ಕಬ್ಬು, ಬಾಳೆ ವೈವಿಧ್ಯ ಬೆಳೆ; ಕೃಷಿಕನ ಮೊಗದಲ್ಲಿ ಕಳೆ
ಮೈಸೂರು: ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ, ಇನ್ನೊಂದೆಡೆ ಕೂಲಿಯಾಳುಗಳ ಕೊರತೆ, ಬಿತ್ತನೆಬೀಜ, ರಸಗೊಬ್ಬರಗಳ ಬೆಲೆ ಏರಿಕೆ, ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ರೈತರಿಗೆ ವ್ಯವಸಾಯ ಸಾಕು ಎನಿಸುತ್ತಿದ್ದರೆ ಬೇರೆ ಬೇರೆ ಕ್ಷೇತ್ರದಲ್ಲಿರುವ ಸಾಕಷ್ಟು ಮಂದಿ ಸದ್ದಿಲ್ಲದೆ ಮೈಸೂರು ಸುತ್ತಮುತ್ತ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ವೈವಿಧ್ಯಮಯ ಕ್ಷೇತ್ರದ ಮಂದಿ: ವೈದ್ಯ, ಸಾಹಿತಿ, ಉದ್ಯಮಿ, ಪ್ರಾಧ್ಯಾಪಕ, ಎಂಜಿನಿಯರ್, ಗುತ್ತಿಗೆದಾರ ಹೀಗೆ ಹತ್ತು ಹಲವಾರು ವೃತ್ತಿ ವರ್ಗದವರು ಸೇರಿದ್ದಾರೆ. ಜೆ.ಪಿ.ನಗರಕ್ಕೆ ಹೊಂದಿಕೊಂಡಂತಿರುವ ಮೈಸೂರು ತಾಲೂಕು ದಡದಹಳ್ಳಿಯಲ್ಲಿ ಪತ್ರಕರ್ತ ಮಳಲಿ ನಟರಾಜ್ಕುಮಾರ್ ತಮ್ಮ 8 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಮುಸುಕಿನ ಜೋಳದ ಜೊತೆಗೆ ವೈವಿಧ್ಯಮ ಬೆಳೆಗಳನ್ನು ಬೆಳೆದು, ವಾರ್ಷಿಕ 2 ರಿಂದ 3 ಲಕ್ಷ ರು. ಲಾಭ ಗಳಿಸುತ್ತಿದ್ದಾರೆ.
ಶಿಸ್ತಾಗಿ ತಲೆ ಎತ್ತಿವೆ ಮರಗಳು: 1996 ರಲ್ಲಿ ಅವರು ಈ ಜಮೀನು ಖರೀದಿಸಿದ್ದು, 2000 ತೇಗ, 280 ಮಾವು, 80 ತೆಂಗು, 200 ಅಡಕೆ, 150 ಹೆಬ್ಬೇವು ಮರಗಳು ಜಮೀನಿನ ಬದುಗಳ ಮೇಲೆ ಶಿಸ್ತಾಗಿ ಸಾಲುಗಳಲ್ಲಿ ತಲೆ ಎತ್ತಿವೆ. ಕಬ್ಬಿನ ಮಧ್ಯ 100 ಸಪೋಟ ಗಿಡಗಳನ್ನು ಬೆಳೆಸಿದ್ದಾರೆ. ಜಮೀನಿನ ಬದುಗಳಲ್ಲಿ ಮೂಸಂಬಿ, ಕಿತ್ತಳೆ, ಹಿರಳಿಕಾಯಿ, ದಾಳಿಂಬೆ, ನಿಂಬೆ ಗಿಡಗಳನ್ನು ಬೆಳೆಸಿದ್ದಾರೆ.
ವರುಣ ಉಪ ಕಾಲುವೆಯ ಕರುಣೆ: 2 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಇವರ ಜಮೀನಿನ ನಡುವೆಯೇ ವರುಣ ಉಪ ಕಾಲುವೆ ಹಾದು ಹೋಗಿವೆ. ನಾಲೆಯಲ್ಲಿ ನೀರು ಬಿಟ್ಟಾಗ ಕಬ್ಬಿಗೆ ನಾಲೆಯಿಂದ, ಉಳಿದ ಸಮಯದಲ್ಲಿ ಕೊಳವೆ ಬಾವಿಯಿಂದ ನೀರು ಪೂರೈಸುತ್ತಾರೆ. ನಾಲೆಯ ನೀರಿನಿಂದ ಕಬ್ಬಿಗೆ ಶೀತಾಂಶ ಉಂಟಾಗಬಾರದು ಎಂಬ ಕಾರಣಕ್ಕಾಗಿ ಪಕ್ಕದಲ್ಲಿ ಬಸಿಗಾಲುವೆ ನಿರ್ಮಿಸಿದ್ದಾರೆ. ಜಮೀನು ಉಸ್ತುವಾಗಿಗೆ ಗುಂಡ್ಲುಪೇಟೆ ಕಡೆಯ ಸುಬ್ಬು ಹಾಗೂ ಆತನ ಪತ್ನಿ ಮಣಿ ಜಮೀನಿನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಉಳಿದ ಸಮಯದಲ್ಲಿ ನಾಲ್ಕಾರು ಆಳುಗಳು ಬಂದು ಕೆಲಸ ಮಾಡುತ್ತಾರೆ.
ತುಂತುರು ನೀರಾವರಿ ಪದ್ಧತಿ: ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸಮೀಪದಲ್ಲಿ ಕುರುಚಲು ಕಾಡು ಇರುವುದರಿಂದ ಚಿರತೆ ಹಾಗೂ ಕಾಡು ಹಂದಿಗಳ ಕಾಟ. ಇದರ ತಡೆಗೆ ಜಮೀನಿನ ಸುತ್ತ ಸೋಲಾರ್ ತಂತಿ ಅಳವಡಿಸಿದ್ದಾರೆ. ಯಾವುದೇ ಬೆಳೆ ಹಾಕುವ ಮುನ್ನಾ ಕೊಟ್ಟಿಗೆ ಗೊಬ್ಬರ, ಕೆರೆ ಗೋಡು (ಮಣ್ಣು) ಹಾಕಿಸುತ್ತಾರೆ. ನಂತರ ಬೆಳೆಗೆ ತಕ್ಕಂತೆ ರಾಸಾಯನಿಕ ಗೊಬ್ಬರ, ಕ್ರಿಮಿ ಹಾಗೂ ಕೀಟನಾಶಕ ಬಳಸುತ್ತಾರೆ.
ಕೈ ಇಟ್ಟಲೆಲ್ಲಾ ಲಾಭ: ಏಲಕ್ಕಿ ಬಾಳೆ ಬೆಳೆದಾಗ ಮೊದಲ ಬೆಳೆಯಲ್ಲಿ ಖರ್ಚು ಕಳೆದು ರು. 3.50 ಲಕ್ಷ ಎರಡನೇ ಬೆಳೆಯಲ್ಲಿ 2.15 ಲಕ್ಷ ರು. ಬಂದಿದೆ. ಈಗ ಬಾಳೆ ತೆಗೆದು ಮುಸುಕಿನ ಜೋಳ ಹಾಕಿದ್ದು, ಇದು ಮೂರು ತಿಂಗಳ ಬೆಳೆ. ಖರ್ಚು ಕಳೆದು ರು. 50,000 ಸಿಗಲಿದೆ.
ಕಬ್ಬು ಎಕರೆಗೆ 68 ರಿಂದ 70 ಟನ್ ಇಳುವರಿ ಬರುತ್ತಿದ್ದು, ನಂಜನಗೂಡು ತಾಲೂಕು ಅಳಗಂಚಿಯ ಬನ್ನಾರಿ ಅಮ್ಮನ್ ಸಕ್ಕೆರೆ ಕಾರ್ಖಾನೆಗ ಪೂರೈಸುತ್ತಾರೆ. ಕಳೆದ ವರ್ಷ ಸುಮಾರು ರು. 70,000 ವೆಚ್ಚವಾಗಿತ್ತು. ರು. 1.85 ಲಕ್ಷ ಆದಾಯ ಬಂದಿತ್ತು ಎನ್ನುತ್ತಾರೆ ರೈತ ಮಳಲಿ ನಟರಾಜ್ಕುಮಾರ್.
ವ್ಯವಸ್ಥಿತ ಕೃಷಿಯಲ್ಲಿ ನಷ್ಟವಿಲ್ಲ
ವ್ಯವಸ್ಥಿತವಾಗಿ ಕೃಷಿ ಮಾಡಿದರೆ ನಷ್ಟವಾಗುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನಾನು ಜಮೀನಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡುತ್ತೇನೆ. ಉಳಿದ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಿಸುತ್ತೇನೆ. ಪರಿಣಾಮ ಲಾಭ ಬರುತ್ತಿದೆ.
- ಮಳಲಿ ನಟರಾಜ್ ಕುಮಾರ್, ದಡದಹಳ್ಳಿ
- ಅಂಶಿ ಪ್ರಸನ್ನಕುಮಾರ್