ಕೃಷಿಕರಿಗೆ ಖುಷಿ
ರಾಜ್ಯದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ದರ ಸಿಗುವಂತೆ ಕೃಷಿ ಮಾರಾಟ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ. 8-
ರಾಜ್ಯದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ದರ ಸಿಗುವಂತೆ ಕೃಷಿ ಮಾರಾಟ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೃಷಿ ಮಾರಾಟ ನೀತಿ ಕುರಿತಂತೆ ಕೇಂದ್ರ ಸರ್ಕಾರ ಈಗಾಗಲೇ ಕೆಲವು ನಿರ್ದೇಶನಗಳನ್ನು ನೀಡಿದ್ದು, ಇದರ ಆಧಾರದ ಮೇಲೆ ಕೃಷಿ ಮಾರಾಟ ನೀತಿ- 2013ನ್ನು ಸಿದ್ಧಪಡಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ ಬೇಕಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಸಂಪುಟ ಉಪ ಸಮಿತಿಗೆ ನೀಡಲಾಗಿದೆ. ಇದಕ್ಕಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ರಚಿಸಲಾಗಿರುವ ಸಂಪುಟ ಉಪಸಮಿತಿ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಪರಿಶೀಲಿಸಿ ಹೊಸ ನೀತಿಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಆ. 20ರೊಳಗೆ ಸರ್ಕಾರಕ್ಕೆ ವರದಿ ನೀಡಬೇಕು. ಈ ವರದಿಯನ್ನು ಪರಿಶೀಲಿಸಿದ ಬಳಿಕ ಸಂಪುಟ ಸಭೆಯಲ್ಲಿ ಹೊಸ ನೀತಿ ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಮಾರುಕಟ್ಟೆ ಸುಧಾರಣೆ ಮಾಡುವ ಮೂಲಕ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ದೊರಕಿಸುವುದು, ಮಾರುಕಟ್ಟೆ ವ್ಯವಸ್ಥೆಯ ಬಲವರ್ಧನೆ, ಪಾರದರ್ಶಕತೆ ಕಾಪಾಡಿಕೊಳ್ಳುವುದೂ ಸೇರಿದಂತೆ ರೈತರಿಗೆ ಅನುಕೂಲವಾಗುವಂತೆ ಈ ನೀತಿ ರೂಪಿಸಲು ಸರ್ಕಾರ ತೀರ್ಮಾನಿಸಿದೆ.
ಇದರೊಂದಿಗೆ ಇತ್ತೀಚೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ವಿಧೇಯಕದಲ್ಲಿರುವ ಉಪಮಾರುಕಟ್ಟೆ, ಉಗ್ರಾಣ ವ್ಯವಸ್ಥೆ, ರಾಜ್ಯವ್ಯಾಪಿ ಏಕ ಪರವಾನಗಿ, ವಿವಾದಗಳ ಸಮಿತಿ ಬದಲಾಗಿ ನೋಂದಣಿ ಪ್ರಾಧಿಕಾರ ರಚನೆ ಮುಂತಾದ ಅಂಶಗಳೂ ಹೊಸ ನೀತಿಯಲ್ಲಿ ಸೇರಿವೆ.
ಕಬ್ಬಿಗೆ ಎಸ್ಎಪಿ ನಿಗದಿ: ಕಬ್ಬಿಗೆ ರಾಜ್ಯ ಸಲಹಾ ದರ (ಎಸ್ಎಪಿ) ನಿಗದಿ ಕುರಿತಂತೆ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇದೀಗ ಸಚಿವ ಸಂಪುಟ ಸಭೆ ಎಸ್ಎಪಿ ನಿಗದಿಗೆ ತನ್ನ ಅನುಮೋದನೆ ನೀಡಿದೆ. ಇದರಿಂದಾಗಿ ಕಬ್ಬಿಗೆ ಸೂಕ್ತ ದರ ನಿಗದಿಗೆ ಅನುಕೂಲವಾಗಲಿದೆ.
ಅಧಿಕಾರಿ ವಜಾ: ಕರ್ತವ್ಯ ಲೋಪ ಮತ್ತು ಅವ್ಯವಹಾರದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧೀನ ಕಾರ್ಯದರ್ಶಿ ರಾಮಕೃಷ್ಣಪ್ಪ ಅವರನ್ನು ವಜಾಗೊಳಿಸಲು ಸಂಪುಟ ತೀರ್ಮಾನಿಸಿದೆ. ಇವರು ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಕ್ರಮ-ಸಕ್ರಮ ಯೋಜನೆಯಡಿ ವ್ಯಾಪಕ ಅವ್ಯವಹಾರ ಎಸಗಿದ್ದರು. ಈ ಕುರಿತು ತನಿಖೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎನ್.ಎಸ್. ನೇಗಿನಾಳ್ ಮತ್ತು ಸುರೇಶ್ ಬಿ. ತುರಮುರಿ ಅವರನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಂದುವರಿಸುವುದು, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎಸ್. ಪ್ರಭಾಕರ್ ಅವರ ಗುತ್ತಿಗೆ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ಬಗ್ಗೆ ಸಂಪುಟ ಅನುಮೋದನೆ ನೀಡಿದೆ.
ಟಿ. ನರಸೀಪುರ ತಾಲೂಕಿನಲ್ಲಿ ಭಗೀರಥ ಸಮುದಾಯ ಭವನ ನಿರ್ಮಾಣಕ್ಕೆ 1.02 ಎಕರೆ ಭೂಮಿ ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ಕೊಡಗು ಪ್ರಾತಿನಿಧಿಕ ಸಭೆಯ ಸದಸ್ಯ ಕುಟುಂಬದ ಸದಸ್ಯರಿಗೆ ಪಿಂಚಣಿ ನೀಡಲು ಕೂಡ ಸಂಪುಟ ಒಪ್ಪಿಗೆ ನೀಡಿದೆ
ಧ್ವಜಾರೋಹಣಕ್ಕಾಗಿ ಆಯೋಗದ ಅನುಮತಿಗೆ ತೀರ್ಮಾನ
ನೀತಿ ಸಂಹಿತೆ ಜಾರಿಯಲ್ಲಿರುವ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಧ್ವಜಾರೋಹಣ ನಡೆಸಲು ಚುನಾವಣಾ ಆಯೋಗದ ಅನುಮತಿ ಪಡೆಯಲು ನಿರ್ಧರಿಸಿರುವ ಸರ್ಕಾರ, ಇದಕ್ಕಾಗಿ ಮುಖ್ಯ ಚುನಾವಣಾಧಿಕಾರಿಗಳ ಅನುಮತಿ ಪಡೆಯಲು ಮುಂದಾಗಿದೆ. ಲೋಕಸಭೆ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೂರು ಜಿಲ್ಲೆಗಳಲ್ಲಿ ಸಚಿವರು ಧ್ವಜಾರೋಹಣ ನಡೆಸುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದರು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಆಯೋಗದಿಂದ ಅನುಮತಿ ಪಡೆಯಲು ತೀರ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಭಾಷಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕೇವಲ ದೇಶದ ಸ್ವಾತಂತ್ರ್ಯ, ಅದರ ಹಿನ್ನೆಲೆ, ಹೋರಾಟದ ಬಗ್ಗೆ ಮಾತ್ರ ಭಾಷಣ ಮಾಡಲಾಗುವುದು. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧ್ವಜಾರೋಹಣ ನಡೆಸಲು ಅನುಮತಿ ನೀಡಬೇಕು ಎಂದು ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಅನುಮತಿ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಗರ ಭೂ ಮಂಜೂರಾತಿ ನೀತಿಗೆ ನಿರ್ಧಾರ
ಬೆಂಗಳೂರು ಸೇರಿದಂತೆ ಮಹಾನಗರ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ತಲತಲಾಂತರದಿಂದ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ರೈತರಿಗೆ ಭೂ ಒಡೆತನ ನೀಡಲು ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಹೈಕೋರ್ಟ್ ನಿರ್ದೇಶನದಂತೆ ಕರ್ನಾಟಕ ಭೂಕಂದಾಯ ಕಾಯ್ದೆಯ ನಿಯಮ 94 (ಎ)ಗೆ ತಿದ್ದುಪಡಿ ತರಲು ನಿರ್ಧರಿಸಿದ್ದು, ಈ ಕುರಿತು ಪರಿಶೀಲಿಸಿ ವರದಿ ನೀಡಲು ಸಂಪುಟ ಉಪಸಮಿತಿ ರಚಿಸಲಾಗಿದೆ. ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು 18 ಕಿ.ಮೀ, ನಗರಪಾಲಿಕೆಗಳ ವ್ಯಾಪ್ತಿಯನ್ನು 10 ಕಿ.ಮೀ. ಮತ್ತು ನಗರಸಭೆ ವ್ಯಾಪ್ತಿಯನ್ನು 5 ಕಿ.ಮೀ. ಎಂದು ನಿಗದಿಪಡಿಸಲಾಗಿದೆ.
ಈ ವ್ಯಾಪ್ತಿಯಲ್ಲಿ ಸಾಕಷ್ಟು ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದರೂ ಅವರಿಗೆ ಭೂ ಒಡೆತನ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ಕಾಯ್ದೆ ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಹಾಗೆಂದು ಕೃಷಿ ಚಟುವಟಿಕೆ ನಡೆಸುತ್ತಿರುವ ಎಲ್ಲರಿಗೂ ಭೂ ಒಡೆತನ ನೀಡಲು ಸಾಧ್ಯವಿಲ್ಲ. ಕೆಲವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ.
ಇನ್ನು ಕೆಲವರು ಪರಂಪರಾಗತವಾಗಿ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಆದ್ದರಿಂದ ಪರಂಪರಾಗತವಾಗಿ ಕೃಷಿ ಮಾಡುತ್ತಿರುವವರಿಗೆ ಮಾತ್ರ ಭೂ ಒಡೆತನ ನೀಡುವ ಕುರಿತಂತೆ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕು ಎನ್ನುವುದು ಸರ್ಕಾರದ ಉದ್ದೇಶ.