ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಗುಡುಗು

ಪಾಕಿಸ್ತಾನದ ದುಸ್ಸಾಹಸಕ್ಕೆ ಸೂಕ್ತ ಪ್ರತ್ಯುತ್ತರ ನೀಡದ ಕೇಂದ್ರ ಸರ್ಕಾರವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Mainashree
Updated On : 12 Aug 2013, 12:19 pm

ಹೈದರಾಬಾದ್: ಪಾಕಿಸ್ತಾನದ ದುಸ್ಸಾಹಸಕ್ಕೆ ಸೂಕ್ತ ಪ್ರತ್ಯುತ್ತರ ನೀಡದ ಕೇಂದ್ರ ಸರ್ಕಾರವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗಡಿಯಲ್ಲಿ ನಮ್ಮ ಯೋಧರು ಸಾಯುತ್ತಿದ್ದರೂ ಯುಪಿಎ ಸರ್ಕಾರ ಮೌನವಹಿಸಿದೆ. ನಮ್ಮ ಯೋಧರ ಶಿರಚ್ಛೇದ ಮಾಡಿದ ದೇಶದ ಮಂತ್ರಿಗೆ ರಾಜತಾಂತ್ರಿಕ ಮರ್ಯಾದೆಯ ಹೆಸರಲ್ಲಿ ಬಿರಿಯಾನಿ ತಿನ್ನಿಸಿ ಕಳುಹಿಸಿಕೊಟ್ಟಿದೆ. ಇಂಥ ಸರ್ಕಾರವನ್ನು ಕೆಳಗಿಳಿಸುವ ದಿನ ಈಗ ಹತ್ತಿರ ಬಂದಿದೆ ಎಂದು ಮೋದಿ ಘೋಷಿಸಿದ್ದಾರೆ.
ಹೈದರಾಬಾದ್‌ನ ಲಾಲ್‌ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಭಾನುವಾರ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ಕೇಂದ್ರ ಸರ್ಕಾರದ ಪಾಕ್ ಹಾಗೂ ವಿದೇಶಾಂಗ ನೀತಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಪಿಎ ಸರ್ಕಾರ ದೇಶ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಇಂಥ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ನಮ್ಮ ದೌರ್ಭಾಗ್ಯ. ದೇಶದ ಜನರ ಪಾಲಿಗೆ ಈ ಸರ್ಕಾರ ಹೊರೆಯಾಗಿ ಪರಿಣಮಿಸಿದೆ. ಎಲ್ಲೆಡೆ ಕಾಂಗ್ರೆಸ್ ವಿರೋಧಿ ಭಾವನೆ ಬೆಳೆಯುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಯೋಧರಿಬ್ಬರ ಶಿರಚ್ಛೇದಗೊಳಿಸಿದಾಗ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದಾಗಿ ಪ್ರಧಾನಿ ಮನಮೋಹನ ಸಿಂಗ್ ಭರವಸೆ ನೀಡಿದ್ದರು.    
ಈಗ ಪಾಕ್ ಸೈನಿಕರು ಮತ್ತೆ ನಮ್ಮ ಐದು ಯೋಧರನ್ನು ಹೊಡೆದುರುಳಿಸಿದ್ದಾರೆ. ಪಾಕಿಸ್ತಾನ ನಡೆಸುವ ಅತ್ಯಾಚಾರವನ್ನು ಭಾರತ ಯಾಕಾದರೂ ಮೌನವಾಗಿ ಸಹಿಸಿಕೊಳ್ಳಬೇಕು ಎಂದು ಮೋದಿ ಪ್ರಶ್ನಿಸಿದ್ದಾರೆ.

ವಿದೇಶಾಂಗ ನೀತಿಗೂ ಟೀಕೆ:
ಇಟಲಿಯ ನೌಕಾದಳದವರು ಭಾರತೀಯ ಮೀನುಗಾರರನ್ನು ಗುಂಡಿಟ್ಟುಕೊಲ್ಲುತ್ತಾರೆ. ಅವರನ್ನು ಬಂಧಿಸಿದರೂ ಜಾಮೀನು ನೀಡಲಾಗುತ್ತದೆ. ಸ್ವದೇಶಕ್ಕೆ ಹಿಂತಿರುಗಲೂ ಅವಕಾಶ ಮಾಡಿಕೊಡಲಾಗುತ್ತದೆ. ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಅವರನ್ನು ಮತ್ತೆ ವಾಪಸ್ ಕರೆದುಕೊಂಡು ಬರಲಾಗುತ್ತದೆ.
ಭಾರತೀಯ ಯೋಧರ ಶಿರಚ್ಛೇದ ಮಾಡಿದ ದೇಶದ ಮಂತ್ರಿಗೆ ಬಿರಿಯಾನಿ ತಿನ್ನಿಸಿ ಕಳುಹಿಸಲಾಗುತ್ತದೆ. ಕೇಳಿದರೆ ಅದು ರಾಜತಾಂತ್ರಿಕ ಮರ್ಯಾದೆ ಎನ್ನುವ ಉತ್ತರ ನೀಡುತ್ತದೆ. ನಮ್ಮ ಸೈನಿಕರನ್ನು ಕೊಲ್ಲುವವರಿಗೆ ಈ ರೀತಿಯ ಮರ್ಯಾದೆ ನೀಡುವುದು ಸರಿಯೇ?
ಯುಪಿಎ ಸರ್ಕಾರ ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಅದಕ್ಕೆ ಜನಸಾಮಾನ್ಯರ ಕುರಿತು ಕಾಳಜಿಯೇ ಇಲ್ಲ. ಅದು ಕೇವಲ ಮತ ಬ್ಯಾಂಕ್ ರಾಜಕಾರಣದಲ್ಲಿ ಬ್ಯುಸಿಯಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.

ನಾಚಿಗೆಗೇಡಿನ ಸಂಗತಿ
ಚೀನಾ ಹಾಗೂ ಬಾಂಗ್ಲಾಗೆ ಸಂಬಂಧಿಸಿ ಯುಪಿಎ ಸರ್ಕಾರದ ನೀತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೋದಿ, ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಕುರಿತು ಕಿಡಿ ಕಾರಿದ್ದಾರೆ.
ಒಂದು ಕಡೆ ಚೀನಾವು ನಮ್ಮ ನೆಲವನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದರೆ ಸಲ್ಮಾನ್ ಖುರ್ಷಿದ್ ಅವರು ಬೀಜಿಂಗ್‌ಗೆ ಭೇಟಿ ನೀಡುತ್ತಾರೆ. ನಾನು ಬೀಜಿಂಗ್‌ನಲ್ಲೇ ನೆಲೆಸಲು ಬಯಸುತ್ತೇನೆ ಎಂದು ಹೊಗಳಿ ಬರುತ್ತಾರೆ.
ಸರ್ಕಾರ ನಡೆಸುತ್ತಿರುವವರಿಗೆ ನಾಚಿಗೆಯಾಗಬೇಕು. ಇವರು 125 ಕೋಟಿ ಜನರ ಗಾಯಕ್ಕೆ ಆ್ಯಸಿಡ್ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತಮ್ಮ ಮೇಲೆ ದೌರ್ಜನ್ಯ ನಡೆದರೂ ಬಾಂಗ್ಲಾ ಗಡಿಯಲ್ಲಿರುವ ನಮ್ಮ ಯೋಧರಿಗೆ ಬಂದೂಕು ಬಳಸದಂತೆ ಸೂಚಿಸಿರುವ ಸರ್ಕಾರದ ಕ್ರಮಕ್ಕೂ ಮೋದಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಜಯಾಗೆ ಮೋದಿ ಶಹಬ್ಬಾಸ್
ಸಮಾವೇಶದಲ್ಲಿ ಮೋದಿ ತಮಿಳುನಾಡು ಸಿಎಂ ಜಯಲಲಿತಾ ಗುಣಗಾನ ಮಾಡಿದರು. ಕೌಶಲ್ಯಾಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿದ ಅವರು 'ಯುಪಿಎ ಸರ್ಕಾರ ತಮಿಳುನಾಡಿನ ಸರ್ಕಾರವನ್ನು ನೋಡಿ ಕಲಿಯಬೇಕು' ಎಂದರು. ಆದರೆ, ಯುಪಿಎ ಸರ್ಕಾರ ಅಂಥ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು. ಮಧ್ಯಪ್ರದೇಶ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನೂ ಮೋದಿ ಶ್ಲಾಘಿಸಿದರು.

ಎನ್‌ಟಿಆರ್ ಸ್ಮರಣೆ
ಕಾಂಗ್ರೆಸ್ ದೇಶದ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಆಂಧ್ರಕ್ಕೆ ಕಾಲಿಟ್ಟಾಗ ನಾನು ದಿ.ಎನ್.ಟಿ.ರಾಮ ರಾವ್ (ಎನ್‌ಟಿಆರ್) ರನ್ನು ಸ್ಮರಿಸುತ್ತೇನೆ. ಅವರು ಆಂಧ್ರಕ್ಕೆ ಮಾತ್ರವಲ್ಲದೆ ಕಾಂಗ್ರೆಸ್ ವಿರೋಧಿ ರಾಜಕೀಯದ ಮೂಲಕ ಇಡೀ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಎನ್‌ಟಿಆರ್ ಅವರ ಪ್ರಯತ್ನದಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗುವುದು ಸಾಧ್ಯವಾಯಿತು ಎಂದು ಮೋದಿ ತಿಳಿಸಿದ್ದಾರೆ. ಆಂಧ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚಿಸುವುದೇ ಎನ್‌ಟಿಆರ್ ಅವರಿಗೆ ನೀಡುವ ಅತ್ಯುನ್ನತ ಶ್ರದ್ಧಾಂಜಲಿ ಎಂದು ಮೋದಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement