ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪದವಿ ಫಲಿತಾಂಶ ತಂದಿತ್ತ ಪೇಚಾಟ

Rashmi Kasaragodu
Updated On : 12 Aug 2013, 12:24 pm

ಕ.ಪ್ರ.ವಾರ್ತೆ, ದೊಡ್ಡಬಳ್ಳಾಪುರ, ಆ.11-
ಸದಾ ಗೊಂದಲಗಳು ಮತ್ತು ವಿವಾದಗಳಿಂದಲೇ ಹೆಸರು ಮಾಡುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯ ಈಗ ಮತ್ತೆ ಸುದ್ದಿಯಲ್ಲಿದೆ.
ಕಳೆದ ಮೇ ತಿಂಗಳಲ್ಲಿ ನಡೆದ ಪದವಿ ಪರೀಕ್ಷೆಗಳ ಅಂತಿಮ ಸೆಮಿಸ್ಟರ್ಗಳ ಫಲಿತಾಂಶ ಈಗ ಪ್ರಕಟವಾಗಿದ್ದು, ಫಲಿತಾಂಶ ಪಟ್ಟಿಯಲ್ಲಿ ಅನೇಕ ಲೋಪಗಳು ಎದ್ದು ಕಾಣುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪರೀಕ್ಷೆಗೆ ಹಾಜರು, ಫಲಿತಾಂಶದಲ್ಲಿ ಗೈರು: ಈಗ ಆಗಿರೋದಿಷ್ಟು. ಮೇ ತಿಂಗಳಲ್ಲಿ ನಡೆದ ಪದವಿ ಪರೀಕ್ಷೆಗಳ ಫಲಿತಾಂಶ ಕಳೆದ 10-12 ದಿನಗಳ ಹಿಂದೆಯಷ್ಟೇ ಪ್ರಕಟಗೊಂಡಿದೆ. ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ದೊಡ್ಡ ಶಾಕ್ ಕೊಟ್ಟಿದೆ. ಬಹುನಿರೀಕ್ಷೆಗಳನ್ನು ಕಟ್ಟಿಕೊಂಡು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ಕೆಲ ವಿಷಯಗಳಲ್ಲಿ ಗೈರು ಹಾಜರಿ ಎಂದು ಫಲಿತಾಂಶ ಪಟ್ಟಿಯಲ್ಲಿ ಪ್ರಕಟವಾಗಿದೆ.
ಅಂದ ಹಾಗೇ ಈ ಗೊಂದಲ ಕೆಲ ಸಂದರ್ಭಗಳಲ್ಲಿ ಒಬ್ಬಿಬ್ಬ ವಿದ್ಯಾರ್ಥಿಗಳ ಫಲಿತಾಂಶಗಳಿಗೆ ಆಗುತ್ತಿತ್ತು. ಅದು ಸಹಜವೂ ಕೂಡ. ಅದನ್ನು ವಿಶ್ವವಿದ್ಯಾಲಯ ತದ ನಂತರ ಪರಿಶೀಲಿಸಿ ಸರಿಪಡಿಸಿರುವ ಉದಾಹರಣೆಗಳೂ ಇವೆ.
ಆದರೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್ ಬಿಎ ಐಚ್ಛಿಕ ಕನ್ನಡ ವಿಭಾಗದಲ್ಲಿ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ 26 ಮಂದಿಯೂ ಈ ವಿಷಯದಲ್ಲಿ ಗೈರು ಹಾಜರು ಎಂದು ಫಲಿತಾಂಶ ಬಂದಿದೆ. ಇದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಕುರಿತು ವಿಶ್ವವಿದ್ಯಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ವಿವಿ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನತೆ ತೋರುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ನೇರ ಆರೋಪ.
ಈ ವಿದ್ಯಾರ್ಥಿಗಳಿಗೆ ಉಳಿದ 5 ವಿಷಯಗಳ ಫಲಿತಾಂಶ ನೀಡಲಾಗಿದೆ. ಒಂದು ವಿಷಯಕ್ಕೆ ಗೈರು ಹಾಜರಿ ಎಂದು ನಮೂದಾಗಿರುವುದರಿಂದ ಉತ್ತೀರ್ಣ-ಅನುತ್ತೀರ್ಣದ ಮಾಹಿತಿ ಲಭ್ಯವಾಗಿಲ್ಲ. ಕಳೆದ 5 ಸೆಮಿಸ್ಟರ್ಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಸ್ನಾತಕೋತ್ತರ ಪದವಿಗೆ ಹೋಗಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿ ಕಟ್ಟಿಕೊಂಡಿದ್ದ ಈ ವಿದ್ಯಾರ್ಥಿಗಳ ಕನಸು ಡೋಲಾಯಮಾನವಾಗಿದೆ. ತಮ್ಮದಲ್ಲದ ತಪ್ಪಿಗಾಗಿ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಈ ಲೋಪ ಸರಿ ಮಾಡಬೇಕಾದ ಅಧಿಕಾರಿಗಳು 10 ದಿನ ಕಳೆದರೂ ತಲೆ ಕೆಡಿಸಿಕೊಂಡಿಲ್ಲ.

13ಕ್ಕೆ ಕೊನೆ ದಿನ: ಇದು ಭವಿಷ್ಯದ ಪ್ರಶ್ನೆ. ಬೆಂಗಳೂರು ವಿಶ್ವ ವಿದ್ಯಾಲಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಕರೆದಿದೆ. ಅರ್ಜಿ ಸಲ್ಲಿಸಲು ಆ.10ರ ಶನಿವಾರ ಕೊನೆಯ ದಿನವಾಗಿತ್ತು. ದಂಡ ಸಹಿತವಾಗಿ ಅರ್ಜಿ ಸಲ್ಲಿಸಲು ಆ.13ರ ಮಂಗಳವಾರ ಕೊನೆಯ ದಿನವಾಗಿದೆ. ಹೀಗಿರುವಾಗ ಫಲಿತಾಂಶ ಗೊಂದಲ ಬಗೆಹರಿಯದೆ ಈ ವಿದ್ಯಾರ್ಥಿಗಳು ಅರ್ಜಿ ಹಾಕುವಂತಿಲ್ಲ. ವಿಶ್ವ ವಿದ್ಯಾಲಯದ ತಪ್ಪಿಗಾಗಿ ಈ ವಿದ್ಯಾರ್ಥಿಗಳ 1 ವರ್ಷದ ಓದು ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಕೂಡಲೇ ವಿವಿ ಎಚ್ಚೆತ್ತುಕೊಂಡು ಲೋಪ ಸರಿಪಡಿಸಬೇಕು. ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಬೇಕು ಎಂಬುದು ವಿದ್ಯಾರ್ಥಿಗಳ ವಾದ.

ಆಂತರಿಕ ಅಂಕಗಳೇ ಮಾಯ: ಇನ್ನು ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ಸಮಾಜಶಾಸ್ತ್ರ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿಯಲ್ಲಿ ಆಂತರಿಕ ಅಂಕಗಳು ಮಾಯವಾಗಿವೆ. ಕಾಲೇಜಿನಿಂದ ಇಂಟರ್ನಲ್ ಅಂಕಗಳ ಪಟ್ಟಿಯನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದರೂ ಫಲಿತಾಂಶದಲ್ಲಿ ಕೆಲ ವಿದ್ಯಾರ್ಥಿಗಳ ಆಂತರಿಕ ಅಂಕ ಪ್ರಕಟಗೊಂಡಿಲ್ಲ. ಈ ಬಗ್ಗೆ ಕೂಡ ವಿವಿ ಗಮನಕ್ಕೆ ಬಂದರೂ ತಲೆಕೆಡಿಸಿಕೊಂಡಿಲ್ಲ. ಕೂಡಲೇ ವಿವಿ ಲೋಪಗಳನ್ನು ಸರಿಪಡಿಸಬೇಕು. ತಪ್ಪಿದಲ್ಲಿ ವಿವಿ ವಿರುದ್ಧ ಹೋರಾಟ ರೂಪಿಸಬೇಕಾದೀತು ಎಂದು ಕೆಲ ಸಂಘಟನೆಗಳು ಎಚ್ಚರಿಸಿವೆ.

- ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement