ದೇವಾಲಯದ ಬಳಿ ಮಾನವನ ಅಸ್ತಿ ಪತ್ತೆ: ನಾಗರಿಕರು ಆತಂಕ
ಶಿವಮೊಗ್ಗ: ವೈದ್ಯ ಶಿಕ್ಷಣ ವಿದ್ಯಾರ್ಥಿಯೊಬ್ಬ ಅಧ್ಯಯನಕ್ಕೆಂದು ಮನೆಗೆ ತಂದಿಟ್ಟುಕೊಂಡಿದ್ದ ಮಾನವನ ಅಸ್ತಿಗಳು ಬೆಳ್ಳಂಬೆಳಗ್ಗೆ ನಗರದ ಗಾಂಧಿ ಬಜಾರ್ನ ಗಂಗಾ ಪರಮೇಶ್ವರಿ ದೇವಾಲಯದ ಬಳಿ ಪತ್ತೆಯಾಗಿದ್ದು, ನಾಗರಿಕರು ಬೆಚ್ಚಿಬಿದ್ದ ಘಟನೆ ಮಂಗಳವಾರ ನಡೆದಿದೆ. ಬೆಳಿಗ್ಗೆ ಕೆಲವು ಮೂಳೆಗಳು, ತಲೆಬುರುಡೆ ಕಂಡು ನೂರಾರು ನಾಗರಿಕರು ವೀಕ್ಷಿಸಲು ಜಮಾಯಿಸಿದ್ದರು. ಭೀಮನ ಅಮವಾಸ್ಯೆಯಂದೇ ಅಸ್ತಿಕಂಡು ಕಂಡುಬಂದಿದ್ದರಿಂದ ಜನರು ತರೇಹಾವರಿ ಮಾತನಾಡಿಕೊಳ್ಳುತ್ತಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕೋಟೆ ಠಾಣೆ ವೃತ್ತ ನಿರೀಕ್ಷಕ ಜೈರಾಜ್ ಸಿಬ್ಬಂದಿಯೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಅಸ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ಯಲಾಯಿತು.
ಆವಿನಕೇರಿ ರಸ್ತೆಯ ಖಾಲಿ ನಿವೇಶನದಲ್ಲಿ ಕಂಡುಬಂದ ಬ್ಯಾಗನ್ನು ಕೆಲವರು ಕುತೂಹಲದಿಂದ ಪರಿಶೀಲಿಸಿದಾಗ ಈ ಅಸ್ತಿಗಳು ಪತ್ತೆಯಾಗಿದ್ದವು. ಈ ಎಲ್ಲಾ ಅಸ್ತಿಗಳ ಮೇಲೆ ಪ್ರಯೋಗಾಲಯದಲ್ಲಿ ನೀಡುವ ಗುರುತುಗಳು ಇವೆ. ಇವು ಮನೆಯಿಂದ ಹೇಗೆ ಹೊರ ಬಂದವೆಂದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟ ವೈದ್ಯರ ವಿಚಾರಣೆ ನಡೆಯುತ್ತಿದೆ. ಮನೆ ಸ್ವಚ್ಛಗೊಳಿಸುವ ಸಂಬಂಧ ಕೆಲಸಗಾರರು ಅನುಪಯುಕ್ತ ವಸ್ತುಗಳೆಂದು ಭಾವಿಸಿ ಬ್ಯಾಗ್ ಹೊರಗೆ ಎಸೆದಿರಬಹುದು ಎಂದು ಕೋಟೆ ಪೊಲೀಸರು ತಿಳಿಸಿದ್ದಾರೆ.