ಕಸದ ರಾಶಿ ಮೇಲೆ ತಣ್ಣಗೆ ಕುಳಿತ ನಗರಸಭೆ!
ಎನ್.ನಾಗೇಂದ್ರಸ್ವಾಮಿ
ಕ.ಪ್ರ.ವಾರ್ತೆ ಕೊಳ್ಳೇಗಾಲ ಆ. 11
ನಗರಸಭೆ ವ್ಯಾಪ್ತಿಯ 31 ವಾರ್ಡ್ಗಳಲ್ಲಿ ಕಸದ ರಾಶಿ ಕಣ್ಣಿಗೆ ಕುಕ್ಕುತ್ತಿದ್ದು ನಗರಸಭೆ ವೈಫಲ್ಯತೆ ಎದ್ದು ಕಾಣುತ್ತಿದೆ.
ನಗರಸಭೆ ಅಧಿಕಾರಿಗಳು ಸಹ ಸಿಬ್ಬಂದಿ ಕೊರತೆ ಎಂದು ಸುಮ್ಮನಾಗಿದ್ದು, ಇದರಿಂದ ಸಾರ್ವಜನಿಕರು ಬವಣೆ ಪಡುವಂತಾಗಿದೆ. ಕಸದ ರಾಶಿಯನ್ನು ದನಕರು, ಕೋಳಿ, ಹಂದಿ ನಿತ್ಯ ಚೆಲ್ಲಾಪಿಲ್ಲಿ ಮಾಡುವುದರಿಂದ ಕಸ ರಸ್ತೆಯನ್ನೂ ಗಬ್ಬೆಬ್ಬಿಸುತ್ತಿದೆ.
ಏಲ್ಲೆಲ್ಲಿ ಸಮಸ್ಯೆ?: ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ಗಳಿದ್ದು ನೂರಾರು ಬಡಾವಣೆಗಳನ್ನೊಳಗೊಂಡಿದೆ. ಅದರಲ್ಲೂ ಬಾಪುನಗರ, ಮೋಳೆ, ನಿಂಗಣಾಪುರ, ಶಿರಡಿ ಸಾಯಿಬಾಬಾ ಬಡಾವಣೆ, ಮಹದೇಶ್ವರ ಕಾಲೇಜು ಹಿಂಭಾಗದ ರಸ್ತೆ, ಆನಂದಜ್ಯೋತಿ ಕಾಲೋನಿ, ನಾಯಕರ ಬೀದಿ, ಮಂಜುನಾಥನಗರ, ಆಶ್ರಯ ಬಡಾವಣೆ ಸೇರಿದಂತೆ ಹಲವಡೆ ಬಡಾವಣೆಗಳಲ್ಲಿ ಮೊದಲೇ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಬದಿಯಲ್ಲಿ ನೀರು ಹರಿದು ಸಾಂಕ್ರಾಮಿಕ ರೋಗಕ್ಕೆ ಆಸ್ಪದ ನೀಡಿದಂತಾಗಿದೆ. ಅಲ್ಲದೆ ಮೋಳೆ ಗ್ರಾಮದಲ್ಲಿ ಹಾದು ಹೋಗಿರುವ ಚಾನಲ್ ಸಹ ನಿರ್ವಹಣೆ ಕೊರತೆಯಿಂದ ಸಾಂಕ್ರಾಮಿಕ ರೋಗಕ್ಕೆ ಆಸ್ಪದ ನೀಡುವಂತಿದೆ.
ಇನ್ನು ಗ್ರಾಮದ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಜನರು ರಸ್ತೆ ಬದಿಯೇ ಮಲ-ಮೂತ್ರ ವಿಸರ್ಜಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ನಗರದ ಮುಖ್ಯರಸ್ತೆ ಹಾದು ಹೋಗಿರುವ ಪ್ರವಾಸಿ ಮಂದಿರದ ಬಳಿ ಇರುವ ಚಿನ್ನಯ್ಯನ ಕೆರೆ ಸಹ ನಿರ್ವಹಣೆ ಕೊರತೆ ಇಲ್ಲದೆ ನೀರು ಸಂಗ್ರಹಗೊಂಡಿದ್ದು ರೋಗರುಜಿನಕ್ಕೆ ಆಹ್ವಾನ ನೀಡುತ್ತಿದೆ. ಈ ಕೆರೆಯ ಅತಿಕ್ರಮಣ ತೆರವುಗೊಳಿಸಿ ನಗರಸಭೆ ಸ್ವಚ್ಛತೆಗೆ ಮುಂದಾಗದಿದ್ದರೆ ಒತ್ತುವರಿದಾರರ ಪಾಲಾಗುತ್ತದೆ ಅಷ್ಟೆ.
ಯಾವುದೆ ಬಡಾವಣೆಗೆ ತೆರಳಿದರೂ ಕಸದ ರಾಶಿ, ಗಬ್ಬೆದ್ದು ನಾರುವ ಚರಂಡಿ, ಇಲ್ಲವೆ ಕಸದ ರಾಶಿ ಮುಂದೆ ದನನಕರುಗಳು ಕದಡಿ ಅಶುಚಿತ್ವ ಮೂಡಿಸುತ್ತಿರುವ ದೃಶ್ಯಗಳು ಸರ್ವೇಸಾಮಾನ್ಯವಾಗಿದೆ.
ಪೌರ ಸಿಬ್ಬಂದಿ ಕೊರತೆ: ನಗರಸಭೆ ವ್ಯಾಪ್ತಿಯಲ್ಲಿ 21 ಪೌರ ಸೇವಾ ಸಿಬ್ಬಂದಿ ಕಾಯಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 21 ಮಂದಿಯಿಂದ 31 ವಾರ್ಡ್ ಸ್ವಚ್ಛತೆ ನಿರ್ವಹಣೆ ತುಸು ತ್ರಾಸದ ಕೆಲಸವೇ ಸರಿ. ಹಾಗಾಗಿ ಕಳೆದ ಸಾಲಿನಲ್ಲಿ ನಗರಸಭೆ 39 ಮಂದಿ ತಾತ್ಕಾಲಿಕ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಅರ್ಕೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಮೂಲಕ ನೇಮಿಸಿಕೊಂಡಿತ್ತು. ಈಗ ಗುತ್ತಿಗೆ ಅವಧಿ ಮುಗಿದಿದೆ. ಅಧಿಕಾರಿಗಳು ಗುತ್ತಿಗೆ ಅವಧಿ ಮುಗಿಯುವ ಮುನ್ನ ಬೇರೆ ಸಂಸ್ಥೆಗೆ ಗುತ್ತಿಗೆ ನೀಡಬೇಕಿತ್ತು. ಇಲ್ಲವೆ ಇದೆ ಸಂಸ್ಥೆಯ ಗುತ್ತಿಗೆಯನ್ನು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮುಂದುವರಿಸಬೇಕಿತ್ತು. ಇದ್ಯಾವುದು ಆಗದೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದೆ ಪ್ರಸ್ತುತ ಸಮಸ್ಯೆಗೆ ಮೂಲ ಕಾರಣವಾಗಿದೆ.
ಪ್ರಭಾವಿ ಸದಸ್ಯರದ್ದೆ ಕಾರು-ಬಾರು
ನಗರಸಭೆಗೆ 31 ಸದಸ್ಯರು ನೂತನವಾಗಿ ಚುನಾಯಿತರಾಗಿದ್ದಾರೆ. ಕೆಲವು ಪ್ರಭಾವಿ ಸದಸ್ಯರು ಕೆಲವೇ ವಾರ್ಡ್ಗಳಿಗೆ ಹೆಚ್ಚು ಪೌರಕಾರ್ಮಿಕರನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಒಮ್ಮೊಮ್ಮೆ ಇರುವ ಎಲ್ಲ ಪೌರ ಕಾರ್ಮಿಕರನ್ನು ಸದಸ್ಯರೊಬ್ಬರೆ ತಮ್ಮ ವಾರ್ಡ್ಗಳಲ್ಲಿ ಬಳಸಿಕೊಂಡ ನಿದರ್ಶಗಳಿವೆ. ಅಲ್ಲದೆ ಖಾಸಗಿ ಕೆಲಸಕ್ಕೂ ಬಳಸಿಕೊಂಡಿದ್ದಾರೆ. ಇದರಿಂದ ಒಂದಿಷ್ಟು ವಾರ್ಡ್ಗಳು ಅಪರೂಪಕ್ಕೂ ಸ್ವಚ್ಛತೆಯ ಭಾಗ್ಯ ಪಡೆಯುತ್ತಿಲ್ಲ.
ಅಧಿಕಾರಿಗಳು ಏನಾದರೂ ಮಾಡಿ ಮೊದಲು ಕಸದ ಸಮಸ್ಯೆ ನಿವಾರಿಸಿ. ಇಲ್ಲದ ಪಕ್ಷದಲ್ಲಿ ನಗರ ಪ್ರದೇಶದ ಹಲವು ಬಡಾವಣೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತದೆ. ತಕ್ಷಣ ಪೌರ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು.
- ಶಾಂತರಾಜು, ಬಸ್ತಿಪುರ.
ನಗರಸಭೆ ಆಡಳಿತ ವ್ಯವಸ್ಥೆ ಕೆಟ್ಟಿದೆ. ಹಾಗಾಗಿ ನಗರ ಪ್ರದೇಶದಲ್ಲಿ ಆರೋಗ್ಯಕರ ವಾತಾವರಣ ಇಲ್ಲದಾಗಿದೆ. ಎಲ್ಲೆಂದರಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ತಕ್ಷಣ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.
- ದಶರಥ್, ಜೆಡಿಎಸ್ .
ನಗರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಂದಿಸುವ ಕಾಳಜಿ ಇಲ್ಲ. ನಿರ್ಲಕ್ಷ್ಯ ಬದಿಗೊತ್ತಿ 31 ವಾರ್ಡ್ಗಳತ್ತ ಪ್ರವಾಸ ಕೈಗೊಳ್ಳಿ. ಆಗ ನಿಮಗೂ ಸಮಸ್ಯೆಯ ಅರಿವಾಗುತ್ತದೆ.
- ವರದರಾಜು, ಮುಡಿಗುಂಡಂ.