ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕ್ಯಾಂಟರ್‌ಗೆ ಕುಟುಂಬ ಬಲಿ

Rashmi Kasaragodu
Updated On : 8 Aug 2013, 1:18 am

ಬೆಂಗಳೂರು: ನಾಲ್ಕು ಮಂದಿಯ ಚಿಕ್ಕ ಮತ್ತು ಚೊಕ್ಕ ಸಂಸಾರವನ್ನು ಕ್ಯಾಂಟರ್ ಕ್ಷಣಮಾತ್ರದಲ್ಲಿ ಬಲಿ ತೆಗೆದುಕೊಂಡಿದೆ. ಜಾತ್ರೆ ಮುಗಿಸಿ ಸಂತಸದಲ್ಲಿ ಮನೆಗೆ ಹೋಗುತ್ತಿದ್ದ  ಕುಟುಂಬ ರಸ್ತೆ ಅಪಘಾತದಲ್ಲಿ ಮಸಣ ಸೇರಿದೆ.
ಕಬ್ಬಿಣ ತುಂಬಿದ್ದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರು-ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ಈ ದುರಂತ ಸಂಭವಿಸಿದೆ. ಆಡುಗೋಡಿ ವಿನಾಯಕ ನಗರದ ನಿವಾಸಿ ಸಿದ್ಧರಾಜು ಉರುಫ್ ಸಿದ್ದಪ್ಪಾಜಿ (38), ಪತ್ನಿ ಶಾಂತಾ (28), ಮಕ್ಕಳಾದ ಶಿವರಾಜ್ ಹಾಗೂ ಒಂದು ವರ್ಷದ ಯೋಗೇಶ್ ಮೃತ ದುದೈವಿಗಳು.
ಅಪಘಾತವೆಸಗಿದ ತಕ್ಷಣ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.                                

ಜಾತ್ರೆಯಿಂದ ಬರುತ್ತಿದ್ದರು: ಮೂಲತಃ ರಾಮನಗರದ ತುಂಬೇನಹಳ್ಳಿ ಸಿದ್ಧರಾಜು ಅವರು ಶಿವಾಜಿನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಬ್ಲೂ ಕಲರ್ ಚೇಂಬರ್ ಎಂಬ ಮಳಿಗೆಯಲ್ಲಿ ಹೂವು ಮಾರುವ ಕೆಲಸ ಮಾಡುತ್ತಿದ್ದು, ಆಡುಗೋಡಿಯಲ್ಲಿ ವಾಸಿಸುತ್ತಿದ್ದರು. ಶಿವರಾಜ್ ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದ.
ಭಾನುವಾರ ತುಂಬೇನಹಳ್ಳಿಯಲ್ಲಿ ಮನೆದೇವರಾದ ಮುತ್ಯಾಲಮ್ಮನ ಜಾತ್ರೆ ಇತ್ತು. ಹೀಗಾಗಿ ಕುಟುಂಬದವರೆಲ್ಲ ಉತ್ಸವಕ್ಕೆ ಹೋಗಿದ್ದರು. ಜಾತ್ರೆ ಮುಗಿಸಿ  ಬುಧವಾರ ಬೆಂಗಳೂರಿನ ಮನೆಗೆ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದರು. ನಾಯಂಡಹಳ್ಳಿ ಸಮೀಪ ಬರುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ದಂಪತಿ ಹಾಗೂ ಪುತ್ರ ಶಿವರಾಜ್ ಮೇಲೆ ವಾಹನ ಹರಿದು ಅವರ ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಣಾಮ ಸಿದ್ಧರಾಜು, ಶಾಂತಾ, ಶಿವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಒಂದು ವರ್ಷದ ಮಗು ರಸ್ತೆಯಿಂದ ಸ್ವಲ್ಪ ದೂರದಲ್ಲಿ ಬಿದ್ದಿತ್ತು.
ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ಮಾರ್ಗಮಧ್ಯದಲ್ಲಿ ಮೃತಪಟ್ಟಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕ್ಯಾಂಟರ್ ಮುಂದೆ ಹೋಗುತ್ತಿದ್ದ ಮತ್ತೊಂದು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆ ವಾಹನ ಪಲ್ಟಿ ಹೊಡೆದಿದ್ದು, ಅದರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಬ್ಬಿಣದ ಪೈಪುಗಳನ್ನು ತುಂಬಿಕೊಂಡು ಬಿಡದಿ ಸಮೀಪದ ಕೈಗಾರಿಕಾ ಪ್ರದೇಶದಿಂದ ನಗರದೊಳಕ್ಕೆ  ಕ್ಯಾಂಟರ್ ತೆರಳುತ್ತಿತ್ತು.

ದಿಕ್ಕು ತೋಚದಾಗಿದೆ
ಮೃತ ಸಿದ್ದಪ್ಪಾಜಿ ಅವರ ಪೋಷಕರಿಗೆ ಮೂವರು ಹೆಣ್ಣು ಸೇರಿ ಏಳು ಮಕ್ಕಳು. ಎಲ್ಲರೂ ಹಳ್ಳಿಯಲ್ಲಿದ್ದು, ಸಿದ್ದಪ್ಪಾಜಿ ಅವರು ಬೆಂಗಳೂರಿನಲ್ಲಿದ್ದರು.  ಸಿದ್ದಪ್ಪಾಜಿ ತಂದೆ ಬೋರಯ್ಯ  ಪಾರ್ಶ್ವವಾಯುಪೀಡಿತರಾಗಿ ಕಾಲು ಕಳೆದುಕೊಂಡಿದ್ದಾರೆ. ತಾಯಿ ಮುತ್ತಮ್ಮ ಅವರಿಗೂ ವಯಸ್ಸಾಗಿದೆ. ದಂಪತಿಗೆ ಮಗನೇ ಆಸರೆಯಾಗಿದ್ದ. ವೃದ್ಧ ದಂಪತಿಗೆ ಈಗ ದಿಕ್ಕು ತೋಚದಾಗಿದೆ ಎಂದು ಸಿದ್ದಪ್ಪಾಜಿ ಸಂಬಂಧಿ ನಾಗರಾಜು ತಿಳಿಸಿದರು.

ವಾಹನ ಹಳೆಯದು, ಅಲ್ಲದೆ ಅದು ಆಗಾಗ ರಿಪೇರಿಗೆ ಬರುತ್ತಿತ್ತು. ಆದರೂ ಅದೇ ವಾಹನವನ್ನು ಬಳಸುತ್ತಿದ್ದರು. ಸಂಜೆ ಕ್ಯಾಂಟರ್ ಚಾಲಕ ನಾಯಂಡಹಳ್ಳಿ ಮಾರ್ಗವಾಗಿ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ, ಬ್ರೇಕ್ ತುಂಡಾಗಿದ್ದು ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ. ಮಾಲೀಕರಿಗೆ ಮಾಹಿತಿ ನೀಡಿದ್ದು, ಆರೋಪಿಯ ಸುಳಿವು ಪತ್ತೆಯಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ವಾಹನ ಪರಿಶೀಲಿಸಲಿದ್ದಾರೆ.
- ಗಿರೀಶ್, ಡಿಸಿಪಿ, ಪಶ್ಚಿಮ ವಿಭಾಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement