ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮರಳಿಗೆ ಜಾರಿತು ಮಾಧವ ಮಂತ್ರಿ!

ಕಾವೇರಿ ನದಿ ಪಾತ್ರದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಗೆ ಶತಮಾನಗಳ...

Mainashree
Updated On : 10 Aug 2013, 12:08 pm

ಕ.ಪ್ರ.ವಾರ್ತೆ, ಟಿ.ನರಸೀಪುರ, ಆ.9-
ಕಾವೇರಿ ನದಿ ಪಾತ್ರದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಗೆ ಶತಮಾನಗಳ ಇತಿಹಾಸವಿರುವ ಮೈಸೂರು ಜಿಲ್ಲೆಯ 'ಮಾಧವಮಂತ್ರಿ' ಅಣೆಕಟ್ಟೆ ಬಲಿಯಾಗಿದೆ.
ಟಿ.ನರಸೀಪುರ ತಾಲೂಕಿನ ತಲಕಾಡು ವಿಭಾಗದ ಸಾವಿರಾರು ರೈತರ ಕುಟುಂಬಗಳಿಗೆ ಈ ಅಣೆಕಟ್ಟೆ ಜೀವನಾಡಿಯಾಗಿತ್ತು.
ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಿರುಕಿನಲ್ಲಿ ನೀರು ನುಗ್ಗುತ್ತಿದ್ದರೂ ಕಾವೇರಿ ನಿಗಮದ ಅಧಿಕಾರಿಗಳು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಇದರ ಪರಿಣಾಮವಾಗಿ ಶುಕ್ರವಾರ 60 ಮೀ. ನಷ್ಟು ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹೋಗುತ್ತಿದೆ.   
ಕಾವೇರಿ ನದಿಯ ಪಾತ್ರದಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಸ್ಪಲ್ಪ ಏರಿಕೆಯಾದರೂ ಸಾವಿರಾರು ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಮಾಧವಮಂತ್ರಿ ಅಣೆಕಟ್ಟೆ ಪೂರ್ತಿಯಾಗಿ ನದಿಯ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಲಕಾಡಿನ ಗತವೈಭವದಂತೆ ಈ ಅಣೆಕಟ್ಟೆಯೂ ಗತಿಸಿ ಹೋಗಲಿದೆ. ಏತನ್ಮಧ್ಯೆ, ಸಂಸದ ಆರ್. ಧ್ರುವನಾರಾಯಣ ಅವರು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್ ಅವರ ಜತೆ ಒಡೆದು ಹೋಗಿದ್ದ ಮಾಧವಮಂತ್ರಿ ಅಣೆಕಟ್ಟೆಯನ್ನು ಪರಿಶೀಲಿಸಿದರು. ಅಲ್ಲದೆ, ಜಲಸಂಪನ್ಮೂಲ ಸಚಿವರನ್ನ ಸಂಪರ್ಕಿಸಿ ಅಣೆಕಟ್ಟೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನವಿ ಮಾಡಿದರು.

ಮರಳುಗಾರಿಕೆಯ ಬಳುವಳಿಯಿದು
ಕಾವೇರಿ ನದಿ ಪಾತ್ರದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ಮಾಧವ ಮಂತ್ರಿ ಅಣೆಕಟ್ಟೆ ಬಲಿ ಪಡೆಯುವ ಮೂಲಕ ಮೊದಲ ಬಳುವಳಿಯನ್ನು ನದಿ ಪಾತ್ರದ ಜನರಿಗೆ ನೀಡಿದೆ. ಮಾಧವಮಂತ್ರಿ ಅಣೆಕಟ್ಟೆ ಆಸುಪಾಸು ಸೇರಿದಂತೆ ನದಿ ಹರಿವಿನ ಪಾತ್ರದ ಉದ್ದಕ್ಕೂ ವ್ಯಾಪಕವಾಗಿ ಮರಳು ಗಣಿಗಾರಿಕೆ ನಡೆಸಿದ್ದರಿಂದ ನೀರ ಹರಿವಿನ ಕೊರೆತ ಕಟ್ಟೆಯೊಂದನ್ನು ಕಿತ್ತು ಹಾಕಿದೆ. ಶತಮಾನಗಳ ಇತಿಹಾಸವಿರುವ ಅಣೆಕಟ್ಟೆಗೆ ಹುಚ್ಚು ಹೊಳೆ ಎನ್ನುವಂಥ ಹಲವು ಪ್ರವಾಹಗಳು ಬಂದರೂ ಏನೂ ಆಗಿರಲಿಲ್ಲ. ಆದರೆ, ವ್ಯಾಪಕ ಮರಳು ಗಣಿಗಾರಿಕೆಯಿಂದಾಗಿ ಈಗ ಅಣೆಕಟ್ಟೆ ನಿರ್ನಾಮ ಸ್ಥಿತಿಗೆ ತಲುಪಿದೆ.

ಕಾಡುಗಲ್ಲು ಬಳಸಿ ಕಟ್ಟಿದ್ದರು!
ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ತಲಕಾಡು ಭಾಗದ ಜನರ ಬದುಕನ್ನು ಹಸನು ಮಾಡಲು ಅರಸರು ಕಾವೇರಿ ನದಿಗೆ ಹೆಮ್ಮಿಗೆ ಗ್ರಾಮದಲ್ಲಿ ಈ ಅಣೆಕಟ್ಟೆಯನ್ನು ಕಟ್ಟುವುದಕ್ಕೆ ಕಾರಣವಾದರು. ಈ ಯೋಜನೆಯನ್ನು ಮೈಸೂರು ಸಂಸ್ಥಾನದಲ್ಲಿ ಮಂತ್ರಿಗಳಾಗಿದ್ದ ಮಾಧವಮಂತ್ರಿ ಅವರು ಹೆಚ್ಚಿನ ಆಸಕ್ತಿಯನ್ನು ವಹಿಸಿ, ಕಾಡುಗಲ್ಲುಗಳಿಂದ ನದಿಯ ಹರಿವಿನ ಪಾತ್ರಕ್ಕೆ ತದ್ವಿರುದ್ಧವಾಗಿ ಗಾರೆಯಿಂದ ಕಟ್ಟಿಸಿದ್ದರು. ತಲಕಾಡಿನಿಂದ ಮಡವಾಡಿ, ಮಳವಳ್ಳಿ ತಾಲೂಕಿನ ಬೆಳಕವಾಡಿ ಹೊಸಹಳ್ಳಿವರೆಗೆ ನಾಲೆ ನಿರ್ಮಿಸಿದ್ದಕ್ಕೆ ಅವರ ಹೆಸರನ್ನು ಕಟ್ಟೆ, ನಾಲೆಗೆ ಇಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement