ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಾದ್ರಾ ಅಕ್ರಮ 3.5 ಲಕ್ಷ ಕೋಟಿ

ಕಳೆದ ಎಂಟು ವರ್ಷಗಳಲ್ಲಿ ಹರ್ಯಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವೆ ನಡೆದ 21,366 ಎಕರೆ ಭೂಒಪ್ಪಂದದ ಒಟ್ಟು...

Mainashree
Updated On : 10 Aug 2013, 11:00 am

ಚಂಡೀಗಡ: ಕಳೆದ ಎಂಟು ವರ್ಷಗಳಲ್ಲಿ ಹರ್ಯಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವೆ ನಡೆದ 21,366 ಎಕರೆ ಭೂಒಪ್ಪಂದದ ಒಟ್ಟು ಮೊತ್ತ 3.5 ಲಕ್ಷ ಕೋಟಿ! ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ. ವಾದ್ರಾ- ಡಿಎಲ್‌ಎಫ್‌ನ ಬಹುಕೋಟಿ  ಭೂಒಪ್ಪಂದವನ್ನು ಅಕ್ರಮವೆಂದು ಕರೆದು ರದ್ದು ಮಾಡಿದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ.
ವಾದ್ರಾ ಭೂ ಹಗರಣಕ್ಕೆ ಸಂಬಂಧಿಸಿ ನೇಮಿಸಲಾದ ತನಿಖಾ ಸಮಿತಿಗೆ ಮೇ 21ರಂದು ಬರೆದಿದ್ದ ಪತ್ರದಲ್ಲಿ ಖೇಮ್ಕಾ ಈ ವಿಚಾರ ತಿಳಿಸಿದ್ದಾರೆ.
ವಾದ್ರಾ ಅವರು ಮಧ್ಯವರ್ತಿಯ ರೀತಿಯಲ್ಲಿ ವ್ಯವಹರಿಸಿ ಭೂ ವ್ಯವಹಾರ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಐದು ಪೈಸೆ ಹಾಕದೆ ಭೂ ವ್ಯವಹಾರದಲ್ಲಿ ಕೋಟ್ಯಂತರ ರುಪಾಯಿ ಜೇಬಿಗಿಳಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಇದಲ್ಲದೆ, ಗುರ್‌ಗಾಂವ್‌ನ ಶಿಕೋಪುರ್ ಗ್ರಾಮದಲ್ಲಿರುವ 3.5 ಎಕರೆ ಭೂಮಿಯ ಮಾರಾಟಕ್ಕೆ ವಾದ್ರಾ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ವಾದ್ರಾ ಭಾರಿ ಲಾಭ ಮಾಡಿಕೊಂಡಿದ್ದಾರೆ ಎಂದು ಖೇಮ್ಕಾ ದೂರಿದ್ದಾರೆ. ಆದರೆ, ತನಿಖಾ ಸಮಿತಿಯು ವಾದ್ರಾ- ಡಿಎಲ್‌ಎಫ್ ಡೀಲ್ ಅನ್ನು ಕಾನೂನು ಬದ್ಧ ಎಂದು ಘೋಷಿಸಿತ್ತು. ಹಗರಣದ ಆರೋಪ ಎದುರಿಸುತ್ತಿದ್ದ ವಾದ್ರಾ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು.

ಖೇಮ್ಕಾ ಪ್ರಕಾರ, ವಾದ್ರಾ ಡೀಲ್‌ಗಳಿಗಾಗಿ ನಿಯಮಾವಳಿಗಳನ್ನು ಉಲ್ಲಂಘಿಸಲು ಹರ್ಯಾಣದ ಟೌನ್ ಮತ್ತು ಕಂಟ್ರಿ ಪ್ಲ್ಯಾನಿಂಗ್(ಡಿಟಿಸಿಪಿ) ಅವಕಾಶ ಮಾಡಿಕೊಟ್ಟಿತು. ಭೂ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ವ್ಯವಹರಿಸಿ ಭಾರಿ ಮೊತ್ತದ ಲಾಭ ಮಾಡಿಕೊಳ್ಳಲು ವಾದ್ರಾಗೆ ಸಹಕಾರ ನೀಡಿತು. ಸೋನಿಯಾ ಅವರ ಅಳಿಯ ಎಂಬ ಕಾರಣಕ್ಕಾಗಿ ಅವರಿಗೆ ಈ ರೀತಿಯ ಅಕ್ರಮಕ್ಕೆ ಅವಕಾಶ ಮಾಡಿಕೊಡಲಾಯಿತು.
ಚೆಕ್ ನೀಡಿಯೇ ಇಲ್ಲ: ಫೆ.12, 2008ರಲ್ಲಿ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿಯು ಶಿಕೋಪುರ್ ಗ್ರಾಮದಲ್ಲಿ ಓಂಕಾರೇಶ್ವರ್ ಪ್ರಾಪರ್ಟೀಸ್‌ನಿಂದ ಭೂಮಿ ಖರೀದಿಸಿದ ದಾಖಲೆ ತೋರಿಸಿದ್ದರು. ಆದರೆ, ಇದಕ್ಕೆ ವಾದ್ರಾ ಕಂಪನಿ ಹಣ ಹಾಕಿಯೇ ಇಲ್ಲ. ಡಿಎಲ್‌ಎಫ್‌ನಿಂದ ಪಡೆದ ಹಣವನ್ನು ಅದು ಓಂಕಾರೇಶ್ವರ್ ಪ್ರಾಪರ್ಟೀಸ್‌ಗೆ ನೀಡಿತ್ತು. ಇಷ್ಟಾದರೂ ವಾದ್ರಾ ಕಂಪನಿಯ ಹಣಕಾಸು ಹಿನ್ನಲೆ ಹಾಗೂ ಮಾರಾಟ ಪತ್ರದ ವಿಶ್ವಾಸಾರ್ಹತೆಯನ್ನು ಪರಿಶೀಲಿಸದೆ ಅಲ್ಲಿ ವಾಣಿಜ್ಯ ಕಾಲೊನಿ ನಿರ್ಮಿಸಲು ಆ ಕಂಪನಿಗೆ ಡಿಟಿಸಿಪಿ ಅನುಮತಿ ನೀಡಿತ್ತು.
ಒಪ್ಪಂದ ಪತ್ರದಲ್ಲಿ ಭೂಮಿ ಖರೀದಿಗೆ ಸಂಬಂಧಿಸಿ 7.5 ಕೋಟಿಯನ್ನು ಕಾರ್ಪೊರೇಷನ್ ಬ್ಯಾಂಕ್‌ನ ಚೆಕ್ ಮೂಲಕ ಪಾವತಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ನಡೆದೇ ಇಲ್ಲ. ಹಾಗಾಗಿ ಈ ಭೂ ವ್ಯವಹಾರವೇ ಅಕ್ರಮ ಎಂದು ಖೇಮ್ಕಾ ಆರೋಪಿಸಿದ್ದಾರೆ.

ಬಿಜೆಪಿ ಸಂಚು
ರಾಬರ್ಟ್ ವಾದ್ರಾ ಭೂ ಅಕ್ರಮ ಬಿಜೆಪಿಯ ಸೃಷ್ಟಿ ಎಂದು ಕಾಂಗ್ರೆಸ್ ಆರೋಪಿಸಿದೆ. ಐಎಎಸ್ ಅಧಿಕಾರಿ ಖೇಮ್ಕಾ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮೀಮ್ ಅಫ್ಜಲ್ ಆರೋಪಿಸಿದ್ದಾರೆ. ಈ ಮೂಲಕ ದುರ್ಗಾಶಕ್ತಿ ಹಾಗೂ ಖೇಮ್ಕಾ ಅವರ ವಿವಾದದ ಮಧ್ಯೆ ಸಾಮ್ಯತೆ ಕಲ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement