ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಿರುದ್ಯೋಗಿಗಳಿಗೆ ಎಲ್ಲಿದೆ ಉದ್ಯೋಗ ಭಾಗ್ಯ...

Mainashree
Updated On : 12 Aug 2013, 12:29 pm

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಉದ್ಯೋಗ ಮೇಳಗಳಿಗೆ ಲೆಕ್ಕವೇ ಇಲ್ಲ. ಆದರೆ, ದುಡಿಯುವ ಕೈಗಳಿಗೆ ಕೆಲಸ ಮಾತ್ರ ಸಿಗುತ್ತಿಲ್ಲ.
ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಬಗ್ಗೆ ತೋರಿಸುವ ಆಸಕ್ತಿಯನ್ನು ಸರ್ಕಾರ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವತ್ತ ತೋರಿಸುತ್ತಿಲ್ಲ. ಇನ್ನು ಬಂಡವಾಳ ಹೂಡಿಕೆ ಸಮಾವೇಶಗಳಿಂದಲೂ ನಿರುದ್ಯೋಗಿಗಳಿಗೆ ಹೇಳಿಕೊಳ್ಳುವಂತಹ ಅನುಕೂಲವೂ ಆಗುತ್ತಿಲ್ಲ.
ಪ್ರತಿ ವರ್ಷ ಪಿಯುಸಿ, ಪದವಿ ಹಾಗೂ ಎಂಜಿನಿಯರಿಂಗ್ ಕೋರ್ಸ್ ಮುಗಿಸಿ ಉದ್ಯೋಗಕ್ಕಾಗಿ ಸುಮಾರು 10 ಲಕ್ಷ ಮಂದಿ ಸಿದ್ಧವಾಗುತ್ತಿದ್ದಾರೆ. ಇವರಲ್ಲಿ ಬರೀ ಐಟಿಐ ಮುಗಿಸಿ ಹೊರ ಬರುವವರೇ 70 ಸಾವಿರ ಇದ್ದಾರೆ. ಇವರಿಗಾಗಿ ಸರ್ಕಾರ ಯಾವುದೇ ಯೋಜನೆಗಳನ್ನೂ ರೂಪಿಸಿದಂತಿಲ್ಲ.
ಕಾರ್ಮಿಕ ಇಲಾಖೆಯ ಉದ್ಯೋಗ ಮತ್ತು ತರಬೇತಿ ವಿಭಾಗ ಕೆಲವೊಮ್ಮೆ ಉದ್ಯೋಗ ಮೇಳ ನಡೆಸಿ ನಿರುದ್ಯೋಗಿಗಳಿಗೆ ಕೆಲಸ ಸಿಗುವಂತೆ ವೇದಿಕೆ ಕಲ್ಪಿಸುತ್ತದೆ. ಆದರೆ ಈ ಮೇಳಗಳಲ್ಲಿ ಕಂಪನಿಗಳು ಈಗಷ್ಟೇ ತೇರ್ಗಡೆಯಾದ ಹಾಗೂ ರ್ಯಾಂಕ್ ಪಡೆದ ಅಭ್ಯರ್ಥಿಗಳನ್ನೇ ಕೇಳುತ್ತವೆ.
ಇನ್ನು ಕೇಂದ್ರ ಸರ್ಕಾರ ಪ್ರತಿವರ್ಷ ಕನಿಷ್ಠ 6.1ಲಕ್ಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಸಿಗುವಂತೆ ಮಾಡಬೇಕೆಂದು ಸೂಚಿಸಿ ವರ್ಷಗಳೇ ಆಗಿದೆ. ಆ ನಿಟ್ಟಿನಲ್ಲಿ ಯಾವ ಕಾರ್ಯಕ್ರಮವೂ ನಡೆಯುತ್ತಿಲ್ಲ.
ಇನ್ನು ಸರ್ಕಾರಿ ಉದ್ಯೋಗ ಕೊಡಿಸುವ ಉದ್ಯೋಗ ವಿನಿಮಯ ಕೇಂದ್ರಗಳ ಸದ್ದಡಗಿದೆ. ಈ ಕೇಂದ್ರಗಳು ಸರ್ಕಾರಿ ನೌಕರಿ ಬಗ್ಗೆ ಕಾಲಕಾಲಕ್ಕೆ ಜಾಹೀರಾತು ನೀಡದೆ ನಿರುದ್ಯೋಗಿಗಳಿಗೆ ಇವುಗಳ ಅಸ್ತಿತ್ವದ ಬಗ್ಗೆಯೇ ತಿಳಿಯುತ್ತಿಲ್ಲ. ಹೀಗಾಗಿ ಯುವ ಕೈಗಳು ದುಡಿಮೆ ಇಲ್ಲದೆ ಉದ್ಯೋಗಕ್ಕಾಗಿ ಪಟ್ಟಣಗಳತ್ತ ಗುಳೆ ಹೋಗುವ ಕಾಲ ಸನ್ನಿಹಿತವಾಗಲಿದೆ ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು.

ಇವರಿಗೆ ಎಲ್ಲಿದೆ ಕೆಲಸ?: ಅಸೋಚಾಮ್ (ಕೈಗಾರಿಕಾ ಮತ್ತು ವಾಣಿಜ್ಯ ವೇದಿಕೆಗಳ ಸಂಘ) ಮಾಹಿತಿ ಪ್ರಕಾರ, ಔದ್ಯೋಗಿಕ ಕ್ಷೇತ್ರದಲ್ಲಿ ಶೇ.60ರಷ್ಟು ಜನರಿಗೆ ಉದ್ಯೋಗ ನೀಡುವುದು ಕೈಗಾರಿಕೆಗಳು. ಅದರಲ್ಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು. ಆದರೆ, ರಾಜ್ಯ ಸರ್ಕಾರ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನದ ಪ್ರಮಾಣ ಕಡಿಮೆ ಮಾಡಿದೆ.

ನೆಲಕಚ್ಚಿದ ಜಿಮ್ ಐಡಿಯಾ:
ಇನ್ನು ಬೃಹತ್ ಕೈಗಾರಿಕೆಗಳ ಬಗ್ಗೆ ಹೇಳುವಂತೆಯೇ ಇಲ್ಲ. ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶಗಳ (ಜಿಮ್) ಒಪ್ಪಂದದ ಯೋಜನೆಗಳು ನೆಲಕಚ್ಚಿದ್ದರಿಂದ ಉದ್ಯೋಗ ಸೃಷ್ಟಿ ನಾಶವಾಯಿತು.
2010ರಲ್ಲಿ ನಡೆದ ಸಮಾವೇಶದಲ್ಲಿ 3.92 ಲಕ್ಷ ಕೋಟಿ ಹೂಡಿಕೆಯಾಗಿ (ಕಬ್ಬಿಣ, ಉಕ್ಕು ಸಿಮೆಂಟ್ ಕಾರ್ಖಾನೆಗಳಿಗೆ) 7.3ಲಕ್ಷ ಜನರಿಗೆ ಉದ್ಯೋಗ ಸಿಗಬಹದೆಂಬ ಕನಸಿತ್ತು. ಅದು ಹುಸಿ ಆಯಿತು.
ಇದಕ್ಕೆ ಕಾರಣ ಗಣಿಗಾರಿಕೆ ನಿಷೇಧ, ಇದೇ ರೀತಿ 2012ರಲ್ಲಿ ನಡೆದ ಸಮಾವೇಶದಲ್ಲಿ  7.20 ಲಕ್ಷ ಕೋಟಿ ಹೂಡಿಕೆಯಾಗಿ 2.5ಲಕ್ಷ ಮಂದಿಗೆ ಉದ್ಯೋಗ ಲಭಿಸುವ ಅವಕಾಶವಿತ್ತು. ಆ ಆಸೆಯೂ ಕೈಗೂಡಲಿಲ್ಲ ಎಂದು ಅಸೋಚಾಮ್ ಸಹ ಅಧ್ಯಕ್ಷ ಜೆ.ಕ್ರಾಸ್ಟಾ ಬೇಸರ ವ್ಯಕ್ತಪಡಿಸಿದ್ದಾರೆ.

ಟಾಟಾ ಹೇಳಿದ ಸರ್ಕಾರ: ಇನ್ನು ಹೂಡಿಕೆದಾರರ 2ನೇ ಸಮಾವೇಶ ವೇಳೆ ಒಪ್ಪಂದ ಮಾಡಿಕೊಂಡಿದ್ದ ಬೃಹತ್ ಕಂಪನಿಗಳಿಗೆ ರಾಜ್ಯ ಸರ್ಕಾರ ಟಾಟಾ ಹೇಳಿದೆ.
ಅಂದರೆ, ಮಿತ್ತಲ್, ರಿಲಯನ್ಸ್, ಎಲ್ ಆ್ಯಂಡ್ ಟಿ ಹಾಗೂ ಮಹೇಂದ್ರದಂಥ ಮಹಾನ್ ಕಂಪನಿಗಳು ಹೂಡಿಕೆ ಮಾಡಿದ ಅನೇಕ ಯೋಜನೆಗಳಿಗೆ ಪತ್ರ ವ್ಯವಹಾರ ಮುಗಿದಿತ್ತು. ನಂತರ ಅವುಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮತಿ ನೀಡುವುದು ಬಾಕಿ ಇತ್ತು.
ಇದಕ್ಕಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆಯೂ ನಿಗದಿಯಾಗಿತ್ತು. ಆದರೆ, ಇವೆಲ್ಲಾ ಹಿಂದಿನ ಸರ್ಕಾರದ ಅವಧಿಯ ಯೋಜನೆಗಳು ಎನ್ನುವ ಕಾರಣಕ್ಕೆ ಉನ್ನತ ಮಟ್ಟದ ಸಭೆಗೆ ಮುಖ್ಯಮಂತ್ರಿ ಅವರೇ ಬರಲಿಲ್ಲ. ಹೀಗಾಗಿ ಬೃಹತ್ ಕಂಪನಿಗಳ ಉದ್ಯಮಪತಿಗಳು ಸಂಜೆ ವರೆಗೂ ಕಾದು ಹಿಂತಿರುಗಬೇಕಾಯಿತು.

ನಮ್ಮದು ಕಂಪನಿಗಳಿಗೆ ಭೂಮಿ ಕೊಡಿಸುವುದು ಆ ಮೂಲಕ ಕಂಪನಿಗಳು ಯೋಜನೆ ಆರಂಭಿಸಿ ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದಷ್ಟೇ ಕೆಲಸ. ಆದರೆ, ಈ ವರ್ಷ ಎಷ್ಟು ಕಂಪನಿಗಳು ಬರುತ್ತವೆ. ಎಷ್ಟು ಉದ್ಯೋಗ ಸೃಷ್ಟಿಯಾಗುತ್ತವೆ ಎನ್ನುವ ಬಗ್ಗೆ ನಮಗೆ ಅರಿವಿಲ್ಲ.
- ಕೆ.ರಘುರಾಮ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ

ಸ್ಥಳೀಯ ಕೈಗಾರಿಕೆಗಳು ಮತ್ತು ಸಂಸ್ಥೆಗಳಿಗೆ ಪೂರಕವಾದ ನೌಕರರು ಸಿಗುವಂತೆ ತರಬೇತಿ ನೀಡಿ ಉದ್ಯೋಗ ಸಿಗುವಂತೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ. ಅಲ್ಲದೆ ಅಭ್ಯರ್ಥಿಯು ಉದ್ಯೋಗ ಹುಡುಕುವುದಕ್ಕಿಂತ ಸ್ವಯಂ ಉದ್ಯೋಗಿಯಾಗಿ ಬೇರೆಯವರಿಗೂ ಕೆಲಸ ಕೊಡುವಂತೆ ಮಾಡುವ ಬಗ್ಗೆಯೂ ಚಿಂತನೆ ಇದೆ.
- ಸಾಲಿಯಾನ,  ಉದ್ಯೋಗ ಮತ್ತು ತರಬೇತಿ ಇಲಾಖೆ ಕಾರ್ಯಪಾಲಕ ನಿರ್ದೇಶಕ

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement