ರೈತ ಪೆರಿಯಸ್ವಾಮಿ ಕಂಡ ಕೃಷಿಭಾಗ್ಯ
ಕ.ಪ್ರ.ವಾರ್ತೆ, ಮೈಸೂರು, ಆ. 9-
ಫೈನಾನ್ಸ್ ನಡೆಸುವುದಕ್ಕಾಗಿ ತಮಿಳುನಾಡಿನಿಂದ ಬಂದ ವ್ಯಕ್ತಿಯೊಬ್ಬರಿಗೆ ಧನಲಕ್ಷ್ಮಿ ಕೈಹಿಡಿಯಲಿಲ್ಲ. ಆದರೆ ಕಳೆದ ಒಂದೂವರೆ ದಶಕಗಳಿಂದ ಧಾನ್ಯಲಕ್ಷ್ಮಿ ಕೈಹಿಡಿದು ಮುನ್ನಡೆಸುತ್ತಿದ್ದಾಳೆ.
ಇದು ನಂಜನಗೂಡು ತಾಲೂಕು ಚಿಕ್ಕಯ್ಯನಛತ್ರ ಹೋಬಳಿ ರಾಂಪುರ ಗ್ರಾಮದ ಪೆರಿಯಸ್ವಾಮಿ ಎಂಬುವರ ಕಥೆ. ಪೆರಿಯಸ್ವಾಮಿ ಮೂಲತಃ ತಮಿಳುನಾಡಿನ ಕರೂರು ಬಳಿಯ ಅಣಪಾಳಿ ಗ್ರಾಮದವರು. 25 ವರ್ಷಗಳ ಹಿಂದೆ ಹಣಕಾಸು ಸಂಸ್ಥೆ ನಡೆಸುವುದಕ್ಕಾಗಿ ನಂಜನಗೂಡಿಗೆ ಬಂದರು. ಆದರೆ ಆ ವ್ಯವಹಾರ ಇವರಿಗೆ ಕೈಗತ್ತಲಿಲ್ಲ. ಇದರಿಂದ ಅವರು ವಿಚಲಿತರಾಗಲಿಲ್ಲ. ಬದಲಿಗೆ ಹುಲ್ಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆ ನಿಂತು, ಪಕ್ಕದ ರಾಂಪುರದಲ್ಲಿ 4 ಎಕರೆ ಜಮೀನು ಖರೀದಿಸಿದರು. ಎರಡು ಕೊಳವೆ ಬಾವಿ ಕೊರೆಸಿದರು. ಪತ್ನಿ ತಮಿಳರಸಿ ಅವರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡರು.
ಮೊದಲು ಎರಡು ಎಕರೆಯಲ್ಲಿ ಕಬ್ಬು, ತಲಾ ಒಂದು ಎಕರೆಯಲ್ಲಿ ಬಾಳೆ ಹಾಗೂ ಅರಿಶಿನ ಬೆಳೆಯುತ್ತಿದ್ದರು. ಕಬ್ಬು ಎಕರೆಗೆ 50 ರಿಂದ 60 ಟನ್ ಇಳುವರಿ ಬರುತ್ತದೆ. ಪ್ರತಿ ಟನ್ ಕಬ್ಬಿಗೆ 2,500 ರು.ಗಳಿಂದ 2,800 ರು.ಗಳವರೆಗೆ ಸಿಗುತ್ತದೆ. ಪ್ರತಿ ಎಕರೆಗೆ 75,000 ರು. ವೆಚ್ಚವಾಗುತ್ತದೆ. ಇಷ್ಟಾದರೂ ಎಕರೆಗೆ 50,000 ಲಾಭ ಸಿಗುತ್ತಿದೆ. ಕಬ್ಬನ್ನು ನಂಜನಗೂಡು ತಾ. ಅಳಗಂಚಿಯಲ್ಲಿರುವ ಬನ್ನಾರಿ ಅಮ್ಮನ್ ಕಾರ್ಖಾನೆಗೆ ಪೂರೈಸುತ್ತಾರೆ.
1 ಎಕರೆ ಅರಿಶಿನದಲ್ಲಿ 20 ರಿಂದ 25 ಕ್ವಿಂಟಲ್ ಇಳುವರಿ ಬರುತ್ತದೆ. ಇವರು ತಮಿಳುನಾಡಿನ ಈರೋಡ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಕ್ವಿಂಟಲ್ಗೆ 6,600 ರು. ಸಿಗುತ್ತಿದೆ. ಅರಿಶಿನದಲ್ಲೂ ಖರ್ಚು ಕಳೆದರೂ ಎಕರೆಗೆ 50,000 ರು. ಆದಾಯ ಸಿಗುತ್ತಿದೆ.
ಬಾಳೆಯಲ್ಲಿ ಹೆಚ್ಚು ಆದಾಯ: ಉದ್ಯೋಗ ಖಾತ್ರಿ ಯೋಜನೆ ಜಾರಿ, ಅನ್ನಭಾಗ್ಯ ಯೋಜನೆಯಿಂದ ತಿಂಗಳಿಗೆ 30 ರು.ಗೆ 30 ಕೆಜಿ ಅಕ್ಕಿ ಸಿಗುತ್ತಿರುವುದರಿಂದ ಈಗ ಹಳ್ಳಿಗಾಡಿನಲ್ಲಿ ಆಳುಗಳ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಈ ಬಾರಿ ಕಬ್ಬನ್ನು ಸ್ವಲ್ಪ ಕಡಿಮೆ ಮಾಡಿ, 2.5 ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಮೊದಲೆಲ್ಲಾ ಏಲಕ್ಕಿ, ಬಾಳೆ ಬೆಳೆಯುತ್ತಿದ್ದರು. ಈಗ ತೋಟಗಾರಿಕೆ ಇಲಾಖೆಯಿಂದ 1,38,655 ರು. ಸಹಾಯಧನ ಪಡೆದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಈ ಬಾರಿ ಪಚ್ಚಬಾಳೆ ಬೆಳೆದಿದ್ದಾರೆ. 1,330 ಗಿಡಗಳಿವೆ. ಒಂದು ಗೊನೆಯಲ್ಲಿ 9 ರಿಂದ 10 ಚಿಪ್ಪುಗಳು ಬಂದಿವೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ. ಕಬ್ಬು, ಅರಿಶಿನಕ್ಕಿಂತಲೂ ಬಾಳೆಯಲ್ಲಿ ಹೆಚ್ಚು ಆದಾಯ ಬರಲಿದೆ.
ಹೆಚ್ಚು ಕೊಟ್ಟಿಗೆ ಗೊಬ್ಬರ: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಲ್ಲಿ ಅಂಗಾಂಶ ಬಾಳೆ ಬೆಳೆಯಲು ತೋಟಗಾರಿಕೆ ಇಲಾಖೆಯು ಎಲ್ಲಾ ರೀತಿಯ ಸಹಾಯಧನ ಮತ್ತು ಸಲಹೆ ನೀಡಿತು. ಶಿವಲಿಂಗಪ್ಪ, ಸಿದ್ದಪ್ಪ ಮೊದಲಾದ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ, ಸೂಕ್ತ ಮಾಗದರ್ಶನ ನೀಡುತ್ತಿದ್ದಾರೆ ಎಂದು ಸ್ಮರಿಸುತ್ತಾರೆ ಪೆರಿಯಸ್ವಾಮಿ. ಜಮೀನಿಗೆ ಕಾಲಕಾಲಕ್ಕೆ ರಾಸಾಯನಿಕ ಗೊಬ್ಬರ ಹಾಕುತ್ತಾರೆ. ಆದರೆ ಆರಂಭದಲ್ಲಿ 10 ಗಾಡಿಗೂ ಹೆಚ್ಚು ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ.
ಒಟ್ಟಾರೆ ಕೃಷಿಯಿಂದ ಖರ್ಚೆಲ್ಲಾ ಕಳೆದು ಪ್ರತಿವರ್ಷ 2 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ. ಕೃಷಿಯಿಂದ ಬಂದ ಆದಾಯದಿಂದಲೇ ಒಬ್ಬನೇ ಮಗ ಅರುಣ್ಮಳಿಯನ್ನು ಎಂ.ಟೆಕ್ ಓದಿಸಿದ್ದಾರೆ. ಆತ ಈಗ ಚೆನ್ನೈನಲ್ಲಿ ಉದ್ಯೋಗದಲ್ಲಿದ್ದಾನೆ. ಇದೀಗ ಹುಲ್ಲಹಳ್ಳಿಯಲ್ಲಿ ನಿವೇಶನ ಖರೀದಿಸಿ, ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕೃಷಿಯಲ್ಲಿ ನಷ್ಟವಾಗುತ್ತೆ ಎಂದು ನಾನಂತೂ ಹೇಳಲ್ಲ. ಅದು ನಾವು ಯಾರ ರೀತಿ ಕೆಲಸ ಮಾಡುತ್ತೇವೆ ಎಂಬುದನ್ನು ಅವಲಂಬಿಸಿದೆ. ಕಷ್ಟಪಟ್ಟು ಕೆಲಸ ಮಾಡಿದರೆ, ಕಾಲಕಾಲಕ್ಕೆ ಮಾಡಬೇಕಾದ ಕೆಲಸಗಳನ್ನು ಮಾಡಿದರೆ ಲಾಭ ಬರುತ್ತೆ. ಕೇವಲ ರಾಸಾಯನಿಕ ಗೊಬ್ಬರ ಹಾಕಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡುವ ಬದಲು ಜಮೀನಿಗೆ ಪ್ರತಿವರ್ಷ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ಆಗ ಮಾತ್ರ ಉತ್ತಮ ಇಳುವರಿ ಬರಲು ಸಾಧ್ಯ.
- ಪೆರಿಯಸ್ವಾಮಿ, ರಾಂಪುರ
- ಅಂಶಿ ಪ್ರಸನ್ನಕುಮಾರ್