108 ಸಿಬ್ಬಂದಿ ಮುಷ್ಕರ ವಾಪಸ್
ಬೆಂಗಳೂರು: ವೇತನ ಪರಿಷ್ಕರಣೆ, ಭವಿಷ್ಯ ನಿಧಿ ಮತ್ತಿತರರ ಯೋಜನೆಗಳನ್ನು ಮುಂದಿಟ್ಟು ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆಯುವುದಾಗಿ ಆರೋಗ್ಯ ಕವಚ ಯೋಜನೆಯ 108 ತುರ್ತು ಸೇವೆಯ ಸಿಬ್ಬಂದಿ ಹೈಕೋರ್ಟ್ಗೆ ಹೇಳಿಕೆ ನೀಡಿದ್ದಾರೆ.
ಸಿಬ್ಬಂದಿ ಬೇಡಿಕೆಗಳಲ್ಲಿ ಹಲವನ್ನು ತಾವು ಈಗಾಗಲೇ ಪೂರೈಸಿದ್ದು, ಇತರೆ ಬೇಡಿಕೆಗಳನ್ನು ಪೂರೈಸುವ ಕುರಿತು ಪರಿಶೀಲಿಸುವುದಾಗಿ ಜಿವಿಕೆ ಸಂಸ್ಥೆ ಹಾಗೂ ಸರ್ಕಾರ ಜಂಟಿ ಪ್ರಮಾಣಪತ್ರ ಸಲ್ಲಿಸಿವೆ. ಅಲ್ಲದೆ, ಮುಷ್ಕರ ಆರಂಭಗೊಂಡಂದಿನಿಂದ ಅಮಾನತುಗೊಂಡಿರುವ 194 ಸಿಬ್ಬಂದಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಬೇಷರತ್ತಾಗಿ ಮರು ನೇಮಕ ಮಾಡಿಕೊಳ್ಳಲಾಗುವುದು. ಆದರೆ, ಅವರು ಮುಷ್ಕರವನ್ನು ಹಿಂಪಡೆದು ಆಗಸ್ಟ್ 9ರಂದು ಬೆಳಗ್ಗೆ 8ಕ್ಕೆ ಕೆಲಸಕ್ಕೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತು. ಇದಕ್ಕೆ ಒಪ್ಪಿದ ಸಿಬ್ಬಂದಿ, ತಮ್ಮ ಮುಷ್ಕರವನ್ನು ಹಿಂಪಡೆಯುವ ಭರವಸೆ ನೀಡಿದರು. ಇದನ್ನು ಪರಿಗಣಿಸಿದ ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ.ರವಿ ಮಳಿಮಠ್ ಅವರಿದ್ದ ವಿಭಾಗೀಯ ಪೀಠ, ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಆ.14ರಂದು ಸಭೆ: ಸಿಬ್ಬಂದಿಯ ಬೇಡಿಕೆಗಳ ಪೂರೈಕೆ ಸಂಬಂಧ ಆಗಸ್ಟ್ 14ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ಜಿವಿಕೆ ಸಂಸ್ಥೆ ಹಾಗೂ ಸಿಬ್ಬಂದಿಯ ಸಭೆ ಹಮ್ಮಿಕೊಳ್ಳಲಾಗಿದೆ. ಅಂದು ಸಿಬ್ಬಂದಿಯ ಬಾಕಿ ಇರುವ ಬೇಡಿಕೆಗಳ ಪೂರೈಕೆ ಕುರಿತು ಚರ್ಚಿಸಲಾಗುವುದು ಎಂದು ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು.
ವಿವಾದವೇನು?: ವಿವಿಧ ಬೇಡಿಕೆಗಳ ಪೂರೈಕೆಗೆ ಆಗ್ರಹಿಸಿ 108 ತುರ್ತು ಸೇವೆಯ ಸಿಬ್ಬಂದಿ ಜುಲೈ 26ರಿಂದ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಮಳೆಯಾಗುತ್ತಿದ್ದು, ನೆರೆ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ ತುರ್ತು ಸೇವೆಯ ಅಗತ್ಯವಿದೆ. ಆದರೆ, ಸರ್ಕಾರ ಸಮಸ್ಯೆ ಬಗೆಹರಿಸುವ ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಆಕ್ಷೇಪಿಸಿ ಡಾ. ಕೋಡೂರು ವೆಂಕಟೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದಿನಿಂದ ಕರ್ತವ್ಯಕ್ಕೆ ಹಾಜರ್
ಬೆಂಗಳೂರು: ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಹುತೇಕ ಎಲ್ಲ ಆರೋಗ್ಯ ಕವಚ ಆ್ಯಂಬುಲೆನ್ಸ್ಗಳು ಶುಕ್ರವಾರ ಎಂದಿನಂತೆ ಅದರ ಸಿಬ್ಬಂದಿ ಮೂಲಕವೇ ಕಾರ್ಯಾಚರಣೆಗೊಳ್ಳಲಿವೆ. ಆದರೆ, ಗ್ರಾಮೀಣ ಪ್ರದೇಶದ ಮುಷ್ಕರ ನಿರತರು ತಮ್ಮ ಊರನ್ನು ತಲುಪುವುದು ವಿಳಂಬವಾದಲ್ಲಿ ಅಂತಹ ಕಡೆ ಅವರು ಶನಿವಾರ ಕರ್ತವ್ಯಕ್ಕೆ ಹಾಜರಾಗಲಿರುವರು ಎಂದು ಅವರು ತಿಳಿಸಿದರು.
ಒಂದು ವೇಳೆ ಆ.14ರ ಸಭೆಯಲ್ಲಿ ಬೇಡಿಕೆ ಈಡೇರಿಕೆ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ರಚಿಸಲಾಗುವುದು ಎಂದು ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಅಧ್ಯಕ್ಷ ಶ್ರೀಧರ್ ಹೇಳಿದ್ದಾರೆ.
ವಜಾ ಆದೇಶ ರದ್ದು: ಈ ನಡುವೆ ಮುಷ್ಕರ ನಡೆಸಿದ್ದರಿಂದ ವಜಾಗೊಳಿಸಲ್ಪಟ್ಟ 194 ಸಿಬ್ಬಂದಿಯ ವಜಾ ಆದೇಶ ರದ್ದುಗೊಳಿಸಲಾಗಿದ್ದು ಅವರೆಲ್ಲರಿಗೂ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು. ಹೈಕೋರ್ಟ್ ಸೂಚನೆ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿವಿಕೆ ಸಂಸ್ಥೆ ರಾಜ್ಯ ಮುಖ್ಯಸ್ಥ ಜಗದೀಶ್ ಪಾಟೀಲ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.