ಮೈದುಂಬಿದ ಕೃಷ್ಣೆಗೆ ಸಿಎಂ ಬಾಗಿನ
ಕ.ಪ್ರ.ವಾರ್ತೆ ಬಿಜಾಪುರ ಆ. 6
ಉತ್ತರ ಕರ್ನಾಟಕ ರೈತರ ಜೀವನಾಡಿಯಾಗಿರುವ ಬಿಜಾಪುರ ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆ ಮೈದುಂಬಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಮಧ್ಯಾಹ್ನ ಬಾಗಿನ ಅರ್ಪಿಸುವ ಮೂಲಕ ರಾಜ್ಯದ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.
ಅಣೆಕಟ್ಟೆ ಹಿಂಭಾಗದಲ್ಲಿ ಬಾಗಿನ ಅರ್ಪಿಸಲು ಸಜ್ಜುಗೊಳಿಸಿದ ವೇದಿಕೆಗೆ ಜಲ ಸಂಪನ್ಮೂಲ, ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಐಟಿಬಿಟಿ ಸಚಿವ ಎಸ್.ಆರ್. ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ಮತ್ತಿತರ ಗಣ್ಯರೊಂದಿಗೆ ಆಗಮಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿ ನಾಡಿನ ಸಮೃದ್ಧಿಗೆ ಭಗವಂತನಲ್ಲಿ ಪ್ರಾರ್ಥಿಸಿದರು.
ನಂತರ ಸುದ್ದಿಗಾರರ ಜೊತೆಗೆ ಮಾತನಾಡಿ, ರಾಜ್ಯದ ರೇಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಅಗತ್ಯ ಅನುದಾನ ನೀಡಲು ಬದ್ಧವಿದೆ. ಈ ಉದ್ದೇಶಕ್ಕಾಗಿ ಬಜೆಟ್ನಲ್ಲಿ 374 ಕೋಟಿ ಕಾಯ್ದಿಡಲಾಗಿದೆ. ಕೇಂದ್ರ ಸರ್ಕಾರ ರೇಲ್ವೆ ಯೋಜನೆಗಳಿಗೆ ಎಷ್ಟು ಹಣ ಖರ್ಚು ಮಾಡುತ್ತದೆಯೋ ಅದರ ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರ ಒದಗಿಸಲು ಬದ್ಧವಾಗಿದೆ ಎಂದರು.
ನಂಜುಂಡಪ್ಪ ವರದಿ ಅನುಷ್ಠಾನಕ್ಕೆ 2,925 ಕೋಟಿ ಕಾಯ್ದಿಡಲಾಗಿದೆ. ನಂಜುಂಡಪ್ಪ ವರದಿಯಲ್ಲಿ ಒಟ್ಟು 31,000 ಕೋಟಿ ವೆಚ್ಚ ಮಾಡಲು ಶಿಫಾರಸು ಮಾಡಲಾಗಿದೆ. ಈ ಪೈಕಿ 15,000 ಕೋಟಿ ಸಾಮಾನ್ಯ ಯೋಜನೆಗಳು ಹಾಗೂ 16,000 ಕೋಟಿ ಆಯಾ ಪ್ರದೇಶದಲ್ಲಿ ಪ್ರತಿ ವರ್ಷ ರು. 2,000 ಕೋಟಿ ವೆಚ್ಚ ಮಾಡಲಾಗುವುದು ಎಂದರು.