158 ಅಕ್ರಮ ಪವನ್ ವಿದ್ಯುತ್ ಯಂತ್ರ
ಗದಗ: ಪವನ ವಿದ್ಯುತ್‌ಗೆ ಹೆಸರುವಾಸಿಯಾದ ಜಿಲ್ಲೆಯ ಕಪ್ಪತ್ತಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳು ಮುಗಿಬಿದ್ದು ಯಂತ್ರಗಳನ್ನು ಅಳವಡಿಸಿವೆ. ಆದರೆ, ವಿದ್ಯುತ್ ಯಂತ್ರ ಸ್ಥಾಪನೆ ವೇಳೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಜಿಲ್ಲೆಯ ಗದಗ, ಶಿರಹಟ್ಟಿ, ಮುಂಡರಗಿ, ರೋಣ ಹಾಗೂ ನರಗುಂದ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 393 ಪವನ ವಿದ್ಯುತ್ ಉತ್ಪಾದನಾ ಯಂತ್ರಗಳಿವೆ. ಅದರಲ್ಲಿ 158(ವಿವಿಧ ಕಂಪನಿಗಳಿಗೆ ಸೇರಿದ್ದು) ಪವನ ವಿದ್ಯುತ್ ಉತ್ಪಾದನಾ ಯಂತ್ರಗಳು ಎನ್‌ಎ ಮಾಡದೇ ಇರುವ ರೈತರ ಭೂಮಿಯಲ್ಲಿಯೇ ಕೃಷಿಯೇತರ ಚಟುವಟಿಕೆ ನಡೆಸುತ್ತಿವೆ.
ಸಮೀಕ್ಷೆ ಹೇಗೆ ನಡೆದಿದೆ?: ಜಿಲ್ಲಾಡಳಿತ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ, ಎಲ್ಲ ತಹಸೀಲ್ದಾರ್‌ಗಳ ಮೂಲಕ ಪವನ ವಿದ್ಯುತ್ ಉತ್ಪಾದನಾ ಯಂತ್ರಗಳನ್ನು ಅಳವಡಿಸಿರುವ ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಎನ್‌ಎ ಆಗಿರುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ವರದಿ ನೀಡಲು ಸೂಚಿಸಲಾಗಿತ್ತು. ಇದರ ಆಧಾರದಲ್ಲಿ ನಡೆದ ಸಮೀಕ್ಷೆಯಲ್ಲಿಯೇ ಈ ಅಕ್ರಮ ಬಯಲಿಗೆ ಬಂದಿದೆ. ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಯೊಂದು ಕಂಪನಿಗಳಿಂದ ಮತ್ತು ಅವರು ಯಂತ್ರ ಅಳವಡಿಸಿರುವ ಹೊಲಗಳ ಮಾಲೀಕರು ಮತ್ತು ತಮ್ಮ ಮೂಲ ದಾಖಲೆಗಳ ಆಧಾರದಲ್ಲಿ ಸಮೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಇದು ಬಯಲಿಗೆ ಬಂದಿದೆ.
ಅಧಿಕಾರಿಗಳ ಶಾಮೀಲು ಶಂಕೆ
ಅಕ್ರಮ ಪವನ ವಿದ್ಯುತ್ ಯಂತ್ರಗಳ ಸ್ಥಾಪನೆ ಹಿಂದೆ ಹಿಂದೆ ಕೆಲವು ಹಿರಿಯ ಅಧಿಕಾರಿಗಳ ಕೈವಾಡವೂ ಅತ್ಯಂತ ಜೋರಾಗಿರುವುದರಿಂದಲೇ ಇದೆಲ್ಲ ನಡೆಯಲು ಸಾಧ್ಯವಾಗಿದೆ. 158 ವಿದ್ಯುತ್ ಉತ್ಪಾದನಾ ಯಂತ್ರಗಳು ಅಕ್ರಮವಾಗಿವೆ ಎನ್ನುವುದಾದರೆ ಇಲ್ಲಿಯವರೆಗೂ ಜಿಲ್ಲಾಡಳಿತ ಏನು ಮಾಡುತ್ತಿತ್ತು ಎನ್ನುವುದೇ ಮುಖ್ಯ ಪ್ರಶ್ನೆಯಾಗಿದೆ. ಕೇವಲ ಕಂಪನಿಗಳಿಗೆ ನೋಟಿಸ್ ನೀಡಿ, ಅವರಿಂದ ಸರ್ಕಾರಕ್ಕೆ ಬರಬೇಕಾದ ಹಣ ತುಂಬಿಸಿಕೊಂಡರೆ ಸಾಲದು. ಈ ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧವೂ ಸಮಗ್ರ ತನಿಖೆಯಾಗಬೇಕಿದೆ.
'ಕನ್ನಡಪ್ರಭ' ಬಯಲು ಮಾಡಿತ್ತು....
ಗದಗ ಜಿಲ್ಲೆಯಲ್ಲಿನ ಅಕ್ರಮ ಪವನ ವಿದ್ಯುತ್ ಯಂತ್ರಗಳ ಕುರಿತು 'ಕನ್ನಡಪ್ರಭ' ಜೂನ್ 26ರಂದು ವಿವರವಾದ ವರದಿಯನ್ನು ಮಾಡಿತ್ತು. ವರದಿ ಆಧರಿಸಿಯೇ ಜಿಲ್ಲಾಧಿಕಾರಿ ಅಂಜನ್‌ಕುಮಾರ್ ತನಿಖೆಗೆ ಆದೇಶ ನೀಡಿದ್ದರು. ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ನಡೆಸಿದ (ಸಮೀಕ್ಷೆ) ತನಿಖೆಯ ವೇಳೆಯಲ್ಲಿ ಅಕ್ರಮ ಬಯಲಿಗೆ ಬಂದಿದೆ.
ಯಾವ ಯಾವ ಕಂಪನಿಯ ಅಕ್ರಮ?
ಅ.ನಂ ಕಂಪನಿ ಹೆಸರು ಯಂತ್ರ
ಎನಾರ್ಕಾನ್ 80
ಎನ್.ಸಿ.ಪಿ.ಸಿ 10
ಪಯೋನಿಯರ್ 11
ಟಾಟಾ ಪವರ್ 02
ಗ್ಲೋಬಲ್ ವಿಂಡ್ 26
ಬೆಳಗಾವಿ ವಿಂಡ್ ಪಾರ್ಮ್ 14
ದ್ರಾವಿಡ ಕಂಪನಿ 01
ಡಿ.ಎಲ್.ಎಫ್. ಕಂಪನಿ 14
ಒಟ್ಟು 158
ಈಗಾಗಲೇ ನಮ್ಮ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಕೆಲವರು ಎನ್‌ಎ ಮಾಡದೇ ಯಂತ್ರಗಳನ್ನು ಅಳವಡಿಸಿರುವುದು ಬಹಿರಂಗಗೊಂಡಿದೆ. ಈ ಕುರಿತು ನಾನು ಕರ್ನಾಟಕ ಭೂ ಕಂದಾಯ ನಿಯಮದ ಆಧಾರದಲ್ಲಿ 16-7-2013ರಂದು ಎಲ್ಲ 158 ಯಂತ್ರಗಳ ಕಂಪನಿಗಳಿಗೆ ನೋಟಿಸ್ ನೀಡಿ, ಒಂದು ವಾರದಲ್ಲಿ ಉತ್ತರಿಸಲು ಸೂಚಿಸಿದ್ದೆ. ಕೆಲವರು ಉತ್ತರಿಸಿದ್ದು, ಇನ್ನು ಕೆಲವರು ಉತ್ತರಿಸಿಲ್ಲ. ಈ ವಿಷಯದಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ.
- ಎಸ್.ಟಿ. ಅಂಜನ್‌ಕುಮಾರ, ಜಿಲ್ಲಾಧಿಕಾರಿ, ಗದಗ
- ಶಿವಕುಮಾರ ಕುಷ್ಟಗಿ