ಪರಮೇಶ್ವರ ಸಿಎಂಗಿರಿಗೆ ಮಠಾಧೀಶರ ವಕಾಲತ್ತು!
ಅಧಿಕಾರದಿಂದ ವಂಚಿತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಪರ ಇದೀಗ ಮಠಾಧೀಶರು ಬ್ಯಾಟಿಂಗ್ ಆರಂಭಿಸಿದ್ದಾರೆ! 35ಕ್ಕೂ ಹೆಚ್ಚು ಮಠಾಧೀಶರು ...
ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ ತುಮಕೂರು ಆ. 5
ಅಧಿಕಾರದಿಂದ ವಂಚಿತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಪರ ಇದೀಗ ಮಠಾಧೀಶರು
ಬ್ಯಾಟಿಂಗ್ ಆರಂಭಿಸಿದ್ದಾರೆ!
35ಕ್ಕೂ ಹೆಚ್ಚು ಮಠಾಧೀಶರು ಡಾ. ಜಿ.ಪರಮೇಶ್ವರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ, 'ಹುಟ್ಟು ಹಬ್ಬ ರಾಜಕೀಯ ಪುನರ್ಜನ್ಮ' ಆಗಬೇಕೆಂದು ಆಶಿಸಿದರು. ಇದೇ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಪರಮೇಶ್ವರಗೆ ಸ್ಥಾನಮಾನ ನೀಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಪರ ವಕಾಲತ್ತು ವಹಿಸುತ್ತಿರುವವರ ಪಟ್ಟಿಯಲ್ಲಿ ಇದೀಗ ಮಠಾಧೀಶರೂ ಸೇರಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ಬರಲು ಕಾರಣರಾದ ಡಾ. ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದಾರೆ.
ಶುಭಾಶಯ: ಮಂಗಳವಾರ ಡಾ. ಜಿ.ಪರಮೇಶ್ವರ ಅವರ 63ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 35ಕ್ಕೂ ಹೆಚ್ಚು ಮಠಾಧೀಶರು ತುಮಕೂರಿನ ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿ ಹುಟ್ಟುಹಬ್ಬ ರಾಜಕೀಯ ಪುನರ್ಜನ್ಮ ತಾಳಲಿ ಅಂತ ಆಶಿಸಿದರು. ಈ ವೇಳೆ ಮಾತನಾಡಿದ ವಿವಿಧ ಯತಿಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಜನಸ್ನೇಹಿ ಪರಮೇಶ್ವರ ಅವರನ್ನ ಸಿಎಂ ಅಥವಾ ಡಿಸಿಎಂ ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀಸಿದ್ದಗಂಗಾ ಮಠದ ಕಿರಿಯ ಶ್ರೀ ಸಿದ್ದಲಿಂಗಸ್ವಾಮಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದನ ಆಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ, ದಸರಿಘಟ್ಟದ ಶ್ರೀಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ, ತಂಗನಹಳ್ಳಿಯ ಶ್ರೀಬಸವಲಿಂಗಸ್ವಾಮೀಜಿ, ವಿಶ್ವಕುಂಚಟಿಗ ಮಹಾಸಂಸ್ಥಾನ ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಕರಿಬಸವ ಮಠದ ಗವಿರಾಜೇಂದ್ರ ಮಹಾಸ್ವಾಮೀಜಿ, ಮಾದರ ಚನ್ನಯ್ಯಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ, ಕುಣಿಗಲ್ನ ಸಿದ್ದರಾಮೇಶ್ವರ ಸ್ವಾಮೀಜಿ, ಗೋಡೇಕೆರೆ ಮೂರುಸಾವಿರ ಮಠದ ಷಡಕ್ಷರ ಸ್ವಾಮೀಜಿ, ಕುಂಚಟಿಗ ಸಮಾಜದ ಶಾಂತವೀರ ಸ್ವಾಮೀಜಿ, ನೊಣವಿನಕೆರೆಯ ಕಾಡುಸಿದ್ದೇಶ್ವರ ಸ್ವಾಮೀಜಿ, ಮಡಿವಾಳ ಮಾಚೀದೇವ ಮಠದ ಕೇತೇಶ್ವರ ಸ್ವಾಮೀಜಿ, ಮೌಲ್ವಿ ಮಹಮದ್ ಕುರಬಾನ್ ಅಸಾದಿ, ಗುಬ್ಬಿಗೇಟ್ನ ಮಸೀದಿಯ ಮೌಲ್ವಿ, ಸಂತ ಲೂರ್ದು ಮಾತಾ ದೇವಾಲಯದ ಫಾದರ್ ಭರತಲೋಮಿಯಾ, ಚಿತ್ರದುರ್ಗದ ಕೃಷ್ಣಮಠದ ಯಾದವಾನಂದ ಸ್ವಾಮೀಜಿಗಳು ಪರಮೇಶ್ವರ ಅವರನ್ನು ಭೇಟಿ ಮಾಡಿದರು.