ಮಳೆ ಪಾಲಾಯ್ತು ಬೆಳೆ
ಬಿಡುವಿಲ್ಲದ ವರ್ಷಧಾರೆಯಿಂದಾಗಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ಅಕ್ಷರಶಃ ಮಳೆನಾಡಾಗಿ ಪರಿವರ್ತನೆ ಆಗಿವೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.11-
ಬಿಡುವಿಲ್ಲದ ವರ್ಷಧಾರೆಯಿಂದಾಗಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ಅಕ್ಷರಶಃ ಮಳೆನಾಡಾಗಿ ಪರಿವರ್ತನೆ ಆಗಿವೆ.
ವಾಡಿಕೆ ಪ್ರಕಾರ ಇಡೀ ಮುಂಗಾರಿನಲ್ಲಿ ಅಂದರೆ ನಾಲ್ಕು ತಿಂಗಳ ಅವಧಿಯಲ್ಲಿ ಸುರಿಯಬೇಕಿದ್ದ ಮಳೆ ಕೇವಲ ಎರಡು ತಿಂಗಳಲ್ಲಿ ಸುರಿದು ಜನರನ್ನು ಕಂಗಾಲು ಮಾಡಿದೆ.
ಎರಡೂವರೆ ತಿಂಗಳಿಂದ ಮಲೆನಾಡಿನ ಗ್ರಾಮೀಣ ಪ್ರದೇಶಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ಕಟಾವು ಹಂತಕ್ಕೆ ಬಂದಿರುವ ತೋಟಗಾರಿಕೆ ಬೆಳೆಗಳು ಕೈಗೆಟಕುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ನೋಡಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಮಾತ್ರ ಆಹಾರ ಬೆಳೆಗಳಿಗೆ ಮಾತ್ರ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವಂತೆ ಕಾಣುತ್ತಿದೆ. ಅಡಕೆ ಬೆಳೆಗಾರರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಗುಟ್ಕಾ ನಿಷೇಧದ ಸಂದರ್ಭದಲ್ಲಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ಮರೆತಂತಿದೆ.
ಸತತ ಮಳೆಯಿಂದಾಗಿ ಕೊಡಗು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ ಕಡಿತವಾಗಿದೆ. ವಿದ್ಯುತ್, ದೂರವಾಣಿ ಸೇವೆಗಳು ಮಳೆಗಾಲದ ಬಿಸಿಲಿನಷ್ಟೆ ಅಪರೂಪವಾಗಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಇದು ಮಲೆನಾಡಿನ ಸಾಮಾನ್ಯ ಸಮಸ್ಯೆಗಳು ಎಂಬ ಲಹರಿಯಲ್ಲಿದ್ದಾರೆ.
ಎರಡೇ ತಿಂಗಳಲ್ಲಿ ನಾಲ್ಕು ತಿಂಗಳ ಮಳೆ!: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ವಾಡಿಕೆ ಪ್ರಕಾರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಆಗಬೇಕಿದ್ದ ಮಳೆ ಎರಡೇ ತಿಂಗಳಲ್ಲಿ ಕೋಟಾ ಮುಗಿಸಿದೆ. ಹವಾಮಾನ ಇಲಾಖೆ ಸೂಚನೆ ಪ್ರಕಾರ ಆಗಸ್ಟ್ ತಿಂಗಳಲ್ಲಿಯೂ ಮಳೆ ಪ್ರಮಾಣ ಹೆಚ್ಚಲಿದೆ.
ಈ 6 ಜಿಲ್ಲೆಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇ.35ಕ್ಕೂ ಅಧಿಕವಾಗಿದೆ. ಉತ್ತರ ಕನ್ನಡ (ಶೇ.30), ದಕ್ಷಿಣ ಕನ್ನಡ (ಶೇ.21), ಉಡುಪಿ (ಶೇ.24), ಕೊಡಗು(ಶೇ.39), ಶಿವಮೊಗ್ಗ(ಶೇ.83) ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.28ರಷ್ಟು ಹೆಚ್ಚಾಗಿದೆ.
ರಾಜ್ಯದ 30 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಮಾತ್ರ ಒಂದು ಸಾವಿರಕ್ಕೂ ಅಧಿಕ ಮಿ.ಮೀ ಮಳೆಯಾಗಿದೆ. ಈ 6 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರದಿದ್ದರೂ ಅತಿವೃಷ್ಟಿಯಾಗಿದೆ.
ಬೆಳೆ ನಾಶ ಹಾಗೂ ರೋಗ: ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮಳೆಯ ಪ್ರಮಾಣ ಅಲ್ಪಮಟ್ಟಿಗೆ ಕಡಿಮೆಯಾಗಿತ್ತು. ಇದಲ್ಲದೇ ಸತತವಾಗಿ ತಿಂಗಳುಗಟ್ಟಲೆ ಮಳೆ ಸುರಿಯದೆ ದಶಕಗಳೇ ಕಳೆದಿದ್ದವು. ಇದರಿಂದ ಮಲೆನಾಡಿನ ಜೀವ ಬೆಳೆಯಾದ ಅಡಕೆಗೆ ಔಷಧಿ ಸಿಂಪಡಿಸಲು ಕಾಲಾವಕಾಶ ಸಿಗುತ್ತಿತ್ತು. ಆದರೆ ಈ ವರ್ಷದ ಮಳೆಯಲ್ಲಿ ಔಷಧಿ ಸಿಂಪಡಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹಾಕಿದ ಔಷಧಿಯೂ ಮಳೆಯಲ್ಲಿ ತೊಳೆದುಕೊಂಡು ಹೋಗಿದೆ.
ಒಂದೆಡೆ ಅತಿಯಾದ ಗಾಳಿ ಮಳೆಗೆ ಅಡಕೆ ಅತಿಯಾಗಿ ಉದುರಿದೆ. ಮತ್ತೊಂದೆಡೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗದ ಬಹುತೇಕ ರೈತರ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಕೊಳೆರೋಗದಿಂದ ಬಚಾವಾದರೂ ಬೆಳೆಗಾರರು ಅಡಕೆ ಉದುರುವ ರೋಗದ ಸಂಕಷ್ಟ ಎದುರಿಸುತ್ತಿದ್ದಾರೆ. ಇವೆಲ್ಲದರಿಂದ ಸಿದ್ದಾಪುರ, ಶಿರಸಿ, ಕುಮಟಾ, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ತೀರ್ಥಹಳ್ಳಿ, ಸಾಗರ. ಹೊಸನಗರ ತಾಲೂಕಿನಲ್ಲಿ ಅಡಕೆ ಮರಗಳು ನೆಲಕ್ಕೆ ಒರಗುವ ಪರಿಸ್ಥಿತಿ ಎದುರಾಗಿದೆ. ಸಸಿ ನೆಟ್ಟು ಮತ್ತೆ ಪೈರು ತೆಗೆಯಲು ರೈತರು ಮತ್ತೆ 6-8 ವರ್ಷಗಳ ಕಾಲ ಒದ್ದಾಡಬೇಕಾಗುತ್ತದೆ.
ಇಷ್ಟೆಲ್ಲಾ ಅದರೂ ಬೆಳೆ ಕಳೆದುಕೊಂಡವರಿಗೆ ಪರಿಹಾರ ವಿತರಣೆ ಅಥವಾ ಬೆಳೆ ನಷ್ಟ ಸಮೀಕ್ಷೆ ಕುರಿತಂತೆ ಸರ್ಕಾರದಿಂದ ಯಾವುದೆ ಸೂಚನೆ ಬಂದಿಲ್ಲ ಎಂದು ತಹಸಿಲ್ದಾರರು ಹಾಗೂ ಜಿಲ್ಲಾಡಳಿತ ತಿಳಿಸಿವೆ.
ಬೆಳೆ ನಷ್ಟದ ಪರಿಹಾರವಿಲ್ಲ!: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬತ್ತ ಹೊರತುಪಡಿಸಿ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಸರ್ಕಾರದ ಪರಿಹಾರ ಯೋಜನೆಯಲ್ಲಿ ಈ ಭಾಗದ ಅಡಕೆ, ಮೆಣಸು, ಏಲಕ್ಕಿ, ಕಾಫಿ ಬೆಳೆಗಳು ಸೇರಿಲ್ಲ. ತೋಟಗಾರಿಕೆ ಬೆಳೆಗೆ ಎಕರೆಗೆ 4800 ಪರಿಹಾರ ನೀಡಲಾಗುತ್ತದೆ. ಆದರೆ ಈ ಬೆಳೆಗಳು ಪರಿಹಾರ ಯೋಜನೆಗೆ ಸೇರಿಲ್ಲ. ಸರ್ಕಾರವೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಜತೆ ಸೇರಿ ಸಮೀಕ್ಷೆ ನಡೆಸಿ ರೈತರ ನೆರವಿಗೆ ಬಾರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ.
ಈವರೆಗಿನ ಮಳೆಯ ಪ್ರಮಾಣ (ಮಿ.ಮಿ.ಗಳಲ್ಲಿ)
ಜಿಲ್ಲೆ ಆಗಿರುವ ವಾಡಿಕೆ 2012ರ ವಾಡಿಕೆ ಮಳೆ ಮಳೆ ಮುಂಗಾರು ಮುಂಗಾರು
ಉಡುಪಿ 3381.05 2757 4144.6 3759.7
ಉತ್ತರ ಕನ್ನಡ 2608.9 2039 2768.6 2720.9
ದಕ್ಷಿಣ ಕನ್ನಡ 2958.7 2488.6 2983.5 3351.6
ಶಿವಮೊಗ್ಗ 2016.0 1220.1 1639.4 1514
ಕೊಡಗು 2228.9 626.3 1403.1 2181.9
ಚಿಕ್ಕಮಗಳೂರು 1519 185 1237.6 1657.3
ಸರ್ಕಾರ ಗಮನಿಸಲಿ
- ಅತಿವೃಷ್ಟಿ ಜಿಲ್ಲೆಗಳ ಬೆಳೆ ನಷ್ಟದ ಕುರಿತಂತೆ ಕೂಡಲೆ ಸಮೀಕ್ಷೆ ನಡೆಸಬೇಕು
- ಕೊಳೆ ರೋಗ ಹಾಗೂ ಅಡಕೆ ಉದುರುವ ರೋಗ ನಿವಾರಣೆಗೆ ಹೆಚ್ಚಿನ ಒತ್ತು ನೀಡಬೇಕು
- ಮಳೆಗಾಲದ ಅಡಕೆಗೆ ಸೂಕ್ತ ಬೆಲೆ ಒದಗಿಸಬೇಕು
- ಮುಂಗಾರಿನ ಅರ್ಧ ಮಳೆಗೆ ಇಷ್ಟು ಅವಾಂತರವಾಗಿದೆ, ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕಿದೆ
- ಕ್ಯಾಂಪ್ಕೋ ಅಧ್ಯಕ್ಷರ ಪ್ರಕಾರ ಈವರೆಗೆ 200 ಕೋಟಿಗೂ ಹೆಚ್ಚು ನಷ್ಟ
- ರಾಜೀವ ಹೆಗಡೆ