ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತೆರೆಮರೆ ಮೈತ್ರಿ

ಮೈತ್ರಿ ಖಾತ್ರಿಯಾಗಿದೆ. ಆದರೆ, ಅಧಿಕೃತ ಘೋಷಣೆ ಇಲ್ಲ ಅಷ್ಟೆ. ಇದೇ ಮೊದಲ ಬಾರಿಗೆ ಲೋಕಸಭೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ...

Mainashree
Updated On : 8 Aug 2013, 12:58 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.7-
ಮೈತ್ರಿ ಖಾತ್ರಿಯಾಗಿದೆ. ಆದರೆ, ಅಧಿಕೃತ ಘೋಷಣೆ ಇಲ್ಲ ಅಷ್ಟೆ.
ಇದೇ ಮೊದಲ ಬಾರಿಗೆ ಲೋಕಸಭೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
ಬೆಂಗಳೂರು ನಗರ ಮತ್ತು ಮಂಡ್ಯ ಕ್ಷೇತ್ರಗಳ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಬಿಜೆಪಿ ತನ್ನ ಅಭ್ಯರ್ಥಿಗಳ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದೆ. ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿರುವ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಆದರೆ, ಪಕ್ಷಕ್ಕಿರುವ ಅಲ್ಪಸಂಖ್ಯಾತರ ಅಲ್ಪಸ್ವಲ್ಪ ಮತಗಳು ಕೈತಪ್ಪಬಹುದು ಎಂಬ ಭೀತಿಯಿಂದ ಜೆಡಿಎಸ್ ಮೈತ್ರಿ ವಿಚಾರವನ್ನು ಅಧಿಕೃತವಾಗಿ ಘೋಷಿಸಲು ಸಿದ್ಧವಿಲ್ಲ. ಹೀಗಾಗಿ ಬಿಜೆಪಿ ಕೂಡ ಮೈತ್ರಿ ವಿಚಾರವನ್ನು ಘೋಷಿಸದೆ ಕಾಂಗ್ರೆಸೇತರರು ಗೆದ್ದುಬರಬೇಕು ಎಂಬ ಕಾರಣದಿಂದ ಪಕ್ಷದ ಅಭ್ಯರ್ಥಿಗಳ ನಾಮಪತ್ರಗಳನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳುತ್ತಿದೆ.

ಇಬ್ಬರೂ ಗೆದ್ದರು: ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ಕುಮಾರಸ್ವಾಮಿ ಅವರಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ಇತ್ತು. ಈ ಬಗ್ಗೆ ಬಿಜೆಪಿಯ ಕೆಲವು ಮುಖಂಡರೊಂದಿಗೆ ಸಮಾಲೋಚನೆಯನ್ನೂ ನಡೆಸಿದ್ದರು.
ಇದೀಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಆ ಬಗ್ಗೆ ಅಧಿಕೃತ ನಿರ್ಧಾರ ಅಥವಾ ಘೋಷಣೆ ಇಲ್ಲ. ಹೀಗಾಗಿ ದೇವೇಗೌಡರ ಬಯಕೆಯೂ ಈಡೇರಿದೆ.                      
ಇನ್ನೊಂದೆಡೆ ಬಿಜೆಪಿ ಜತೆ ಹೋದರೆ ಉತ್ತಮ ಎಂಬ ಕುಮಾರಸ್ವಾಮಿಯವರ ಮಾತೂ ಉಳಿದುಕೊಂಡಿದೆ. ಹೀಗಾಗಿ ಮೈತ್ರಿ ವಿಚಾರದಲ್ಲಿ ಇಬ್ಬರೂ ಗೆದ್ದಂತಾಗಿದೆ.

ರಾಜಕೀಯ ತಂತ್ರಗಾರಿಕೆ: ಈ ಮಧ್ಯೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂಬ ಮಾತನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ. ರವಿ ತಳ್ಳಿಹಾಕಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಕಾಂಗ್ರೆಸ್ ಮೊದಲ ವಿರೋಧಿ. ಕಾಂಗ್ರೆಸ್ಸೇತರ ಮತಗಳು ವಿಭಜನೆಯಾದರೆ ಆ ಪಕ್ಷ ಗೆಲ್ಲಬಹುದು. ಅದಕ್ಕೆ ಅವಕಾಶವಾಗದಂತೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಲೋಕಸಭೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಕಾಂಗ್ರೆಸೇತರ ಮತಗಳು ಒಂದಾಗುತ್ತಿವೆ ಎಂಬ ಸಂದೇಶವನ್ನು ದೇಶಕ್ಕೆ ಕಳುಹಿಸಬೇಕು ಎಂಬ ಉದ್ದೇಶದಿಂದ ಬಿಜೆಪಿ ಈ ತಂತ್ರಗಾರಿಕೆ ಅನುಸರಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಹಾಕಬೇಕು ಎಂದು ಜನರನ್ನು ಮನವಿ ಮಾಡಿಕೊಳ್ಳಲಾಗುವುದು. ಯಾವ ಪಕ್ಷದ ಪರ ಮತ ಹಾಕಬೇಕು ಎಂಬುದನ್ನು ನಾವು ಹೇಳುವುದಿಲ್ಲ. ಅದು ಮತದಾರರಿಗೆ ಬಿಟ್ಟ ವಿಚಾರ ಎಂದರು.
ಅದೇ ರೀತಿ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರುವುದು ಜೆಡಿಎಸ್‌ನ ಆಂತರಿಕ ವಿಚಾರ. ಈ ಮೂರೂ ಸ್ಥಾನಗಳು ಹಿಂದೆ ಬಿಜೆಪಿ ವಶದಲ್ಲಿದ್ದವು. ಈ ಬಾರಿಯೂ ಬಿಜೆಪಿ ಗೆಲ್ಲಲು ಸಹಕರಿಸುವಂತೆ ಎಲ್ಲರನ್ನೂ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿ ಪ್ರಚಾರ ಇಲ್ಲ
ಮೈತ್ರಿ ಅಧಿಕೃತವಾಗಿ ಘೋಷಣೆಯಾಗದ ಕಾರಣ ಬಿಜೆಪಿ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪರ ಅಧಿಕೃತವಾಗಿ ಪ್ರಚಾರ ಮಾಡುವುದಿಲ್ಲ. ಆದರೆ, ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗಳಿಗೆ ಹಾಕುವಂತೆ ಎರಡೂ ಕ್ಷೇತ್ರಗಳಲ್ಲಿ ಮತದಾರರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಇನ್ನು ಆನೇಕಲ್, ರಾಜರಾಜೇಶ್ವರಿ ನಗರಗಳಲ್ಲೂ ಪಕ್ಷ ಜೆಡಿಎಸ್‌ಗಿಂತ ಹೆಚ್ಚು ಮತದಾರರನ್ನು ಹೊಂದಿದೆ. ಈ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕ ಮತ್ತು ಪಕ್ಷದ ಮುಖಂಡರು ತಮ್ಮ ಬೆಂಬಲಿಗರನ್ನು ಜೆಡಿಎಸ್ ಪರ ಪ್ರಚಾರಕ್ಕೆ ಕಳುಹಿಸಿಕೊಡಲಿದ್ದಾರೆ.

ಕೆಜೆಪಿ ಜತೆ ಮೈತ್ರಿ ಮಾತುಕತೆ
ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ.
ಮೈಸೂರು-ಚಾಮರಾಜನಗರ, ಚಿತ್ರದುರ್ಗ-ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಮೇಲ್ಮನೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2 ಕ್ಷೇತ್ರಗಳಲ್ಲಿ ಕೆಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ, ಕೆಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದರೆ ಅದು ಬಿಜೆಪಿಗೆ ಸಮಸ್ಯೆ. ಹೀಗಾಗಿ ಪಕ್ಷದ ರಾಜ್ಯ ಮುಖಂಡರು ಯಡಿಯೂರಪ್ಪ ಅವರೊಂದಿಗೆ ಅಭ್ಯರ್ಥಿಗಳನ್ನು ವಾಪಸ್ ಪಡೆಯುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಗುರುವಾರ  ಮಾತುಕತೆ ಅಂತಿಮ ರೂಪ ಪಡೆಯಲಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement