ಕೀಳು ರಾಜಕಾರಣ!
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಕಣ ಕೀಳುಮಟ್ಟದ ರಾಜಕೀಯ ಹೇಳಿಕೆಗಳಿಗೆ...
ಬೆಂಗಳೂರು: ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಕಣ ಕೀಳುಮಟ್ಟದ ರಾಜಕೀಯ ಹೇಳಿಕೆಗಳಿಗೆ ವೇದಿಕೆಯಾಗುತ್ತಿದೆ. ತೀರಾ ಖಾಸಗಿ ಬದುಕಿನ ಬಗ್ಗೆ ಆರೋಪ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಟೀಕೆ ಮಾಡುವ ಭರದಲ್ಲಿ ಜೆಡಿಎಸ್ ಮುಖಂಡ ಎಂ. ಶ್ರೀನಿವಾಸ್, 'ರಮ್ಯಾ ಅವರ ತಂದೆ ಯಾರೆಂದು ಗೊತ್ತಿಲ್ಲ. ಅವಳ ಜಾತಿ ಸಹ ಗೊತ್ತಿಲ್ಲ. ಅವಳು ಪ್ರನಾಳ ಶಿಶು ಎಂಬುದು ಮಾತ್ರ ಗೊತ್ತು' ಎಂದು ಆರೋಪಿಸಿದ್ದಾರೆ.
ಶ್ರೀನಿವಾಸ್ ಅವರ ಹೇಳಿಕೆ ಹೊರ ಬೀಳುತ್ತಿದ್ದಂತೆ ಭಾರಿ ವಿರೋಧ ವ್ಯಕ್ತವಾಗಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಅಂಬರೀಷ್, ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಹದ್ದು ಮೀರಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಪರ ಪ್ರಚಾರ ಮಾಡುವ ವೇಳೆ ಮಾತಿನ ಮೇಲಿನ ಹಿಡಿತ ತಪ್ಪಿದ ಎಂ.ಶ್ರೀನಿವಾಸ್ ರಮ್ಯಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರೆ ಅವರ ಜತೆಯಲ್ಲೇ ಇದ್ದ ಶಾಸಕ ಚೆಲುವರಾಯಸ್ವಾಮಿ ಮಾತ್ರ ಮೌನಕ್ಕೆ ಶರಣಾಗಿದ್ದರು.
ಅಂಬಿ ಗರಂ: ಎಂ.ಶ್ರೀನಿವಾಸ್ ಹೇಳಿಕೆಯಿಂದ ಕೋಪಗೊಂಡ ಅಂಬರೀಷ್, ಇದೊಂದು ಕೀಳುಮಟ್ಟದ ರಾಜಕಾರಣ. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವಾಗ ನಾವು ದಾಖಲೆಗಳನ್ನು ಸಲ್ಲಿಸಿದ್ದೇವೆ. ಆ ದಾಖಲೆಯಲ್ಲಿ ಮಂಡ್ಯ ಬೋರೇಗೌಡರ ಪುತ್ರಿ ರಂಜಿತಾರ ಮಗಳು ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ ಎಂದು ನಮೂದಿಸಿದ್ದೇವೆ. ಈ ದಾಖಲೆಯಿಂದ ಅವಳು ಒಕ್ಕಲಿಗಳು ಎಂದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೀಳುಮಟ್ಟದ ರಾಜಕಾರಣ ಮಾಡಲು ಹೋಗಬಾರದು. ನೇರವಾಗಿ ಹೋರಾಡೋಣ. ಸೋಲು, ಗೆಲವು ಜನಕ್ಕೆ ಬಿಟ್ಟಿದ್ದು. ವೈಯಕ್ತಿಕವಾಗಿ ಒಬ್ಬರನ್ನು ತೇಜೋವಧೆ ಮಾಡುವುದನ್ನು ನಾನು ಸಹಿಸುವುದಿಲ್ಲ. ಅದು ಸೌಜನ್ಯವೂ ಅಲ್ಲ. ಜೆಡಿಎಸ್ ನಾಯಕರು ಇಂಥ ಹೇಳಿಕೆಗಳನ್ನು ನೀಡಿ ಕ್ಷುಲ್ಲಕ ರಾಜಕಾರಣ ಮಾಡದೇ ಇದ್ದರೆ ಅವರಿಗೆ ಶೋಭೆ ಬರುತ್ತದೆ. ಇಲ್ಲದೇ ಹೋದರೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ರಮ್ಯಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ಜೆಡಿಎಸ್ ಮುಖಂಡ ಎಂ.ಶ್ರೀನಿವಾಸ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ವಾಕ್ಸಮರ
ರಾಮನಗರ/ಚನ್ನಪಟ್ಟಣ: ಲೋಕಸಭೆ ಉಪಚುನಾವಣೆ ಪ್ರಚಾರ ಕಾವೇರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಲು ಶುರು ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಬಿಜೆಪಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಲೋಕಸಭೆ ಉಪ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವಂತೆ ಅವರನ್ನು ಕೋರಿಲ್ಲ. ಕಾಂಗ್ರೆಸ್, ಬಿಜೆಪಿ ನಮಗೆ ಸಮಾನ ಪ್ರತಿಸ್ಪರ್ಧಿಗಳು. ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲು ಈ ಉಪ ಚುನಾವಣೆ ಬುನಾದಿಯಾಗಲಿದೆ. ಕಾಂಗ್ರೆಸ್ಸೇತರ ಸರ್ಕಾರ ರಚಿಸಲು ಸಮಾನ ಮನಸ್ಕರೊಂದಿಗೆ ಕೈ ಜೋಡಿಸಲು ಜೆಡಿಎಸ್ ಸಿದ್ಧವಿದೆ ಎಂದರು. ರಾಮನಗರದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ, ಜೆಡಿಎಸ್ ಒಂದು ಕುಟುಂಬದ ಅನುಕೂಲಕ್ಕೆ ಸೀಮಿತವಾದ ರಾಜಕೀಯ ಒಕ್ಕೂಟ. ಅದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ದೇವೇಗೌಡ ಹಾಗೂ ಕುಮಾರಸ್ವಾಮಿ ದ್ವಂದ್ವ ಹೇಳಿಕೆ ನೀಡುತ್ತ ಜನರ ಹಾದಿ ತಪ್ಪಿಸುತ್ತಿದ್ದಾರೆ. ಅಪವಿತ್ರ ಮೈತ್ರಿ ಮಾಡಿಕೊಂಡಿರುವವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ನೀಡಿರುವ ಹೇಳಿಕೆ ಸರಿಯಲ್ಲ. ಯಾರ ಬಗ್ಗೆಯೂ ಕೀಳಾಗಿ ಮಾತನಾಡಬಾರದು. ರಮ್ಯಾ ಅವರಿಗೆ ನೋವಾಗಿದ್ದರೆ ವೈಯಕ್ತಿಕವಾಗಿ ವಿಷಾದಿಸುತ್ತೇನೆ. ಮುಂದೆ ಈ ರೀತಿ ಹೇಳಿಕೆ ನೀಡದಂತೆ ಜೆಡಿಎಸ್ ನಾಯಕರು, ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು.
- ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ
ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ವೈಯಕ್ತಿಕ ಟೀಕೆ-ಟಿಪ್ಪಣಿಗಳಿಗೆ ಅವಕಾಶ ಮಾಡಿಕೊಡಬಾರದು. ಎಂ.ಶ್ರೀನಿವಾಸ್ ಅವರ ಹೇಳಿಕೆಯಿಂದ ರಮ್ಯಾ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ.
- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ರಮ್ಯಾ ಅವರು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನ ಅಭ್ಯರ್ಥಿ. ಅವರ ಬಗ್ಗೆ ವ್ಯಕ್ತಿಗತವಾಗಿ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಮಾಜಿ ಶಾಸಕ ಎಂ. ಶ್ರೀನಿವಾಸ ಹೇಳಿಕೆ ಜೆಡಿಎಸ್‌ನ ಧೋರಣೆಗೆ ಸಾಕ್ಷಿಯಾಗಿದೆ.
- ಡಿ.ಕೆ. ಶಿವಕುಮಾರ್, ಕನಕಪುರ ಶಾಸಕ