ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಭ್ಯರ್ಥಿಗಳು ಗಪ್‌ಚುಪ್

ಹೆಸರಿಗೇನೋ ಪ್ರತಿಷ್ಠಿತ ಕ್ಷೇತ್ರ, ಆದರೆ ಚುನಾವಣೆಗೆ ನಿಂತ ಅಭ್ಯರ್ಥಿಗಳು ಮಾತ್ರ ಮೌನ ಮುನಿಗಳು..! ಇದು ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ...

Mainashree
Updated On : 10 Aug 2013, 12:06 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.9-
ಹೆಸರಿಗೇನೋ ಪ್ರತಿಷ್ಠಿತ ಕ್ಷೇತ್ರ, ಆದರೆ ಚುನಾವಣೆಗೆ ನಿಂತ ಅಭ್ಯರ್ಥಿಗಳು ಮಾತ್ರ ಮೌನ ಮುನಿಗಳು..!
ಇದು ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಾಡು.
ಈ ಎರಡು ಕ್ಷೇತ್ರಗಳ ಚುನಾವಣಾ ಕಣದ ಹುರಿಯಾಳುಗಳಿಗಿಂತ ಅವರ ಬೆನ್ನ ಹುರಿಯಂತೆ ನಿಂತಿರುವ ನಾಯಕರ ವಾಗಾಡಂಭರವೇ ಈಗ ಚರ್ಚೆಗೆ, ವಿವಾದಕ್ಕೆ, ವೈಯಕ್ತಿಕ ದ್ವೇಷದ ಅನಾವರಣಕ್ಕೆ, ಪ್ರತಿಷ್ಠೆಯ ಪಣಕ್ಕೆ ಕಾರಣವಾಗುತ್ತಿದೆ.
ಏಕೆಂದರೆ ಈ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ದೃಷ್ಟಿಯಲ್ಲಿ ಮಾತು ಬೆಳ್ಳಿ, ಮೌನ ಬಂಗಾರ. ಏಕೆಂದರೆ ಇವರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನರನ್ನು ಸೆಳೆಯುವಂತ ಮಾತಿನ ಶೈಲಿಯೇ ಕರಗತವಾಗಿಲ್ಲ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕುಟುಂಬದ ನಡುವಿನ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ನಿಂತಿರುವವರು ಅವರಿಬ್ಬರ ಕುಟುಂಬ ವರ್ಗದವರೇ. ಆದರೆ ಡಿ.ಕೆ. ಶಿವಕುಮಾರ್ ಸೋದರ ಡಿ.ಕೆ. ಸುರೇಶ್, ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿರರ್ಗಳವಾಗಿ ಭಾಷಣ ಮಾಡುವುದಕ್ಕೆ ಬರುವುದಿಲ್ಲ. ಹೀಗಾಗಿ ಇವರಿಬ್ಬರ ಪರವಾಗಿ ಪಕ್ಷದ ಮುಖಂಡರೇ ರಂಗಕ್ಕಿಳಿದಿದ್ದಾರೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದ ಅನುಭವವಿದ್ದರೂ ಅನಿತಾಕುಮಾರಸ್ವಾಮಿ ಸದನದೊಳಗೆ, ಹೊರಗೆ ಮಾತನಾಡಿದ್ದು ಕಮ್ಮಿ. ಈಗ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದರೂ ಅವರ ಧ್ವನಿ ಎಲ್ಲೂ ಕೇಳುತ್ತಿಲ್ಲ. ಮಾತಿನ ಮೂಲಕ ಮತದಾರರನ್ನು ಸೆಳೆಯುವ ಕೆಲಸವನ್ನು ಮಾವ ದೇವೇಗೌಡ ಹಾಗೂ ಪತಿ ಕುಮಾರಸ್ವಾಮಿ ನಡೆಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಅವರು ಉಚ್ಛರಿಸಿದ್ದು ಮೂರು ಮತ್ತೊಂದು ವಾಕ್ಯ.
ಅದೇ ರೀತಿ ಡಿ.ಕೆ. ಶಿವಕುಮಾರ್ 6 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರ ಹಿಂದೆ ಬೆನ್ನೆಲುಬಾಗಿ ದುಡಿದವರು ಡಿ.ಕೆ. ಸುರೇಶ್. ಆದರೆ ತಮ್ಮ ಪರ ಚುನಾವಣಾ ಪ್ರಚಾರಕ್ಕೆ ಅವರು ಅಣ್ಣ ಶಿವಕುಮಾರ್ ಅವರನ್ನೇ ಆಶ್ರಯಿಸಿದ್ದಾರೆ. ಗೊಟ್ಟಿಗೆರೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಕಾರ್ಯಕರ್ತರ ಸಭೆಯಲ್ಲೂ ಇದು ವ್ಯಕ್ತವಾಗಿದ್ದು, ನಾಯಕರು ಗಂಟೆಗಟ್ಟಲೆ ಮಾತನಾಡಿದರು. ಡಿ.ಕೆ. ಸುರೇಶ್ ಒಂದಕ್ಷರ ನುಡಿಯಲಿಲ್ಲ.
ಇದೇ ಸ್ಥಿತಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೂ ನಿರ್ಮಾಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಬಹುಭಾಷಾ ನಟಿ. ಮಾತ್ರವಲ್ಲ ನಾಲ್ಕು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಆದರೆ ಚುನಾವಣಾ ಭಾಷಣ ಮಾಡುವಾಗ ಮಾತ್ರ ಕಕ್ಕಾಬಿಕ್ಕಿ. ಹೀಗಾಗಿ ಇವರ ಪರ ಮಾತನಾಡುವ ಜವಾಬ್ದಾರಿ ಸಚಿವ ಅಂಬರೀಷ್, ಮಾಜಿ ಮುಖ್ಯಮಂತ್ರಿ ಕೃಷ್ಣ ವಹಿಸಿಕೊಂಡಿದ್ದಾರೆ.     
ಇನ್ನು ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಜನರ ಜತೆ ನೇರವಾಗಿ ಬೆರೆಯಬಲ್ಲರು. ಆದರೆ ವೇದಿಕೆಯಲ್ಲಿ ಕಕ್ಕಾಬಿಕ್ಕಿ. ಉಳಿದ ಮೂವರಿಗೆ ಹೋಲಿಸಿದರೆ ಚುನಾವಣಾ ಭಾಷಣದಲ್ಲಿ ಪರವಾಗಿಲ್ಲ ಎನ್ನಬಹುದಾದರೂ ಜನರನ್ನು ಸೆಳೆಯುವ ಜವಾಬ್ದಾರಿಯನ್ನು ದೇವೇಗೌಡರು, ಕುಮಾರಸ್ವಾಮಿ ಹಾಗೂ ಚಲುವರಾಯಸ್ವಾಮಿ ವಹಿಸಿಕೊಂಡಿದ್ದಾರೆ. ಹೀಗಾಗಿ ಪ್ರತಿಷ್ಠೆಯ ಕಣ ಎಂದೇ ಬಿಂಬಿಸಲ್ಪಟ್ಟಿರುವ ಈ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗಿಂತ ಅವರ ಪಕ್ಷದ ಮುಖಂಡರೇ ವಾಗ್ಮಿಗಳು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ

ಉಪ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಹತ್ವದ ಸಭೆ ಕರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭೆಯಲ್ಲಿ ಎಲ್ಲ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement