ಅಂಕೋಲಾದಲ್ಲೊಬ್ಬ ನಾಯಿ ಭಕ್ಷಕ!
ವಿಲಾಸ ನಾಯಕ
ಅಂಕೋಲಾ: ತಾಲೂಕಿನ ಅಂಕೋಲಾದಲ್ಲಿ ನೂರಾರು ಬೀದಿ ನಾಯಿಗಳು ಇದ್ದಕ್ಕಿದಂತೆ ಕಣ್ಮರೆಯಾಗುತ್ತಿವೆ. ಕಾರಣ ಗೊತ್ತಾ? ಮಾನಸಿಕ ಅಸ್ವಸ್ಥನೊಬ್ಬನ ಪಾಲಿನ ಆಹಾರವಾಗಿವೆ ಈ ಬಡಪಾಯಿ ನಾಯಿಗಳು!
ಹೌದು. ಅಚ್ಚರಿ ಎನಿಸಿದರೂ ನಂಬಲೇಬೇಕು! ಈ ನಾಯಿಗಳನ್ನು ತನ್ನ ನಿತ್ಯದ ಆಹಾರವಾಗಿ ಕಳೆದರಡು ವರ್ಷಗಳಿಂದ ಸೇವಿಸುತ್ತಿರುವ ಮಾನಸಿಕ ಅಸ್ವಸ್ಥ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿದ್ದಾನೆ.
ಬೀದಿ ನಾಯಿಗಳ ಉಪಟಳದಿಂದ ಅಂಕೋಲಾದ ಜನತೆ ಹೈರಾಣಾಗಿ ಹೋಗಿದ್ದರು. ಹತ್ತಾರು ಬಾರಿ ನಾಯಿಗಳ ಅತಿರೇಕಕ್ಕೆ ಕಡಿವಾಣ ಹಾಕುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ ಪಪಂ ವಿವಿಧ ನೆಪವೊಡ್ಡಿ ತಮ್ಮ ಅಸಹಾಯಕತೆ ತೋರ್ಪಡಿಸುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಪಪಂ ಕ್ರಮ ಕೈಗೊಂಡಿರಬೇಕು ಎಂದೇ ನಾಗರಿಕರು ಭಾವಿಸಿದ್ದರು. ಆದರೆ ನಾಯಿಗಳು ಮಾನಸಿಕ ಅಸ್ವಸ್ಥನ ಆಹಾರವಾಗಿ ಭಕ್ಷ್ಯಣೆಗೊಳಗಾಗುತ್ತಿರುವ ಸಂಗತಿ ಕೇಳಿ ಜನತೆಯೂ ಈಗ ದಿಗಿಲುಗೊಂಡಿದ್ದಾರೆ.
ಬೇಯಿಸಿ ತಿನ್ನುವ ಮನುಷ್ಯ: ವಂದಿಗೆ, ಹಾರವಾಡಾ, ಬೊಳೆ, ಹೊಸಗದ್ದೆ ಗ್ರಾಮದ ಅರಣ್ಯದಲ್ಲಿ ಆಗಾಗ ನಾಯಿಗಳ ಅವಶೇಷಗಳು ಕಾಣಸಿಗುತ್ತಿದ್ದವು. ಈ ನಾಯಿಗಳು ಚಿರತೆಗಳ ಆಹಾರವಾಗಿರಬಹುದು ಎಂದೇ ಜನರು ನಂಬಿದ್ದರು. ಆದರೆ ಬಿಹಾರ ರಾಜ್ಯದ ಮುಕಂದರ್ಸಿಂಗ್ ಎಂದು ಹೇಳಿಕೊಳ್ಳುವ ಮಾನಸಿಕ ಅಸ್ವಸ್ಥನೊಬ್ಬ ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಭೀಭತ್ಸವಾಗಿ ಹತ್ಯೆಗೈದು, 4 ದಿನದವರೆಗೆ ಆಹಾರವಾಗಿ ಸೇವಿಸುತ್ತಿರುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ನಾಯಿಯನ್ನು ಸುಲಿದು ಅದರ ಮಾಂಸ ತೆಗೆದು ಯಾವುದೇ ಮಸಾಲೆ ಹಾಕದೇ, ಬೇಯಿಸಿ ತಿನ್ನುತ್ತಿರುವ ಈತನನ್ನು ಹಲವರು ಕಂಡು ವಾಂತಿ ಮಾಡಿಕೊಂಡಿದ್ದಾರೆ. ಈ ಮಾನಸಿಕ ಅಸ್ವಸ್ಥನ ಇನ್ನೊಂದು ವಿಶೇಷತೆ ಎಂದರೇ ಕೆಜಿಗಟ್ಟಲೇ ಉಪ್ಪನ್ನು ಈತ ನಿಮಿಷ ಮಾತ್ರದಲ್ಲೇ ತಿನ್ನುತ್ತಾನೆ. ಭೇಟೆಯಾಡಿದ ಬೀದಿ ನಾಯಿ ಮಾಂಸ ಕೆಡದಂತೆ ಈತ ಉಪ್ಪು ಹಾಕಿ ಸಂರಕ್ಷಿಸಿಡುತ್ತಾನೆ.
ನಾಯಿ ಮಾಂಸವನ್ನು ನಿತ್ಯದ ಆಹಾರವಾಗಿ ಸೇವಿಸುತ್ತಿರುವುದು ಅಮಾನವೀಯ. ಅದೇನೆ ಇದ್ದರೂ ಬೀದಿ ನಾಯಿಗಳ ಕಾಟದಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ರೂರಲ್ ರೋಟರಿ ಖಜಾಂಚಿ ಅನುಪ ನಾರಾಯಣ ನಾಯಕ.
ನಿವಾರಣೆಯಾಯಿತು ಪೊಲೀಸರ ಆತಂಕ
ಅಂಕೋಲಾ ಪೊಲೀಸ್ ವಸತಿಗೃಹದ ಆವರಣದಲ್ಲಿ ಹತ್ತಾರು ಬೀದಿ ನಾಯಿಗಳು ವಾಸವಾಗಿ ಆತಂಕವನ್ನು ಸೃಷ್ಟಿಸಿದ್ದವು. ಆದರೆ ಈ ಮಾನಸಿಕ ಅಸ್ವಸ್ಥನಿಂದ ನಾಯಿಗಳ ಸಂಖ್ಯೆ ಇಳಿಮುಖವಾಗಿ ಪೊಲೀಸರನ್ನು ಆತಂಕದಿಂದ ದೂರ ಮಾಡಿದೆ. ನಾಯಿಗಳು ಅಪಹರಣಗೊಳಗಾಗುತ್ತಿರುವ ಸಂಗತಿಯಿಂದ ನಾಯಿ ಮಾಲೀಕರು ಮನೆಯಿಂದ ನಾಯಿ ಹೊರ ಬಿಡಲು ಹೆದರುತ್ತಿದ್ದಾರೆ.
ಮುಕಂದರ್ ಸಿಂಗ್ ಪ್ರಾಣಿಗಳನ್ನು ತಿನ್ನುತ್ತಿರುವುದು ಆದಿ ಮಾನವನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮೇಲ್ನೊಟಕ್ಕೆ ಈತನಿಗೆ ಯೋಚಿಸುವ ಬುದ್ಧಿಮತ್ತೆ ಹೊಂದಿದವನಂತೆ ಕಾಣುತ್ತಾನೆ. ಈತನಿಗೆ ಪುನರ್ವಸತಿ ಕಲ್ಪಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರುವ ಉದಾತ್ತ ಕಾರ್ಯ ಆಗಬೇಕಿದೆ.
ಟಿ ಡಾ. ಸಂಜು ಟಿ. ನಾಯಕ