ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೋಟೆಕಲ್ ಅದಿರು ಮೌಲ್ಯವರ್ಧನ ಘಟಕಕ್ಕೆ ಹಸಿರು ನಿಶಾನೆ

Mainashree
Updated On : 8 Aug 2013, 1:16 am

ಕನ್ನಡಪ್ರಭ ವಾರ್ತೆ, ಬಾಗಲಕೋಟೆ, ಆ.7-
ಸದಾ ಬರಗಾಲ-ಬಡತನ ಹೊದ್ದು ಮಲಗುವ ಪ್ರದೇಶವೆಂದೇ ಗುರುತಿಸಲ್ಪಡುವ ಬಾದಾಮಿ ಗುಳೇದಗುಡ್ಡ ಹೋಬಳಿ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಬೇಕೆನ್ನುವ ಬಹು ದಶಕಗಳ ಕನಸು ಈಗ ನಿಧಾನವಾಗಿ ಚಿಗುರುತ್ತಿದೆ.
ಅಂದುಕೊಂಡಂತೆ ಎಲ್ಲವೂ ಸುರಳಿತವಾಗಿ ನಡೆದರೆ ಇನ್ನೇನು ಕೆಲವೇ ತಿಂಗಳಲ್ಲಿ ಗುಳೇದಗುಡ್ಡ ಪಕ್ಕದ ಕೋಟೆಕಲ್ ಗ್ರಾಮ ವ್ಯಾಪ್ತಿಯಲ್ಲಿ ಮೇ. ಕೆಎನ್‌ಕೆ ಕಾರ್ಪ್ (ಪ್ರೈ) ನಿಯಮಿತದ ಅದಿರು ಮೌಲ್ಯವರ್ಧನ ಘಟಕ ತಲೆ ಎತ್ತಲಿದೆ.
ಸದ್ಯ ಈ ಘಟಕಕ್ಕೆ ವಿವಿಧ ಇಲಾಖೆ, ವಿದ್ಯುತ್ ಮತ್ತು ನೀರು ಪೂರೈಸುವ ನಿಗಮಗಳು ಹಾಗೂ ಯೋಜನಾ ಕ್ಷೇತ್ರದ ಸ್ಥಳೀಯರು ಬೆಂಬಲಿಸುತ್ತಿದ್ದಾರೆ.
ಈ ಘಟಕ ಸ್ಥಾಪನೆಗೂ ಮುನ್ನ ಕೋಟೆಕಲ್ ಪ್ರದೇಶದ ಪರಿಸರ, ಅರಣ್ಯ, ಅಂತರ್ಜಲ, ನೀರಿನ ಮೂಲ, ರಸ್ತೆ, 10 ಕಿ.ಮೀ. ಸುತ್ತ ವ್ಯಾಪ್ತಿಯಲ್ಲಿನ ಐತಿಹಾಸಿಕ ಕ್ಷೇತ್ರ, ಜನಜೀವನ ಕುರಿತು ಕೆಎನ್‌ಕೆ ಕಾರ್ಪ್‌ನ ತಾಂತ್ರಿಕ ಸಲಹಾ ಸಂಸ್ಥೆಯಾದ ಬೆಂಗಳೂರಿನ ಮೆಟಮಾರ್ಫೋಸಿಸ್ ನೀಡಿರುವ ಪರಿಸರ ಅಧ್ಯಯನ ವರದಿಯನ್ನು ಕೇಂದ್ರ ಮತ್ತು ರಾಜ್ಯ ಪರಿಸರ ಇಲಾಖೆಗಳು ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಘಟಕ ಸ್ಥಾಪನೆ ಹಾದಿ ಸುಗಮವಾಗಿದೆ.

ಗುಳೇ ಹೋಗುವವರಿಗೆ ವರದಾನ: ಸ್ಥಳೀಯ ಜನರಿಗೆ ಇದರ ಸತ್ಯಾಸತ್ಯತೆ ವಿವರ ನೀಡಲು ಅಪರ ಜಿಲ್ಲಾಧಿಕಾರಿ ಬಿ.ಟಿ.ರುದ್ರಗೌಡ ನೇತೃತ್ವದಲ್ಲಿ ಯೋಜನಾ ಸ್ಥಳದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪರಿಸರ ವಿಚಾರಣೆ ಮತ್ತು ಅಹವಾಲು ಸಭೆಯಲ್ಲಿ ಭಾಗವಹಿಸಿದ್ದ ಕೋಟೆಕಲ್, ಗುಳೇದಗುಡ್ಡ, ಶಿರೂರು, ತಿಮ್ಮಸಾಗರ, ತೋಗುಣಸಿ, ಹಾನಾಪುರ ಮತ್ತು ಕೊಟಗೇನಹಳ್ಳಿ ಗ್ರಾಮಗಳ ಜನತೆ ಈ ಘಟಕ ಸ್ಥಾಪನೆಗೆ ಒತ್ತಾಸೆ ನೀಡಿದ್ದಾರೆ. ಈ ಘಟಕ ಸ್ಥಾಪನೆಯಿಂದ ಮುಂದೆ ಎದುರಾಗಬಹುದಾದ ಸಮಸ್ಯೆ, ತಲ್ಲಣ, ಆತಂಕಗಳಿಗೆ ಹಿರಿಯ ಪರಿಸರ ವಿಜ್ಞಾನಿ ಡಾ.ಶಾಂತ ತಮ್ಮಯ್ಯ ಸಚಿತ್ರ ಮತ್ತು ಸವಿವರ ಉತ್ತರ ನೀಡಿ ಮನವರಿಕೆ ಮಾಡಿದರು.

ಬರಡು ಭೂಮಿಯಲ್ಲಿ ಘಟಕ: ಕೋಟೆಕಲ್ ಮತ್ತು ನೀಲಾನಗರ ಗ್ರಾಮ ವ್ಯಾಪ್ತಿಯ 524 ಎಕರೆ ಬರಡು ಭೂಮಿಯನ್ನು ಈ ಯೋಜನೆ ಅನುಷ್ಠಾನಕ್ಕೆ ಗುರುತಿಸಲಾಗಿದೆ. ಇದರಲ್ಲಿ 318 ಎಕರೆ ಪ್ರದೇಶ ಮಾತ್ರ ಅದಿರು ಮೌಲ್ಯವರ್ಧನ ಘಟಕಕ್ಕೆ ಬಳಸಲಾಗುತ್ತದೆ. 111 ಎಕರೆ ಹಸಿರು ಪ್ರದೇಶ ನಿರ್ಮಾಣ. ಬಾಗಲಕೋಟೆ ಬಳಿಯ ಮಲ್ಲಾಪುರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರು ಬಳಸಿಕೊಳ್ಳಲು 66 ಎಕರೆ ವಿಸ್ತಾರದ ಕೆರೆ ನಿರ್ಮಾಣ. ಉಳಿದ ಪ್ರದೇಶದಲ್ಲಿ ನೌಕರರ ವಸತಿ, ಗಾರ್ಡನ್ ಇತ್ಯಾದಿಗಳನ್ನು ನಿರ್ಮಿಸಲಾಗುತ್ತದೆ.
ಜರ್ಮನ್, ರಷ್ಯಾ, ಇಟಲಿ ತಂತ್ರಜ್ಞಾನ ಒಗ್ಗೂಡಿಸಿದ ಅತ್ಯಾಧುನಿಕ ಘಟಕವಿದು. ನಿತ್ಯ 12 ಮಿಲಿಯನ್ ಟನ್ ಅದಿರು ಸಂಸ್ಕರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಆರಂಭಿಕ ಬಂಡವಾಳ 550 ಕೋಟಿ.
ಆರಂಭಿಕ ನೇರ ಉದ್ಯೋಗ 381 ಆಗಿದ್ದರೂ ಅದು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಲಿದೆ.
ಇದು ಸಂಸ್ಕರಣ ಘಟಕವಾಗಿದ್ದರಿಂದ ಧೂಳು, ಅದಿರು ಕಣಗಳ ಹಾರಾಟಕ್ಕೆ ಅವಕಾಶವಿಲ್ಲ. ಇನ್ನು ದ್ರವರೂಪದ ತ್ಯಾಜ್ಯವನ್ನು ಗಟ್ಟಿಗೊಳಿಸಿ ಸಿಮೆಂಟ್ ಕಾರ್ಖಾನೆ, ಇಟ್ಟಿಗೆ ಭಟ್ಟಿಗಳಿಗೆ ಪೂರೈಸುವ ವ್ಯವಸ್ಥೆ ಇರುವುದರಿಂದ ಶೂನ್ಯ ನೈರ್ಮಲ್ಯತೆಯ ವಿಧಾನವನ್ನು ಘಟಕ ಅಳವಡಿಸಿಕೊಳ್ಳಲಿದೆ ಎನ್ನುವುದನ್ನು ಕಂಪನಿ ಯೋಜನಾ ವರದಿಯಲ್ಲಿ ಸ್ಪಷ್ಟಪಡಿಸಿದ್ದರಿಂದಲೇ ಪರಿಸರ ಇಲಾಖೆ ಒಪ್ಪಿದೆ.
ಯೋಜನಾ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ, ಹಸಿರು ಹೆಚ್ಚಿಸುವುದು, ಗ್ರಾಮಗಳ ಅಭಿವೃದ್ಧಿ, ಶಾಲಾ-ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದು, ಜನತೆಯ ಆರೋಗ್ಯ ಮತ್ತು ಉದ್ಯೋಗಕ್ಕೆ ಒತ್ತು ನೀಡುವ ಲಿಖಿತ ಭರವಸೆಯನ್ನು ಕಂಪನಿ ನೀಡಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಘಟಕ ಸ್ಥಾಪನೆಗೆ ಮುಕ್ತ ಸ್ವಾಗತ ಕೋರುತ್ತಿದ್ದಾರೆ.

- ಮಲ್ಲಿಕಾರ್ಜುನ ಸಿದ್ದಣ್ಣವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement