ಆರೋಗ್ಯ ಕವಚ 194 ಸಿಬ್ಬಂದಿ ವಜಾ
ಉದ್ಯೋಗ ಭದ್ರತೆ ಹಾಗೂ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಆರೋಗ್ಯ ಕವಚ(108) ಆ್ಯಂಬುಲೆನ್ಸ್ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ...
ಕ.ಪ್ರ.ವಾರ್ತೆ ಬೆಂಗಳೂರು ಆ. 5
ಉದ್ಯೋಗ ಭದ್ರತೆ ಹಾಗೂ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಆರೋಗ್ಯ ಕವಚ(108) ಆ್ಯಂಬುಲೆನ್ಸ್ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ, ನೂರಾರು ಸಿಬ್ಬಂದಿ ವಜಾ ನಡುವೆಯೂ ಹತ್ತನೇ ದಿನಕ್ಕೆ ತಲುಪಿದೆ.
ಮುಷ್ಕರ ಕೈಬಿಡದಿದ್ದರೆ ಹೊಸ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು ಎಂದು ಆರೋಗ್ಯ ಕವಚ ಯೋಜನೆ ನಿರ್ವಹಣಾ ಸಂಸ್ಥೆ ಜಿವಿಕೆ ಒಂದೆಡೆ ಹೇಳುತ್ತಿದ್ದರೆ, ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಆರೋಗ್ಯ ಕವಚ(108) ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
ಈ ನಡುವೆ ಸಚಿವರಾದ ದಿನೇಶ್ ಗುಂಡೂರಾವ್, ಟಿ.ಬಿ.ಜಯಚಂದ್ರ, ಶಾಸಕ ಪುಟ್ಟಣ್ಣಯ್ಯ ಅವರು ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ್ದರೂ ಅದು ಈಡೇರಲಿಲ್ಲ. ಸಮಸ್ಯೆ ಪರಿಹಾರ ಬಗ್ಗೆ ಸೋಮವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಜತೆ ಮಾತುಕತೆ ನಿಗದಿಪಡಿಸಲಾಗಿದ್ದರೂ ಅವರು ನಗರದಲ್ಲಿ ಲಭ್ಯವಿರದ ಕಾರಣ ಮಾತುಕತೆ ನಡೆದಿಲ್ಲ. ಹಾಗಾಗಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಕವಚ ಸಿಬ್ಬಂದಿ ಜು. 26ರ ಸಂಜೆಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಈ ಎಲ್ಲ ಬೆಳವಣಿಗೆಗಳ ನಡುವೆ ಹತ್ತನೇ ದಿನ ತಲುಪಿದೆ.
ಮಣಿಯದಿದ್ದರೆ ಹೊಸ ಸಿಬ್ಬಂದಿ ನೇಮಕ: ಮುಷ್ಕರ ನಿರತರ ಪೈಕಿ 194 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಜತೆಗೆ, ಪರ್ಯಾಯ ವ್ಯವಸ್ಥೆಗಾಗಿ ಈಗಾಗಲೇ ಆರೋಗ್ಯ ಕವಚ ವಾಹನ ಚಾಲಕ ಹಾಗೂ ತುರ್ತು ಶುಶ್ರೂಷಕ ಹುದ್ದೆಗಾಗಿ ಒಟ್ಟು 800 ಅಭ್ಯರ್ಥಿಗಳ ಸಂದರ್ಶನ ನಡೆಸಲಾಗಿದೆ. ಹಳೇ ಸಿಬ್ಬಂದಿ ಮಾತುಕತೆಗೆ ಆಗಮಿಸಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವ ಭರವಸೆ ಇದೆ. ಒಂದು ವೇಳೆ ಅವರು ಇದೇ ರೀತಿ ಮುಷ್ಕರ ಮುಂದುವರಿಸಿದರೆ ಹೊಸ ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿವಿಕೆ ಸಂಸ್ಥೆಯ ರಾಜ್ಯ ಮುಖ್ಯಸ್ಥ ಜಗದೀಶ್ ಪಾಟೀಲ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಭದ್ರತೆ ಅಂದರೆ ಕಾಯಂ ಸರ್ಕಾರಿ ನೌಕರಿಯಲ್ಲ
ಉದ್ಯೋಗ ಭದ್ರತೆ ಎಂದರೆ ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂದರ್ಥವಲ್ಲ. ಆರೋಗ್ಯ ಕವಚ ಯೋಜನೆ ಇರುವವರೆಗೂ ತಮಗೆ ಯಾವುದೇ ಕಿರುಕುಳ ನೀಡದೆ ಚಾಲಕ-ಶುಶ್ರೂಷಕ ಹುದ್ದೆಯಲ್ಲಿ ಮುಂದುವರಿಸಬೇಕು ಎಂದರ್ಥ ಎಂದು ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ತಿಳಿಸಿದ್ದಾರೆ. ಜಿವಿಕೆ ಸಂಸ್ಥೆ ಹಲವು ಕಾರಣಗಳನ್ನೊಡ್ಡಿ ಇದುವರೆಗೆ 1092 ಚಾಲಕ ಹಾಗೂ 1483 ಶುಶ್ರೂಷಕ(ಇಎಂಟಿ)ರನ್ನು ಕೆಲಸದಿಂದ ತೆಗೆದುಹಾಕಿದೆ. ಅವರಲ್ಲಿ ಹಲವರ ವಿರುದ್ಧ ವಿನಾಕಾರಣ ಕರ್ತವ್ಯಲೋಪದ ಆರೋಪ ಹೊರಿಸಿರುವ ಸಂಸ್ಥೆ, ಮತ್ತೆ ಕೆಲವರಿಂದ ಬಲವಂತದ ರಾಜೀನಾಮೆ ಪಡೆದಿದೆ. ಇಷ್ಟು ಪ್ರಮಾಣದಲ್ಲಿ ಕೆಲಸದಿಂದ ತೆಗೆದುಹಾಕಿರುವ ಮಾಹಿತಿಯನ್ನು ಸಂಸ್ಥೆಯ ಮುಖ್ಯಸ್ಥರೇ 2012ರ ಫೆ. 24ರಂದು ಸದನದಲ್ಲಿ ತಿಳಿಸಿದ್ದಾರೆ. ಹೀಗೆ ಸಂಸ್ಥೆ ತನ್ನ ಮನಸ್ಸಿಗೆ ಬಂದಂತೆ ವರ್ತಿಸಿ ಸಿಬ್ಬಂದಿಗೆ ಕಿರುಕುಳು ನೀಡುತ್ತಿರುವುದರಿಂದ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಉದ್ಯೋಗ ಭದ್ರತೆ ನೀಡುವವರೆಗೂ ತಮ್ಮ ಮುಷ್ಕರ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.