ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಾಕ್ ಸೈನಿಕರದ್ದೇ ಕೃತ್ಯ

ಕಾಶ್ಮೀರದಲ್ಲಿ ನಡೆದ ಐವರು ಭಾರತೀಯ ಯೋಧರ ಹತ್ಯೆಗೆ ಸಂಬಂಧಿಸಿ ಸಂಸತ್ತಿನಲ್ಲಿ ನೀಡಿದ ತಮ್ಮ ಹೇಳಿಕೆಯನ್ನು ರಕ್ಷಣಾ ಸಚಿವ ಎ.ಕೆ. ಆಂಟನಿ...

Mainashree
Updated On : 9 Aug 2013, 1:22 am

ನವದೆಹಲಿ: ಕಾಶ್ಮೀರದಲ್ಲಿ ನಡೆದ ಐವರು ಭಾರತೀಯ ಯೋಧರ ಹತ್ಯೆಗೆ ಸಂಬಂಧಿಸಿ ಸಂಸತ್ತಿನಲ್ಲಿ ನೀಡಿದ ತಮ್ಮ ಹೇಳಿಕೆಯನ್ನು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಕೊನೆಗೂ ಪರಿಷ್ಕರಿಸಿದ್ದಾರೆ. ಈ ಪಾಶವೀ ಕೃತ್ಯದ ಹಿಂದೆ ಪಾಕ್ ಸೇನೆಯ ನೇರ ಕೈವಾಡ ಇದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಬುಧವಾರ ನೀಡಿದ್ದ ಹೇಳಿಕೆಯನ್ನು ರಕ್ಷಣಾ ಸಚಿವ ಬದಲಿಸಿದ್ದಾರೆ.
ಸೋಮವಾರ ರಾತ್ರಿಯ ಘಟನೆ ಹಿಂದೆ ಪಾಕ್ ಸೇನೆಯ ವಿಶೇಷ ದಳದ  ಕೈವಾಡ ಇರುವುದು ಸ್ಪಷ್ಟವಾಗಿದೆ. ಪಾಕ್ ಸೇನೆಯ ನೆರವು, ಸೌಲಭ್ಯ ಮತ್ತು ನೇರ ಭಾಗವಹಿಸುವಿಕೆ ಇಲ್ಲದೆ ಈ ರೀತಿಯ ಘಟನೆ ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ನೀಡಿದ ಹೇಳಿಕೆಯಲ್ಲಿ ಆ್ಯಂಟನಿ ಸ್ಪಷ್ಟನೆ ನೀಡಿದ್ದಾರೆ.
ಇದು ಸಹಜವಾಗಿಯೇ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿ ಭಾರತದ ವರ್ತನೆ ಹಾಗೂ ಪಾಕಿಸ್ತಾನದ ಜತೆಗಿನ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಅವರು ಎಚ್ಚರಿಸಿದ್ದಾರೆ. ಸಂಸತ್ತಿನಲ್ಲಿ ಬುಧವಾರ ನೀಡಿದ ಹೇಳಿಕೆಯು ಆ ಕ್ಷಣದಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿತ್ತು.
ಈಗ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಿಕ್ಕಿದೆ. ಪಾಕ್ ಸೇನೆಯ ನೇರ ಕೈವಾಡ ಕುರಿತು ಸ್ಪಷ್ಟ ಪುರಾವೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಆ್ಯಂಟನಿ ನೀಡಿದ ಸ್ಪಷ್ಟೀಕರಣಕ್ಕೆ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್, ಬಿಎಸ್ಪಿ ನಾಯಕಿ ಮಾಯಾವತಿ ಸೇರಿದಂತೆ ಅನೇಕ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಕೊನೆಗೂ ತಪ್ಪು ಒಪ್ಪಿಕೊಂಡು ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಸುಷ್ಮಾ ಹೇಳಿದ್ದಾರೆ.
ಭಾರತೀಯ ಯೋಧರ ಹತ್ಯೆ ಪಾಕ್ ಸೈನಿಕರಂತೆ ಸಮವಸ್ತ್ರ ಧರಿಸಿದ 20 ಶಸ್ತ್ರಸಜ್ಜಿತ ಉಗ್ರರ ಕೃತ್ಯ ಎಂದು ಆ್ಯಂಟನಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ತನಿಖೆಗೆ ಆದೇಶ: ಐವರು ಯೋಧರ ಹತ್ಯೆಗೆ ಸಂಬಂಧಿಸಿ ಸೇನೆಯು ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement