ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಕ್ಸಲರಿಂದ ಪಾವಗಡ ಶಾಸಕ ತಿಮ್ಮರಾಯಪ್ಪಗೆ ಕೊಲೆ ಬೆದರಿಕೆ

Mainashree
Updated On : 9 Aug 2013, 12:25 pm

ತುಮಕೂರು/ಪಾವಗಡ: ಕೆಲವು ಸಮಯದಿಂದ ತಣ್ಣಗಾಗಿದ್ದ ನಕ್ಸಲ್ ಸಮಸ್ಯೆ ಪಾವಗಡದಲ್ಲಿ ಮತ್ತೆ ತಲೆ ಎತ್ತಿದ್ದು, ಈ ಬಾರಿ ಪಾವಗಡ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರಿಗೆ ನಕ್ಸಲರಿಂದ ಕೊಲೆ ಬೆದರಿಕೆ ಪತ್ರ ಬಂದಿದೆ.
ಆಸ್ತಿಯಲ್ಲಿ ಪಾಲು ಕೊಡುವಂತೆ ಆಗ್ರಹಿಸಿ ನಕ್ಸಲ್‌ರಿಂದ ಕೂಲೆ ಬೆದರಿಕೆ ಪತ್ರ ಬಂದಿರುವುದು ಪಾವಗಡ ತಾಲೂಕಿನಲ್ಲಿ ತೀವ್ರ ತಲ್ಲಣ ಹುಟ್ಟಿಸಿದೆ.
ತೀವ್ರ ನಿಗಾ ಹಾಗೂ ಪೊಲೀಸ್ ಬಿಗಿ ಭದ್ರತೆ ಹಿನ್ನೆಲೆಯಲ್ಲಿ ಕಳೆದೈದು ವರ್ಷಗಳಿಂದ ಇಲ್ಲಿ ನಕ್ಸಲ್ ಚಟವಟಿಕೆಗಳು ನಿಯಂತ್ರಣದಲ್ಲಿದ್ದಂತೆ ಕಾಣುತ್ತಿತ್ತು. ಆದರೆ ಶಾಸಕರಿಗೆ ಪೋಸ್ಟ್ ಮೂಲಕ ನಕ್ಸಲರಿಂದ ಬಂದ ಪತ್ರದಿಂದ ಈ ಪ್ರದೇಶದಲ್ಲಿ ನಕ್ಸಲ್ ಚಟವಟಿಕೆಗಳು ಮತ್ತೆ ಗರಿಗೆದರಿದಂತಾಗಿದೆ.

ಪತ್ರದಲ್ಲಿ ಏನಿದೆ?: ಪಾವಗಡದ ಸಮೀಪ ಸುಮಾರು 15 ಕಿ.ಮೀ. ದೂರದ ಆಂಧ್ರ ಪ್ರದೇಶಕ್ಕೆ ಸೇರಿರುವ ಪೆನ್ನುಗೊಂಡ ಗ್ರಾಮದಲ್ಲಿ ಈ ಪತ್ರ ಪೋಸ್ಟ್ ಆಗಿದೆ. ಕಳೆದ 4 ದಿವಸಗಳ ಹಿಂದೆ ಶಾಸಕರ ಸ್ವಗ್ರಾಮವಾದ ಪಾವಗಡ ತಾಲೂಕು ಕೆ.ಟಿ.ಹಳ್ಳಿ ಗ್ರಾಮದ ವಿಳಾಸಕ್ಕೆ ಬಂದ ಈ ಪತ್ರ 'ಪೀಪಲ್ಸ್ ವಾರ್ ಎಂಸಿಸಿ' ಎಂಬ ಲೆಟರ್ ಹೆಡ್‌ನಲ್ಲಿದೆ. ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗಳಿಸಿದ ಆಸ್ತಿಯಲ್ಲಿ ಆರ್ಧ ಪಾಲಾಗಲಿ ಅಥವಾ ಹಣವಾಗಲಿ ತಮಗೆ ನೀಡಬೇಕು. ಅದನ್ನು ಯಾವಾಗ ನೀಡಬೇಕು ಎಂಬುವುದು ನಾವು ತಿಳಿಸುತ್ತೇವೆ. ನಾವು ಕಳುಹಿಸಿದ ಪತ್ರದಲ್ಲಿ ಒಂದು ನಂಬರ್ ಗುರ್ತಿಸಿದ್ದು, ಆ ನಂಬರಿನ ಗಾಡಿ ನಿಮ್ಮ ಮನೆಯ ಮುಂದೆ ಬಂದು ನಿಂತಾಗ ನಿಮ್ಮ ಆಪ್ತ ಸಹಚರರೊಂದಿಗೆ ಹಣ ಕಳುಹಿಸುವುದು. ಈ ವಿಷಯ ಅನ್ಯರಿಗೆ ತಿಳಿಯಬಾರದು.  ಗೊತ್ತಾದರೆ ಮುಂದಿನ ಪರಿಣಾಮ ನೀವು ಎದುರಿಸುವ ಅನಿವಾರ್ಯತೆ ಇದೆ ಎಂಬ ಸಾರಾಂಶ ಪತ್ರದಲ್ಲಿದೆ.

ಪೊಲೀಸರಿಗೆ ತಿಳಿಸಿದರೆ ಎಚ್ಚರ: 'ಪೊಲೀಸರಿಗೆ ಅಥವಾ ಇತರೆ ಇಲಾಖೆಗೆ ಮಾಹಿತಿ ನೀಡಬಾರದೆಂದು ಪತ್ರದಲ್ಲಿ ಎಚ್ಚರಿಸಿದ್ದು, ಏನಾದರೂ ವಿಷಯ ಬಹಿರಂಗವಾದರೆ ನೀವು ಸೇರಿದಂತೆ ನಿಮ್ಮ ಸಹಾಯಕ ಶ್ರೀನಿವಾಸ್ ನಕ್ಸಲರಾದ ನಮ್ಮಿಂದ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ನಾವಿಟ್ಟ ಬೇಡಿಕೆ ಕಾರ್ಯ ಅತಿ ಶೀಘ್ರವಾಗಿ ಈಡೇರಬೇಕು', ಎಂದು ಬರೆದು ಅಧ್ಯಕ್ಷರು, ರಾಮಕೃಷ್ಣ ಪೀಪಲ್‌ವಾರ್ ಎಂಸಿಸಿ ಎಂದು ನಮೂದಿಸಿ ಸಹಿ ಮಾಡಲಾಗಿದೆ. ವಿಷಯ ಬಹಿರಂಗಗೊಂಡ ನಂತರ ಆತಂಕಗೊಂಡು ಬೆಂಬಲಿಗರ ಒತ್ತಡಕ್ಕೆ ಮಣಿದ ಶಾಸಕ ತಿಮ್ಮರಾಯಪ್ಪ ಪತ್ರ ಸಮೇತ ಸಂಬಂಧಪಟ್ಟ ಅರಸೀಕೆರೆ ಠಾಣೆಗೆ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ರಮಣಗುಪ್ತ ಹಾಗೂ ಸಿಪಿಐ ಶೇಷಾದ್ರಿ ಶಾಸಕ ತಿಮ್ಮರಾಯಪ್ಪ ಅವರಿಗೆ ವಿಶೇಷ ಪೊಲೀಸ್ ರಕ್ಷಣೆ ಕಲ್ಪಿಸಿದ್ದು, ಪಾವಗಡ ತಾಲೂಕು ಕೆ.ಟಿ.ಹಳ್ಳಿ ಗ್ರಾಮದ ಶಾಸಕರ ನಿವಾಸದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement