ವರುಣನ ಅಬ್ಬರ: ಪ್ರವಾಸಕ್ಕೆ ಪ್ರಯಾಸ
ಕ.ಪ್ರ.ವಾರ್ತೆ, ಬೆಂಗಳೂರು, ಆ. 8-
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ರಸ್ತೆಗಳಲ್ಲಿ ಧಾರಾಳವಾಗಿರುವ ಗುಂಡಿಗಳಿಂದಾಗಿ ಈಗ ರಾಜ್ಯ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ.
ಭಾರೀ ಮಳೆ ಹಾಗೂ ಹದಗೆಟ್ಟ ರಸ್ತೆಗಳಿಂದಾಗಿ ಪ್ರಯಾಣ ಪ್ರಯಾಸವಾಗಿರುವ ಹಿನ್ನೆಲೆಯಲ್ಲಿ ಸರಣಿ ರಜೆ ಸಿಕ್ಕರೂ ಸಾರ್ವಜನಿಕರು ಪ್ರವಾಸ ತೆರಳಲು ಹಿಂಜರಿಯುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದು ರಸ್ತೆಗಳ ತುರ್ತು ರಿಪೇರಿ ಆಗದಿದ್ದಲ್ಲಿ ದಸರಾ ವೇಳೆ ನಡೆಯಲಿರುವ ಪ್ರವಾಸೋದ್ಯಮ ವಹಿವಾಟಿನ ಮೇಲೂ ತೀವ್ರ ಹೊಡೆತ ಬೀಳಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ದಾಖಲೆ ಮಳೆ: ಜೂ.1 ರಿಂದ ಆ. 5ರ ವರೆಗೆ ರಾಜ್ಯದಲ್ಲಿ 513 ಮಿ.ಮೀ.ನಷ್ಟು ಮಳೆ ನಿರೀಕ್ಷಿಸಲಾಗಿದ್ದರೆ, ಶೇ. 21ರಷ್ಟು ಅಧಿಕ ಅಂದರೆ 620 ಮಿ.ಮೀ. ನಷ್ಟು ಮಳೆಯಾಗಿದೆ. ಆ ಮೂಲಕ ಈ ಬಾರಿ ರಾಜ್ಯದಲ್ಲಿ ಸುರಿದಿರುವ ಮುಂಗಾರು ಮಳೆ ಕಳೆದ 6 ವರ್ಷಗಳಲ್ಲೇ ದಾಖಲೆ ಮಟ್ಟದ್ದು. ಹಿಂದೆ 1994, 2005ರಲ್ಲಿ ನಿರೀಕ್ಷೆಗಿಂತ ಶೇ. 21ರಷ್ಟು ಅಧಿಕ ಮಳೆಯಾಗಿದ್ದು ಹೊರತುಪಡಿಸಿದರೆ, 2007ರಲ್ಲಿ ವಾಡಿಕೆಗಿಂತ ಶೇ. 22ರಷ್ಟು ಅಧಿಕ ಮಳೆ ಆಗಿತ್ತು. ಅದರಲ್ಲೂ ಕರಾವಳಿಯಲ್ಲಿ 1999ರ ಬಳಿಕ ಮತ್ತೆ ಅತ್ಯಧಿಕ ಮಳೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ. ಮಳೆ ಪ್ರಮಾಣ 2 ಸಾವಿರ ಮಿ.ಮೀ. ದಾಟಿದೆ. ಚಿಕ್ಕಮಗಳೂರು, ಕೊಡಗು, ಹಾಸನಗಳಲ್ಲೂ ಸುದೀರ್ಘ ಸಮಯದ ಬಳಿಕ ದಾಖಲೆ ಮಳೆ ಸುರಿದಿದೆ. ಹೀಗಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗಿವೆ, ಜಲಪಾತಗಳೆಲ್ಲ ಧುಮ್ಮಿಕ್ಕಲಾರಂಭಿಸಿವೆ. ಪ್ರಕೃತಿ ವೀಕ್ಷಣೆ ನಯನ ಮನೋಹರ ಎಂಬಂತಾಗಿದೆ. ಆದರೆ...
ಹದಗೆಟ್ಟ ರಸ್ತೆ, ಆಪತ್ತಿನ ಆತಂಕ: ಭಾರಿ ಮಳೆಗೆ ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು ತೀವ್ರ ಆತಂಕ ಸೃಷ್ಟಿಯಾಗಿದೆ. ಈ ಪ್ರದೇಶಗಳಲ್ಲಿ ಸಾಕಷ್ಟು ಕಡೆ ರಸ್ತೆ, ಗುಡ್ಡಗಳು ಕುಸಿದಿದ್ದು ಸಂಪರ್ಕ ವ್ಯವಸ್ಥೆ ಏರುಪೇರಾಗಿದೆ. ಮಡಿಕೇರಿ ಬಳಿ ಕೊಯನಾಡಿನಲ್ಲಿ ಕೆಲ ದಿನಗಳ ಹಿಂದೆ ಬಿರುಕು ಬಿಟ್ಟಿದ್ದ ರಸ್ತೆ ದುರಸ್ತಿಪಡಿಸಿದ್ದರೂ ಮತ್ತೆ ಬಿರುಕು ಉಂಟಾಗಿ ಹೆದ್ದಾರಿ ಹಾನಿಗೀಡಾಗಿದೆ. ಹಾಗಾಗಿ, ಮಡಿಕೇರಿ-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಮಡಿಕೇರಿ-ಕರಿಕೆ ಮಾರ್ಗವಾಗಿ ವಾಹನಗಳು ಸಾಗಬೇಕಾಗಿವೆ. ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಸಂಚರಿಸಬೇಕಾದ ವಾಹನಗಳು ಹಾಸನ-ಸಕಲೇಶಪುರ ಮೂಲಕ ತೆರಳಬೇಕಾಗಿವೆ. ಸಂಪರ್ಕಕ್ಕೆ ಅಡ್ಡಿಯಾದ ರಸ್ತೆಗಳಲ್ಲಿ ತುರ್ತು ಪರಿಹಾರ ಕೈಗೊಂಡಿದ್ದರೂ ಮತ್ತೆ ಸಂಪರ್ಕ ಸ್ಥಗಿತಗೊಳ್ಳುವ ಭಯ ಸಾಮಾನ್ಯ. ಅತ್ತ ಶಿರಾಡಿ ಘಾಟಿ ಪ್ರತಿ ಮಳೆಗಾಲದಲ್ಲಿ ಹಾಳಾಗುವುದು ವಾಡಿಕೆಯೆಂಬಂತಾಗಿದೆ.
ಆಗುಂಬೆ, ಬಾಳೆಬರೆ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಸಾಗುವುದು ದುಸ್ತರ ಮಾತ್ರವಲ್ಲ, ಯಾವಾಗ ಎಲ್ಲಿ ಗುಡ್ಡ ಜರಿದು ರಸ್ತೆ ಸಂಪರ್ಕ ಕಡಿತಗೊಳ್ಳುವುದೋ ಎಂಬ ಆತಂಕ ಪ್ರಯಾಣಿಕರು, ವಾಹನ ಚಾಲಕ-ಮಾಲಿಕರನ್ನು ಕಾಡತೊಡಗಿದೆ. ಪ್ರಮುಖ ಯಾತ್ರಾಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ, ಕೊಲ್ಲೂರು, ಸಿಗಂದೂರು, ಕಟೀಲು, ಕಾವೇರಿ ಮುಂತಾದವುಗಳ ಜತೆಗೆ ಪ್ರವಾಸಿ ತಾಣಗಳಾದ ಮಡಿಕೇರಿ, ಊಟಿ, ಜೋಗ, ಮರವಂತೆ, ಆಗುಂಬೆ, ಮಂಗಳೂರು ಮುಂತಾದೆಡೆಗೆ ಸಂಪರ್ಕ ಕಲ್ಪಿಸುವ ಬಹುತೇಕ ಎಲ್ಲ ರಸ್ತೆಗಳಲ್ಲಿ ಅಸಂಖ್ಯಾತ ಗುಂಡಿಗಳಾಗಿದ್ದು, ವಾಹನ ಚಲಾಯಿಸುವುದೇ ಕಠಿಣವಾಗಿದೆ.
ಪರಿಣಾಮ, ಪ್ರಯಾಣ ಪ್ರಯಾಸ ಆದ ಕಾರಣ ಸಾರ್ವಜನಿಕರು ಪ್ರವಾಸಕ್ಕೆ ಮುಂದಾಗುತ್ತಿಲ್ಲ. ಧೈರ್ಯ ಮಾಡಿ ಹೋದರೂ ಗುಂಡಿಭರಿತ ರಸ್ತೆಗಳಲ್ಲಿ ಎಲ್ಲಿ ವಾಹನ ಕೆಟ್ಟು ನಿಲ್ಲುವುದೋ, ಹದಗೆಟ್ಟ ರಸ್ತೆಯಲ್ಲಿ ಯಾವಾಗ ಅಪಘಾತ ಆಗುವುದೋ ಎಂಬ ಆತಂಕಕ್ಕೀಡಾಗಿರುವ ಸಾರ್ವಜನಿಕರು ಸರಣಿ ರಜೆ ಸಿಕ್ಕರೂ ಯಾತ್ರಾ ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸು ಮಾಡುತ್ತಿಲ್ಲ ಎಂದು ಎಫ್ಕೆಸಿಸಿಐ(ಪ್ರವಾಸೋದ್ಯಮ) ಸಮಿತಿ ಸದಸ್ಯರೂ ಆಗಿರುವ ಕೆ.ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಡುತ್ತಾರೆ.
ಭಾರಿ ಮಳೆ, ಹದಗೆಟ್ಟ ರಸ್ತೆಗಳಿಂದಾಗಿ ಪ್ರವಾಸೋದ್ಯಮಕ್ಕೆ ಕುತ್ತುಂಟಾಗಿದೆ. ಸರಣಿ ರಜೆ ಸಿಕ್ಕರೂ, ಪ್ರಯಾಣ ಪ್ರಯಾಸ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರವಾಸ ಮಾಡುತ್ತಿಲ್ಲ. ಹಾಗಾಗಿ ಸರಣಿ ರಜೆ, ವಾರಾಂತ್ಯ ವೇಳೆ ನಗರದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸ ಹೊರಡುತ್ತಿದ್ದ ವಾಹನಗಳ ಸಂಖ್ಯೆ ಕುಸಿದಿದೆ. ಸೆಪ್ಟೆಂಬರ್ ಬರುತ್ತಿದ್ದಂತೆ ದಕ್ಷಿಣ ಭಾರತ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಅಲ್ಲದೆ ಆ ಬಳಿಕ ದಸರಾ, ದೀಪಾವಳಿ ಹಬ್ಬಗಳ ಕಾರಣ ಯಾತ್ರಾಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕ. ಅಷ್ಟರೊಳಗೆ ರಾಜ್ಯದ ಪ್ರಮುಖ ರಸ್ತೆಗಳ ತುರ್ತು ರಿಪೇರಿ ಆಗದಿದ್ದಲ್ಲಿ ಪ್ರವಾಸೋದ್ಯಮಕ್ಕೇ ಧಕ್ಕೆ ಆಗಲಿದೆ.
- ಕೆ. ರಾಧಾಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ
- ರವಿಕಾಂತ ಕುಂದಾಪುರ