'ಸಿಲ್ಕ್' ಎತ್ತಂಗಡಿ ವಿರೋಧಿಸಿ ಚಿತ್ರದ ನಾಯಕ ಪ್ರತಿಭಟನೆ
ಮೈಸೂರು: ಪಾಕಿಸ್ತಾನ ನಟಿ ವೀಣಾ ಮಲ್ಲಿಕ್ ಅಭಿನಯದ ಸಿಲ್ಕ್ ಚಲನಚಿತ್ರವನ್ನು ರಾಜ್ಯದ ಅನೇಕ ಚಿತ್ರಮಂದಿರಗಳಿಂದ ಏಕಾಏಕಿ ಎತ್ತಂಗಡಿ ಮಾಡಿರುವುದನ್ನು ಖಂಡಿಸಿ ಚಿತ್ರದ ನಾಯಕ ನಟ ಅಕ್ಷಯ್ ಹಾಗೂ ಸಹನಟರು ಪ್ರತಿಭಟನೆ ನಡೆಸಿದರು.
ಸಿಲ್ಕ್ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ, ವಿನಾಕಾರಣ ತೆಗೆದು ಹಾಕಿರುವುದರಿಂದ ಅಸಮಾಧಾನಗೊಂಡಿರುವ ಚಿತ್ರದ ನಾಯಕ ನಟ ಅಕ್ಷಯ್ ಶುಕ್ರವಾರ ನಗರದ ಗಾಯತ್ರಿ ಚಿತ್ರಮಂದಿರದ ಎದುರು ಮೌನ ಪ್ರತಿಭಟನೆ ನಡೆಸಿದರು.
ಗಾಯತ್ರಿ ಚಿತ್ರಮಂದಿರದಲ್ಲಿ ಶುಕ್ರವಾರ ಶಾರೂಖ್ ಖಾನ್ ಅಭಿನಯದ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಾಯತ್ರಿ ಚಿತ್ರಮಂದಿರದ ವ್ಯವಸ್ಥಾಪಕರು ಈ ಬಗ್ಗೆ ಪರಿಶೀಲಿಸಿ ಸಿಲ್ಕ್ ಚಲನಚಿತ್ರದ ಪ್ರದರ್ಶನ ಮುಂದುವರಿಸುವುದಾಗಿ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ನಟ ಅಕ್ಷಯ್ ತಮ್ಮ ಸಿಲ್ಕ್ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಶನಿವಾರದಿಂದ ಸಿಲ್ಕ್ ಚಿತ್ರ ಪ್ರದರ್ಶಿಸಲು ಒಪ್ಪಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಕ್ಷಯ್, ಸಿಲ್ಕ್ ಚಿತ್ರದಲ್ಲಿ ಯಾವುದೆ ಅಶ್ಲೀಲತೆ ಇಲ್ಲ. ಆದರೆ ಕರ್ನಾಟಕ ನವ ನಿರ್ಮಾಣ್ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಚಿತ್ರದ ಪೋಸ್ಟರ್ ಪ್ರದರ್ಶಿಸದಂತೆ ಆದೇಶಿಸಿದೆ ಎಂದರು.
ಆದರೆ ಇದೇ ನೆಪ ಮಾಡಿ ಸಿಲ್ಕ್ ಚಿತ್ರ ಪ್ರದರ್ಶನಕ್ಕೆ ತಡೆ ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ. ಇದರಿಂದ ರಾಜ್ಯದ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿಲ್ಕ್ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಹೀಗಾಗಿ ಭೀಮಾಶಂಕರ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಚಿತ್ರಕ್ಕೆ ಆಗಿರುವ ನಷ್ಟ ಭರಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.