ವಸತಿ ಶಾಲೆ ಮಕ್ಕಳಿಗಿಲ್ಲ ಕ್ಷೀರ ಭಾಗ್ಯ
ಕ.ಪ್ರ.ವಾರ್ತೆ ಕೊಪ್ಪಳ ಆ. 11
ರಾಜ್ಯಾದ್ಯಂತ ಇರುವ ಸುಮಾರು 550 ವಸತಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಇಲ್ಲ ಕ್ಷೀರ ಭಾಗ್ಯ!
ಇದುವರೆಗೂ ವಸತಿ ಶಾಲೆ ನಿಲಯದಲ್ಲಿಯೂ ಹಾಲು ವಿತರಣೆ ಮಾಡುವಂತೆ ಆದೇಶ ಬಂದಿಲ್ಲವಾದ್ದರಿಂದ ಮಹತ್ವಾಕಾಂಕ್ಷಿ ಯೋಜನೆ ವಸತಿ ಶಾಲೆಯಲ್ಲಿರುವ ಮಕ್ಕಳಿಗೆ ಸಿಗದಂತಾಗಿದೆ. ಈ ಕುರಿತು ವ್ಯಾಪಕ ಟೀಕೆಯೂ ವ್ಯಕ್ತವಾಗಿದ್ದು ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳು ನಾವು ವಿದ್ಯಾರ್ಥಿಗಳಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಅಂಗನವಾಡಿ ಮಕ್ಕಳು ಸೇರಿದಂತೆ ರಾಜ್ಯಾದ್ಯಂತ ಶಾಲೆಯಲ್ಲಿ ಓದುತ್ತಿರುವ ಒಂದರಿಂದ ಹತ್ತನೇ ತರಗತಿವರೆಗೂ ಇರುವ ಮಕ್ಕಳಿಗೆ ಹಾಲು ವಿತರಣೆ ಮಾಡುವಂತೆ ಆದೇಶ ಮಾಡಿದೆ ಹಾಗೂ ಶಾಲಾವಾರು ಈಗಾಗಲೇ ಕೆನೆಭರಿತ ಹಾಲು, ಕೆನೆರಹಿತ ಹಾಲಿನ ಪುಡಿ ವಿತರಣೆ ಮಾಡಿದೆ. ಅದರಂತೆ ನಿತ್ಯವೂ ಮಕ್ಕಳಿಗೆ ಹಾಲು ನೀಡುವ ಕಾರ್ಯ ಸಾಂಗವಾಗಿ ಸಾಗುತ್ತಿದೆ. ಆದರೆ, ಆದೇಶದಲ್ಲಿ ಕೇವಲ ಶಾಲೆ ಎಂದು ನಮೂದಿಸಿದ್ದರಿಂದ ವಸತಿ ಶಾಲೆಗಳಿಗೆ ಈ ಯೋಜನೆಯನ್ನು ಅಧಿಕಾರಿಗಳು ವಿಸ್ತರಣೆ ಮಾಡಿಯೇ ಇಲ್ಲ. ಪರಿಣಾಮ ವಸತಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಾವೇನು ಪಾಪ ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಸತಿ ಶಾಲೆ ಮಕ್ಕಳಲ್ಲಿ ಪೌಷ್ಟಿಕತೆ ಇದೆಯೆ?: ಲಕ್ಷಾಂತರ ಮಕ್ಕಳಿಗೆ ಹಾಲು ವಿತರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಹತ್ತಾರು ಸಾವಿರ ಮಕ್ಕಳು ಹೊರೆಯಾದರೇ ಎನ್ನುವ ಪ್ರಶ್ನೆಯೂ ಎದ್ದು ನಿಂತಿದೆ. ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮಾತ್ರ ಅಪೌಷ್ಟಿಕತೆಯಿಂದ ಬಲುಳುತ್ತಿದ್ದಾರೆಯೇ? ಬಡತನದ ಬೇಗೆಯಲ್ಲಿ ಬೆಂದು ಹೇಗೊ ವಸತಿ ಶಾಲೆಯಲ್ಲಿ ಸೇರಿಕೊಂಡಿರುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿಲ್ಲವೇ ಎನ್ನುವ ಪ್ರಶ್ನೆಗೆ ರಾಜ್ಯ ಸರ್ಕಾರ ಉತ್ತರ ನೀಡಬೇಕಾಗಿದೆ.
ನಾವು ಹಳ್ಳಿಯಲ್ಲಿಯೇ ಇದ್ದು ಕೊಂಡು, ಬಡತನದಲ್ಲಿಯೇ ಬೆಂದು ಹೇಗೋ ಕಷ್ಟಪಟ್ಟು ವಸತಿ ಶಾಲೆ ಸೇರಿದ್ದೇವೆ. ಈಗ ಸರ್ಕಾರ ಕೇವಲ ಶಾಲೆಯಲ್ಲಿರುವ ಮಕ್ಕಳಿಗೆ ಕ್ಷೀರ ಭಾಗ್ಯವನ್ನು ಕಲ್ಪಿಸಿ, ವಸತಿ ಶಾಲೆಯಲ್ಲಿರುವ ಮಕ್ಕಳನ್ನು ಇದರಿಂದ ದೂರವಿಟ್ಟಿರುವುದು ಸರಿಯಾದುದಲ್ಲ ಎನ್ನುತ್ತಾರೆ ವಸತಿ ಶಾಲೆಯ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು.
ಚಹಾ, ಬ್ರೆಡ್ ಕೂಡ ಬಂದ್!
ಅಚ್ಚರಿ ಎಂದರೇ ಇತ್ತ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡಲು ಆದೇಶ ಮಾಡಿರುವ ರಾಜ್ಯ ಸರ್ಕಾರ ವಸತಿ ಶಾಲೆಯ ಮಕ್ಕಳಿಗೆ ನೀಡುತ್ತಿದ್ದ ಚಹಾ ಮತ್ತು ಬ್ರೆಡ್ ನೀಡುವುದನ್ನೇ ನಿಲ್ಲಿಸಿದೆ. ನಿತ್ಯ ಒಂದು ಸಮಯ ಚಹಾ ಮತ್ತು ಬ್ರೆಡ್ ನೀಡುತ್ತಿತ್ತು. ಆದರೆ, ಕಳೆದ ತಿಂಗಳಿಂದ ಅದು ಬಂದಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಂದ್ ಮಾಡಿರುವ ಚಹಾ- ಬ್ರೆಡ್ ವಿತರಣೆಯನ್ನು ಕೂಡಲೇ ಪ್ರಾರಂಭಿಸಬೇಕು ಮತ್ತು ಹಾಲು ವಿತರಣೆಯನ್ನು ವಸತಿ ಶಾಲೆಗೂ ವಿಸ್ತರಣೆ ಮಾಡುವಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ವಸತಿ ಶಾಲೆಗಳಿಗೆ ಹಾಲು ವಿತರಣೆ ಆದೇಶ ಇದುವರೆಗೂ ಬಂದಿಲ್ಲ. ಹೀಗಾಗಿ ಶಾಲೆಗಳ ವಿದ್ಯಾರ್ಥಿಗಳಿಗೆ ನಡೆಯುವ ಹಾಲು ವಿತರಣೆ ವಸತಿ ಶಾಲೆಗಳಲ್ಲಿ ನಡೆಯುತ್ತಿಲ್ಲ. ಸರ್ಕಾರದ ಆದೇಶ ಬಂದರೇ ಖಂಡಿತವಾಗಿಯೂ ವಿತರಣೆ ಮಾಡಲಾಗುತ್ತದೆ.
- ಬಿ. ಕಲ್ಲೇಶ, ಜಿಲ್ಲಾಧಿಕಾರಿ,
ಹಿಂದುಳಿದ ವರ್ಗಗಳ ಇಲಾಖೆ, ಕೊಪ್ಪಳ
ಎಲ್ಲ ಶಾಲೆ ಮಕ್ಕಳಿಗೂ ಹಾಲು ವಿತರಣೆ ಮಾಡುವ ರಾಜ್ಯ ಸರ್ಕಾರ ತನ್ನದೇ ಅಧೀನದಲ್ಲಿ ನಡೆಯುವ ವಸತಿ ಶಾಲೆಗಳಲ್ಲಿರುವ ಮಕ್ಕಳಿಗೆ ಹಾಲು ವಿತರಣೆಗೆ ಆದೇಶ ಮಾಡದೆ ಇರುವುದು ಅನ್ಯಾಯ. ಶಾಲೆಗೆ ಹೋಗುವ ಮಕ್ಕಳಿಗೆ ಹಾಲು ನೀಡಿ, ವಸತಿ ಶಾಲೆಯಲ್ಲಿರುವ ಮಕ್ಕಳನ್ನು ಅದರಿಂದ ದೂರ ಇಡುವುದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ವಸತಿ ಶಾಲೆ ಮಕ್ಕಳಿಗೂ ಹಾಲು ವಿತರಣೆ ಮಾಡುವಂತೆ ಆದೇಶ ಮಾಡಬೇಕು.
- ಏಳು ಕೋಟೇಶ, ವಸತಿ ಶಾಲೆಯ
ವಿದ್ಯಾರ್ಥಿಯೊಬ್ಬರ ಪಾಲಕ, ಬೆಟಗೇರಿ
ಸೋಮರಡ್ಡಿ ಅಳವಂಡಿ