ಮದನಿ ಸದ್ಯದ ಆರೋಗ್ಯ ಸ್ಥಿತಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶ
ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರೂವಾರಿ ಅಬ್ದುಲ್ ನಾಸಿರ್ ಮದನಿಯ ಸದ್ಯದ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಸಮಗ್ರ ವರದಿ ಸಲ್ಲಿಸುವಂತೆ ಜೈಲಿನ ವೈದ್ಯಾಧಿಕಾರಿಗೆ ಹೈಕೋರ್ಟ್ ಆದೇಶಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ಮದನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ತಮ್ಮ ವಿರುದ್ಧ ಸರ್ಕಾರ ಸಂಚು ರೂಪಿಸುತ್ತಿದ್ದು, ಕಾನೂನುಬಾಹಿರವಾಗಿ ತನ್ನ ಚಟುವಟಿಕೆಗಳ ದೃಶ್ಯಾವಳಿಗಳನ್ನು ದಾಖಲಿಸಲಾಗಿದೆ. ಆದರೆ, ಅದರಲ್ಲಿ ಕೂಡ ಸತ್ಯಾಂಶಗಳಿಲ್ಲ.
ಸರ್ಕಾರ ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆಕ್ಷೇಪಿಸಿ ಮದನಿ ಸಲ್ಲಿಸಿರುವ ತಿದ್ದುಪಡಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಒಂದು ವಾರಗಳ ಕಾಲಾವಕಾಶ ಕೋರಿತು.
ಮದನಿ ಸಲ್ಲಿಸಿರುವ ತಿದ್ದುಪಡಿ ಅರ್ಜಿಯಲ್ಲಿ ಸರ್ಕಾರ, ಪೊಲೀಸ್ ವ್ಯವಸ್ಥೆ ಹಾಗೂ ಕಾನೂನು ಪ್ರಕ್ರಿಯೆಗಳ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ್ದು, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ರಾಜ್ಯ ಅಭಿಯೋಜಕರಾದ ದೊರೆರಾಜು ಅವರು ವಾದಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರಗಳ ಕಾಲ ಮುಂದೂಡಿತು. ಮದನಿ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಅವರು ವಾದಿಸುತ್ತಿದ್ದಾರೆ.