ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಂಡಾಯಗಾರರಿಗೆ ಜೆಡಿಎಸ್ 'ಕೈ' ಗಾಳ

Rashmi Kasaragodu
Updated On : 10 Aug 2013, 11:37 am

ಎಂ.ಅಫ್ರೋಜ್ ಖಾನ್
ಕ.ಪ್ರ.ವಾರ್ತೆ ಟಿ ಮಂಡ್ಯ ಟಿ ಆ.10
ಜಿಲ್ಲೆಯ ರಾಜಕಾರಣದಲ್ಲಿ ಇದು ಹೊಸತೇನೂ ಅಲ್ಲ. ಒಂದು ಚುನಾವಣೆ ಬಂದಾಗ ಮುನಿಸಿಕೊಳ್ಳುವುದು (ಬಂಡಾಯ) ಮತ್ತೊಂದು ಚುನಾವಣೆಗಳು ಬಂದಾಗ ಒಂದಾಗುವ ಪರ್ವ ರಾಜಕಾರಣಿಗಳ ಜಾಯಮಾನಕ್ಕೆ ಅಂಟಿಕೊಂಡು ಬಂದಿದೆ.
ಮಂಡ್ಯ ಉಪಚುನಾವಣೆಯಲ್ಲಿ ಶತಾಯ, ಗತಾಯ ಗೆಲವು ಸಾಧಿಸಿ ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಬಂಡಾಯಗಾರರಾಗಿ ಹೊರಗೆ ಉಳಿದಿದ್ದ ತಮ್ಮ ಪಕ್ಷದವರನ್ನು ಮತ್ತೆ ಸೆಳೆದುಕೊಳ್ಳಲು ಗಾಳ ಹಾಕುವುದರ ಜೊತೆಗೆ ಜಾತಿ ಆಧಾರಿತ ಸಂಘಟನೆಗಳ ಬೆಂಬಲಕ್ಕೆ ತಂತ್ರ, ಮಂತ್ರಗಳನ್ನು ಲೆಕ್ಕಾಚಾರ ಆರಂಭವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಕೈ ತಪ್ಪಿದ್ದರಿಂದ ಸಿಡಿದೆದ್ದು ಬಂಡಾಯದ ಬಾವುಟ ಹಾರಿಸಿದ್ದ ಪ್ರಭಾವಿಗಳನ್ನು ಓಲೈಸಿ ಪಕ್ಷಕ್ಕೆ ಮರಳಿ ಕರೆ ತರುವ ಪ್ರಯತ್ನಗಳು ಕಾಂಗ್ರೆಸ್- ಜೆಡಿಎಸ್ನಲ್ಲಿ ಒಂದೆಡೆ ಸಾಗಿವೆ. ಮತ್ತೊಂದೆಡೆ ಉಭಯ ಪಕ್ಷಗಳು ಅನ್ಯ ಪಕ್ಷದೊಳಗಿನ ನಾಯಕರನ್ನೇ ಸೆಳೆದು ಶಕ್ತಿ ಕುಂದಿಸಲು ತಂತ್ರ ರೂಪಿಸುತ್ತಿವೆ.
ನಿಗಮ ಮಂಡಳಿಗಳಲ್ಲಿ ಅವಕಾಶ ನೀಡುವ ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಆಶ್ವಾಸನೆಯೊಂದಿಗೆ ಪಕ್ಷ ತೊರೆದವರನ್ನು ಸೆಳೆಯುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದ್ದರೆ, ಜೆಡಿಎಸ್ ಕೂಡ ಪ್ರಭಾವಿಗಳ ಮನವೊಲಿಸುವಲ್ಲಿ ಹಿಂದೆ ಬಿದ್ದಿಲ್ಲ.
ಬಗೆಹರಿಯದ ಮುನಿಸು: ಕಾಂಗ್ರೆಸ್ ಅಭ್ಯರ್ಥಿ ರಮ್ಯ ಒಮ್ಮತ ಅಭ್ಯರ್ಥಿ. ಹೀಗಿದ್ದರೂ ಎಸ್.ಎಂ. ಕೃಷ್ಣ ಮತ್ತು ಅಂಬರೀಷ್ ನಡುವಿನ ಮುನಿಸು ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಗರದ ಹೊರವಲಯದಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆ. ಇಲ್ಲಿ ಕೃಷ್ಣ ಬಣದವರು ಗೈರಾಗಿದ್ದರು.
ಎಸ್.ಎಂ.ಕೃಷ್ಣ ಬಣದಲ್ಲಿ ಗುರುತಿಸಿಕೊಂಡಿರುವ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ರಮ್ಯ ಪರ ಪ್ರಚಾರ ನಡೆಸಲು ಸಿದ್ಧರಾಗಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಸ್ಪೀಕರ್ ಕೃಷ್ಣ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ. ಆದರೆ, ಕೃಷ್ಣ ಅವರೊಂದಿಗೆ ಗುರುತಿಸಿಕೊಂಡಿದ್ದ ಮನ್ಮುಲ್ ಅಧ್ಯಕ್ಷ ಹರೀಶ್ ಹಾಗೂ ತಾಲೂಕು ಪಂಚಾಯ್ತಿ, ಪುರಸಭೆ ಸದಸ್ಯರನ್ನು ಜೆಡಿಎಸ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃಷ್ಣ ಆಪ್ತರು. ಒಂದು ಹಂತದಲ್ಲಿ ಅವರನ್ನು ಕಾಂಗ್ರೆಸ್ಗೆ ಕರೆತಂದು ಟಿಕೆಟ್ ನೀಡುವ ಆಲೋಚನೆಗಳೂ ನಡೆದಿದ್ದವು. ಈಗಲೂ ಕೃಷ್ಣ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರ ಬೆಂಬಲ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಮನವಿ ಮಾಡಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಿದ ಜೆಡಿಎಸ್ ವರಿಷ್ಠರ ಬಗ್ಗೆ ಕಲ್ಪನಾ ಸಿದ್ದರಾಜು ಅವರಿಗೆ ಇನ್ನೂ ಸಾಕಷ್ಟು ಅಸಮಾಧಾನವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಬೆಂಬಲಿಗರು ಕಲ್ಪನಾ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ನ್ನು ಬೆಂಬಲಿಸುವಂತೆ ಕೋರಿದ್ದಾರೆ. ಆದರೆ, ಯಾವುದಕ್ಕೂ ಪ್ರತಿಕ್ರಿಯೆ ನೀಡದ ಕಲ್ಪನಾ ಸಿದ್ದರಾಜು, ವಿದೇಶಾಂಗ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರೊಂದಿಗೆ ಚರ್ಚಿಸಿ ತೀರ್ಮಾನ ಪ್ರಕಟಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಗಮಂಗಲ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಸುರೇಶ್ಗೌಡ, ಎಲ್.ಆರ್. ಶಿವರಾಮೇಗೌಡ ಹಾಗೂ  ಮಳವಳ್ಳಿ ಕ್ಷೇತ್ರಗಳಲ್ಲಿ ಶಾಸಕ ನರೇಂದ್ರಸ್ವಾಮಿ, ಮಾಜಿ ಶಾಸಕಿ ಮಲ್ಲಾಜಮ್ಮ ಅವರು ಭಿನ್ನಮತ ಮರೆತು ನಾಯಕರೊಂದಿಗೆ ಸೇರಿ ರಮ್ಯಾ ಪರವಾಗಿ ಪ್ರಚಾರ ನಡೆಸಲು ತಯಾರಿ ನಡೆಸಿದ್ದಾರೆ.
ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ನಂದಿನಿ ಜಯರಾಂ ಹಾಗೂ ಬಿಜೆಪಿ ಅಭ್ಯರ್ಥಿ ದೊರೆಸ್ವಾಮಿ ನಾಮಪತ್ರ ಹಿಂದಕ್ಕೆ ಪಡೆದಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ನ ನೇರ ಹಣಾಹಣಿಗೆ ವೇದಿಕೆ ಸಿದ್ಧವಾದಂತಾಗಿದೆ. ಸರ್ವೋದಯ ಕರ್ನಾಟಕ ಪಕ್ಷದ ಬೆಂಬಲ ಕಾಂಗ್ರೆಸ್ನ ಶಕ್ತಿ ಇನ್ನಷ್ಟು ವೃದ್ಧಿಯಾಗುವಂತೆ ಮಾಡಿದೆ. ಸಣ್ಣಪುಟ್ಟ ಪಕ್ಷಗಳ ಬೆಂಬಲ, ಬಂಡಾಯಗಾರರ ಮನವೊಲಿಕೆ ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಿ ಆಧಾರಿತ ಸಂಘಟನೆಗಳ ಬೆಂಬಲ ಪಡೆಯಲೂ ಸಹ ಮುಂದಾಗಿವೆ. ಹೀಗಾಗಿ ಒಕ್ಕಲಿಗರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘಟನೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಒಟ್ಟಾರೆ ಉಪಚುನಾವಣೆ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಪತ್ಯ ಸ್ಥಾಪಿಸಲು ಕೈಪಾಳಯದ ನಾಯಕರು ಭಿನ್ನಮತ ಮರೆತು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದರೆ, ಜೆಡಿಎಸ್ ಪಕ್ಷ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement