ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಗಲಲ್ಲೇ ಏಡ್ಸ್ ಕಟ್ಟಿಕೊಂಡ ಬಾಗಲಕೋಟೆ!

ಮುಳುಗಡೆ ಜಿಲ್ಲೆ ಎಂಬ ಕುಖ್ಯಾತಿ ಇರುವ ಬಾಗಲಕೋಟೆ ಜಿಲ್ಲೆಯಲ್ಲಿ ಏಡ್ಸ್ ಹೆಮ್ಮಾರಿ ಆಟ ಇನ್ನೂ ನಿಂತಿಲ್ಲ. ಏಡ್ಸ್ ನಿರ್ಮೂಲನೆಗೆ...

Mainashree
Updated On : 9 Aug 2013, 12:24 pm

ಕನ್ನಡಪ್ರಭ ವಾರ್ತೆ, ಬಾಗಲಕೋಟೆ, ಆ.8-
ಮುಳುಗಡೆ ಜಿಲ್ಲೆ ಎಂಬ ಕುಖ್ಯಾತಿ ಇರುವ ಬಾಗಲಕೋಟೆ ಜಿಲ್ಲೆಯಲ್ಲಿ ಏಡ್ಸ್ ಹೆಮ್ಮಾರಿ ಆಟ ಇನ್ನೂ ನಿಂತಿಲ್ಲ. ಏಡ್ಸ್ ನಿರ್ಮೂಲನೆಗೆ ಸರ್ಕಾರ, ಸಕಾರೇತರ ಸಂಸ್ಥೆಗಳು ಎಷ್ಟೇ ಪ್ರಯತ್ನ ಮಾಡಿದ್ದರೂ ಇದುವರೆಗೂ ಸಾಧ್ಯವಾಗಿಲ್ಲ. ಈಗಲೂ ಬಾಗಲಕೋಟೆ ಜಿಲ್ಲೆ ನಂ.1 ಸ್ಥಾನದಲ್ಲಿದೆ!.
ಜಾಗತಿಕ ಐಟಿ ದಿಗ್ಗಜ ಬಿಲ್ ಗೇಟ್ಸ್ ಅವರೂ ಸಾಮಾಜಿಕ ಕಾರ್ಯದ ಅಂಗವಾಗಿ, ಬಾಗಲಕೋಟೆ ಜಿಲ್ಲೆಯ ಎಚ್‌ಐವಿ, ಏಡ್ಸ್ ನಿಯಂತ್ರಣಕ್ಕೆ ಸಹಸ್ರಾರು ಡಾಲರ್ ನೀಡಿ ಮಾನವೀಯತೆ ಮೆರೆದಿದ್ದರು. ಇದೇ ವೇಳೆ, ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಎಚ್‌ಐವಿ ಪೀಡಿತರೊಬ್ಬರ ಮನೆಯಲ್ಲಿ 'ಗ್ರಾಮ ವಾಸ್ತವ್ಯ' ಮಾಡಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು. ಎಷ್ಟೆಲ್ಲ ಪ್ರಯತ್ನ, ಯೋಜನೆಗಳ ಹೊರತಾಗಿಯೂ ಬಾಗಲಕೋಟೆ ಜಿಲ್ಲೆಯಲ್ಲಿ ಈಗಲೂ ಎಚ್‌ಐವಿ, ಏಡ್ಸ್ ಹೆಮ್ಮಾರಿ ತಾಂಡವವಾಡುತ್ತಿದೆ. ಅಷ್ಟೇ ಅಲ್ಲದೆ, ಯಾರದೋ ದೌರ್ಜನ್ಯಕ್ಕೆ ಬಲಿಯಾಗಿ 'ಕೆಂಪು ದೀಪ' ಪ್ರದೇಶದ ಆಶ್ರಯ ಪಡೆಯುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಎಚ್‌ಐವಿ, ಏಡ್ಸ್‌ನಲ್ಲಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಮಧ್ಯೆ ನಂಬರ್ ಒನ್ ಸ್ಥಾನಕ್ಕಾಗಿ ಪೈಪೋಟಿ ಇದೆ. ಭೌಗೋಳಿಕ ವಿಸ್ತಾರ ಮತ್ತು ಜನಸಂಖ್ಯೆ ಆಧರಿಸಿದರೆ ಆ ಪಟ್ಟ ಬಾಗಲಕೋಟೆಗೇ ದಕ್ಕುತ್ತದೆ. 2003ರಲ್ಲಿ ಶೇ.3.12ರಷ್ಟಿದ್ದ ಪ್ರಮಾಣ 2013ರ ಹೊತ್ತಿಗೆ ಶೇ.0.30ಕ್ಕೆ ಇಳಿದಿದೆ ಎಂದು ರಾಜ್ಯ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ, ಅಸಲಿ ಕಥೆಯೇ ಬೇರೆ. ಇದಕ್ಕೆ ಚಿಕ್ಕ ಉದಾಹರಣೆ ಎಂದರೆ, ಮುಧೋಳದ ಚೈತನ್ಯ ಸಂಘದಲ್ಲಿ ತಾವು ವೃತ್ತಿನಿರತ 500ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ನೋಂದಣಿ ಮಾಡಿಕೊಂಡಿದ್ದಾರೆ.  
ಇದು ಕೇವಲ ಒಂದು ಸಂಘದ ಅಂಕಿ-ಅಂಶ ಮಾತ್ರ. ಹಾಗಾಗಿ, ಸರ್ಕಾರ ಹೇಳಿಕೊಂಡಂತೆ ಜಿಲ್ಲೆಯಲ್ಲಿ ಎಚ್‌ಐವಿ, ಏಡ್ಸ್ ನಿಯಂತ್ರಣಕ್ಕೆ ಬಂದಿಲ್ಲ ಎನ್ನುವುದು ಇದರಿಂದ ದೃಢವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, 2007ರಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದ್ದ ಬಾಗಲಕೋಟೆಯಲ್ಲಿ ಈಗ ಲೈಂಗಿಕ ಕಾರ್ಯಕರ್ತರ ವಲಸೆ ಹೆಚ್ಚಿದ್ದರಿಂದ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ನಿಖರತೆ ಸಿಗುತ್ತಿಲ್ಲ!
ತೇರದಾಳ ಕ್ಷೇತ್ರ ವ್ಯಾಪ್ತಿಯ ಬನಹಟ್ಟಿ ಮತ್ತು ಚಿಮ್ಮಡ ಹೋಬಳಿಗಳಲ್ಲಿ ಅತಿ ಹೆಚ್ಚು ಲೈಂಗಿಕ ಕಾರ್ಯಕರ್ತರು ಇದ್ದಾರೆ. ಅಷ್ಟೇ ಅಲ್ಲ ಯುವತಿಯರ ಸಾಗಾಟ ಹೆಚ್ಚಿನ ಪ್ರಮಾಣದಲ್ಲಿ ಆಗುವುದು ಇಲ್ಲಿಂದಲೇ ಎನ್ನುವ ವರದಿಯೊಂದು ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾಗಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಮುಂಬೈನ ಕಾಮಾಟಿಪುರ, ಪುಣೆ ಮತ್ತು ಗೋವಾಗಳಲ್ಲಿ ಸದ್ಯ ವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವವರಲ್ಲಿ ಬಾಗಲಕೋಟೆ ಜಿಲ್ಲೆಯ 2700ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ!

ಆವಾಹನ್ ಫಂಡ್ ನೆರವು:
ಜಿಲ್ಲೆಯ ಮುಧೋಳ ಹಾಗೂ ಜಮಖಂಡಿ ತಾಲೂಕುಗಳಿಂದಲೇ ಅಪ್ರಾಪ್ತ ವಯಸ್ಸಿನ ಹೆಚ್ಚಿನ ಲೈಂಗಿಕ ಕಾರ್ಯಕರ್ತರು ಕೆಂಪುಪ್ರದೇಶಗಳಿಗೆ ಸೇರುತ್ತಿದ್ದಾರೆ ಎಂದು 2006ರಲ್ಲಿ ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಜೇಶನ್(ನ್ಯಾಕೋ) ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿತ್ತು. ಹಾಗಾಗಿ, ಲೈಂಗಿಕ ಕಾರ್ಯಕರ್ತೆಯರು ಮತ್ತು ಎಚ್‌ಐವಿ ಪೀಡಿತರ ಸಂಖ್ಯೆ ಕುಗ್ಗಿಸುವ ಪ್ರಯತ್ನವಾಗಿ ನ್ಯಾಕೋ ಜಿಲ್ಲೆಗೆ ಆಗಮಿಸಿದಾಗ ರಾಜ್ಯದ ಕೆಎಸ್‌ಎಪಿಎಸ್ ಕೈ ಜೋಡಿಸಿತು. ಇದನ್ನು ಗಮನಿಸಿದ ಬಿಲ್ ಗೇಟ್ಸ್ ತಮ್ಮ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಲು 'ಆವಾಹನ್ ಫಂಡ್‌' ರಚಿಸಿ ಆ ಮೂಲಕ 2007ರಿಂದ 2011ರವರೆಗೆ ಪ್ರತಿ ವರ್ಷ 15 ರಿಂದ 20 ಲಕ್ಷದ ವರೆಗೆ ವ್ಯಯಿಸಿದ್ದಾರೆ.
ಚೈತನ್ಯ ಮಹಿಳಾ ಸಂಘ ಮತ್ತು ಮಿಲನ ಮಹಿಳಾ ಸಂಘದ ಕಾರ್ಯಕರ್ತರನ್ನು ದೇವದಾಸಿಯರು, ಲೈಂಗಿಕ ಕಾರ್ಯಕರ್ತರ ಬಳಿ ಬಿಟ್ಟು ಜಾಗೃತಿ ಮೂಡಿಸಿದರು. ಕಾಂಡೋಮ್ ಬಳಕೆ, ಆರೋಗ್ಯ ತಪಾಸಣೆ, ಮಕ್ಕಳ ಪಾಲನೆ ಇತ್ಯಾದಿ ತಿಳಿ ಹೇಳಲಾಯಿತು. ಅಷ್ಟೇ ಅಲ್ಲದೆ, ಅಮೆರಿಕದ ಕ್ಲಿಂಟನ್ ಫೌಂಡೇಷನ್ ಕೂಡ ಈ ಪ್ರದೇಶಕ್ಕೆ ಧಾವಿಸಿ, ಎಚ್‌ಐವಿ ಪೀಡಿತರ ಮಕ್ಕಳು ಮತ್ತು ಎಚ್‌ಐವಿ ಬಾಧಿತ ಮಕ್ಕಳಿಗೆ ಉತ್ತಮ ಆಹಾರ (ನ್ಯೂಟ್ರೇಶನ್ ಫುಡ್) ನೀಡುವ ಕೈಂಕರ್ಯಕ್ಕೆ ಇಳಿಯಿತು. ಸುಮಾರು ಒಂದೂವರೆ ವರ್ಷ ಕಾಲ ಹೀಗೆ ಅನ್ನದಾನ ಮಾಡಿತು.
ಇದೆಲ್ಲವೂ ಇಂದು ಕನಸೆಂಬಂತೆ ಮುಗಿದು ಹೋಗಿದೆ. ಆದರೂ ಸರ್ಕಾರ, ಕೆಲವು ಸರ್ಕಾರೇತರ ಸಂಸ್ಥೆಗಳು ತಮ್ಮ ಪ್ರಯತ್ನ ಮುಂದುವರಿಸಿವೆ. ಆದರೆ, ಯುವತಿಯರ ಮಾರಾಟ ಜಾಲದ ಕೈ ಚಳಕದಿಂದಾಗಿ ಏಡ್ಸ್  ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಇದೆ.

ವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಲ್ಲಿ ಎಚ್‌ಐವಿ, ಏಡ್ಸ್ ಹರಡುವುದನ್ನು ತಡೆಗಟ್ಟಲು ಸಾಧ್ಯ. ಆದರೆ, ಯುವತಿಯರ ಅಕ್ರಮ ಸಾಗಣೆ ಮತ್ತು ಎಳೆ ವಯಸ್ಸಿನಲ್ಲಿಯೇ ಕೆಂಪು ದೀಪಕ್ಕೆ ಮಾರಾಟವಾಗುವ ಯುವತಿಯರನ್ನು ಎಚ್‌ಐವಿ, ಏಡ್ಸನಿಂದ ರಕ್ಷಿಸುವುದು ಕಷ್ಟ. ಅವರ್ಯಾರೂ ಅಂಕಿ-ಸಂಖ್ಯೆಯಲ್ಲಿ ಪರಿಗಣಿಸುವುದು ಸಾಧ್ಯವಿಲ್ಲ.
- ಶೈಲಜಾ ಹಿರೇಮಠ, ಕೆಎಚ್‌ಪಿಟಿ ಜಿಲ್ಲಾ ಸಮನ್ವಯ ಅಧಿಕಾರಿ

- ಮಲ್ಲಿಕಾರ್ಜುನ ಸಿದ್ದಣ್ಣವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement