹಿಗ್ಗಿ ಹೋದನೆಂದರೆ ಅಜ್ಜಿ, 'ಈ ಸೂರ್ಯನನ್ನು ನಾವು ಮನೆಗೆ ತೆಗೆದುಕೊಂಡು ಹೋಗೋಣ. ಪ್ರತಿದಿನ ಬೆಳಗ್ಗೆ ಅವನು ಮೇಲೇರುವುದನ್ನು ಕಾಣೋಣ. ಅವನು ನಮ್ಮ ಹಿತ್ತಲಿನಲ್ಲಿರಲಿ' ಎನ್ನುವುದೇ!
'ಮರೀ, ಹಾಗೆಲ್ಲ ಹಟ ಮಾಡಬಾರದು. ಯಾವ ಮಗೂನೂ ನಿನ್ನ ಹಾಗೆ ಸೂರ್ಯನನ್ನು ಮನೆಗೆ ಒಯ್ಯೋಣ ಅನ್ನೋಲ್ಲ ಗೊತ್ತೇ' ಎಂದು ಸುಬ್ಬಜ್ಜಿ ಶ್ರೀನಿಧಿಗೆ ಪರಿಪರಿಯಾಗಿ ಹೇಳಿದರೂ ಪ್ರಯೋಜನವಾಗಲಿಲ್ಲ. ಅಲ್ಲಿದ್ದ ಜನ ಮಗುವಿನ ಹಠ ನೋಡಿ ನಕ್ಕರು. ಮೊಮ್ಮಗನನ್ನು ಕರೆದುಕೊಂಡು ಬಂದಿದ್ದೇ ತಪ್ಪಾಯ್ತು. ಸೂರ್ಯನಿಲ್ಲದೆ ಮನೆಗೇ ಬರೋಲ್ಲ ಅಂತಿದ್ದಾನಲ್ಲ ಈ ಮಾರಾಯ. ಈಗೇನು ಮಾಡುವುದು ಎಂದು ಮಂಡೆಬಿಸಿ ಮಾಡಿಕೊಂಡ ಸುಬ್ಬಜ್ಜಿಗೆ ಕಡೆಗೂ ಒಂದು ಉಪಾಯ ಹೊಳೆಯಿತು.
'ಅಲ್ಲಪ್ಪಾ, ಶ್ರೀನಿಧಿ ಮರಿ, ಒಂದು ವೇಳೆ ನೀನು ಹೇಳಿದಂತೆ ಸೂರ್ಯನನ್ನು ನಮ್ಮ ಮನೆಯ ಹಿತ್ತಲಿಗೆ ಹೊತ್ತುಕೊಂಡು ಹೋಗ್ತೀವಿ ಅಂತಾನೆ ಇಟ್ಕೊ. ಆಗ ನಮ್ಮ ಮನೆಯವರಿಗೆ ಮಾತ್ರ ಸೂರ್ಯೋದಯದ ದೃಶ್ಯ ಸಿಗುತ್ತೆ ಅಷ್ಟೆ. ಪಾಪ, ನಾಳೆ, ನಾಡಿದ್ದು ಬೇಕಾದಷ್ಟು ಜನ ಹೊಳೆ ಹತ್ತಿರ ಬರ್ತಾರಲ್ಲ ಅವರಿಗೆ ಆ ಸುಂದರ ನೋಟ ಸಿಗೋಲ್ಲ ಅಲ್ವಾ? ಹಾಗಾಗಿ ನಾವು ನಮ್ಮ ಪಾಡು ಮಾತ್ರ ನೋಡದೆ ಬೇರೆಯವರದನ್ನು ಲಕ್ಷಿಸಬೇಕು ತಾನೆ? ಅದಕ್ಕಾಗಿ ಸೂರ್ಯನನ್ನು ಇಲ್ಲೇ ಬಿಟ್ಟು ಹೋಗೋಣ. ಬೇಕಾದಾಗಲೆಲ್ಲ ನಾವು ನಮ್ಮನೆಯವರು ಎಲ್ರೂ ಬೆಳಗ್ಗೇನೆ ಬಂದ್ರಾಯ್ತು, ಸರೀನಾ?' ಎಂದರು.
ಶ್ರೀನಿಧಿ 'ಹೌದಜ್ಜಿ, ಸೂರ್ಯ ಇಲ್ಲೇ ಚೆನ್ನಾಗಿರಲಿ' ಎಂದ.
- ಬಿಂಡಿಗನವಿಲೆ ಭಗವಾನ್