ಅಧಿಕೃತ ಒಪ್ಪಂದವಿಲ್ಲ: ಬಿಜೆಪಿ ನಿರ್ಧಾರ
ಕ.ಪ್ರ.ವಾರ್ತೆ ಬೆಂಗಳೂರು ಆ. 6
ರಾಷ್ಟ್ರೀಯ ಮುಖಂಡರ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಜತೆ ಅಧಿಕೃತ ಒಪ್ಪಂದ ಮಾಡಿಕೊಳ್ಳದೇ ಇರಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅಧಿಕೃತ ಒಪ್ಪಂದಕ್ಕೆ ಜೆಡಿಎಸ್ ಒಪ್ಪಿಗೆ ನೀಡದೇ ಇರುವ ಹಿನ್ನೆಲೆಯಲ್ಲಿ ಎರಡು ಕಡೆ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ. ಆದರೆ ಮೂಲಗಳ ಪ್ರಕಾರ ಜೆಡಿಎಸ್- ಬಿಜೆಪಿ ನಡುವೆ ಒಳ ಒಪ್ಪಂದ ಮುಂದುವರಿಯಲಿದೆ. ಎರಡು ಕ್ಷೇತ್ರಗಳಲ್ಲಿ ನಾಮಕೇವಾಸ್ತೆ ಅಭ್ಯರ್ಥಿಗಳನ್ನು ಹಾಕಲಾಗಿದ್ದು, ಅವರು ಸಲ್ಲಿಸಿರುವ ನಾಮಪತ್ರವನ್ನು ವಾಪಾಸ್ ಪಡೆಯದೇ ಇರಲು ನಿರ್ಧರಿಸಲಾಗಿದೆ. ಜೆಡಿಎಸ್, ಬಿಜೆಪಿ ಜತೆ ಬಹಿರಂಗವಾಗಿ ಒಪ್ಪಂದಕ್ಕೆ ಸಿದ್ದವಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಸ್ತಾಪ ಮುರಿದು ಬಿದ್ದಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಂ.ಕೃಷ್ಣಪ್ಪ ಹಾಗೂ ಮಂಡ್ಯದಿಂದ ದೊರೆಸ್ವಾಮಿ ಅವರೇ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಆ ಮೂಲಕ ಜೆಡಿಎಸ್‌ಗೆ ಪರೋಕ್ಷ ಸಹಾಯ ಮಾಡುವ ಪ್ರಯತ್ನ ನಡೆದಿದೆ.