ಸಂಕಷ್ಟದಲ್ಲಿ ಒಳನಾಡು ಮೀನುಗಾರಿಕೆ
ಬೆಂಗಳೂರು: ಬರಗಾದಲ ಪರಿಣಾಮ ಕಳೆದ ಎರಡು ವರ್ಷಗಳಿಂದ ಕರೆ-ಕಟ್ಟೆಗಳು ಬತ್ತಿ ಹೋದವು. ಹೀಗಾಗಿ ಒಳನಾಡು ಮೀನುಗಾರಿಕೆಯೂ ವಿಲವಿಲ ಎಂದು ಒದ್ದಾಡುವಂತಾಯಿತು.
ಮಳೆ ಕೊರತೆಯಿಂದಾಗಿ ಕೆರೆಗಳು ಭರ್ತಿ ಆಗಲಿಲ್ಲ. ಈ ವರ್ಷವೂ ಅನೇಕ ಕಡೆ ಅದೇ ಪರಿಸ್ಥಿತಿ ಇದೆ. ಹೀಗಾಗಿ ಮೀನುಗಾರಿಕೆ ಇಲಾಖೆ ಮೀನುಸಾಕಾಣಿಕೆಗೆ ಟೆಂಡರ್ ಆಹ್ವಾನಿಸಲು ಮೀನಮೇಷ ಎಣಿಸುತ್ತಿದೆ.
ರಾಜ್ಯದಲ್ಲಿ ಜಲಾಶಯಗಳು ಉಕ್ಕಿ ಹರಿಯುತ್ತಿವೆಯಾದರೂ ಕೆರೆಕಟ್ಟೆಗಳು ಮಾತ್ರ ತುಂಬುತ್ತಿಲ್ಲ. ಮತ್ತೊಂದೆಡೆ ಹೆಚ್ಚುತ್ತಿರುವ ಒತ್ತುವರಿ ಹಾವಳಿಯಿಂದ ಕೆರೆಗಳ ವಿಸ್ತೀರ್ಣ ಕರಗುತ್ತಿರುವುದು ಮೀನುಗಾರಿಕೆ ಇಲಾಖೆಗೆ ತಲೆನೋವು ತಂದಿದೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ ಇಲಾಖೆ ಸಣ್ಣ ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಏಕೆಂದರೆ ಸ್ಥಳೀಯ ರಾಜಕೀಯ ಕೆರೆಗಳನ್ನೇ ನುಂಗುವಷ್ಟು ಪ್ರಬಲವಾಗಿದೆ.
ಈ ಮಧ್ಯೆ ಗ್ರಾಮಗಳ ಸಮೀಪದ ಕೆರೆಗಳಲ್ಲಿ ಮೀನುಗಾರಿಕೆಗೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ. ಕೆರೆಯಲ್ಲಿ ಬಟ್ಟೆ, ಜಾನುವಾರುಗಳನ್ನು ತೊಳೆಯುವುದರಿಂದ ಮೀನು ಅಭಿವೃದ್ಧಿಗೆ ಆಹಾರ ಮತ್ತು ಅಗತ್ಯ ಪೋಷಕಾಂಶ ಹಾಕಲು ಬಿಡುತ್ತಿಲ್ಲ. ಇತ್ತೀಚಿಗೆ ರಾಜ್ಯದಲ್ಲಿ ಮೀನಿಗೆ ಬೇಡಿಕೆ ಹೆಚ್ಚುತ್ತಿದೆಯಾದರೂ ಸಾಕಾಣಿಕೆಗೆ ಮಾತ್ರ ಸೂಕ್ತ ಉತ್ತೇಜನ ಸಿಗುತ್ತಿಲ್ಲ.
ಮೀನು ಉತ್ಪಾದನೆ ಶೇ.50ಕುಸಿತ: ರಾಜ್ಯದಲ್ಲಿ ಒಟ್ಟು 26,000 ಕೆರೆಗಳಿದ್ದು, ಇವುಗಳ ಪೈಕಿ 22,624 ಕೆರೆಗಳು ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿವೆ. ಉಳಿದವು ಸಣ್ಣ ನೀರಾವರಿ ಇಲಾಖೆಗೆ ಬರುತ್ತವೆ. ಇವುಗಳಲ್ಲಿ ಮೀನು ಸಾಕಾಣಿಕೆಗೆ ಇಲಾಖೆ ಪಡೆದಿರುವುದು 3,400 ಕೆರೆಗಳು ಮಾತ್ರ. ಈ ಎಲ್ಲಾ ಕರೆಗಳೂ ಸಂಪೂರ್ಣ ಮಳೆ ಆಶ್ರಿತ. ಮಳೆ ಕೈಕೊಟ್ಟರೆ ಈ ಕೆರೆಗಳ ಸ್ಥಿತಿ ಸತ್ತ ಮೀನುಗಳಂತಾಗುತ್ತವೆ.
ಹೀಗಾಗಿಯೇ ಕಳೆದ ಎರಡು ವರ್ಷಗಳಿಂದ ಬತ್ತಿದ ಕೆರೆಗಳಲ್ಲಿ ಮೀನು ಸಾಕಾಣಿಕೆ ನಡೆದಿಲ್ಲ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಉತ್ಪಾದನೆಯಾಗಿಲ್ಲ.
ನೀರಿಲ್ಲದೆ ಕೆಲವು ಕೆರೆಗಳಲ್ಲಿ ಮೀನು ಸತ್ತಿದ್ದರೆ, ಅನೇಕ ಕಡೆ ಗ್ರಾಮಸ್ಥರ ವಿರೋಧದಿಂದ ಮೀನಿಗೆ ಪೋಷಕಾಂಶ ಹಾಕಲಾಗದೆ ಅಭಿವೃದ್ಧಿಯಾಗಿಲ್ಲ. ಸಾಮಾನ್ಯವಾಗಿ ಒಂದು ವರ್ಷದ ಬೆಳೆದ ಮೀನು 1.5 ಕೆ.ಜಿ. ತೂಕ ಇರಬೇಕು. ಆದರೆ, ಪೋಷಕಾಂಶ ಇಲ್ಲದೆ 700ಗ್ರಾಂ ತೂಕ ಇದೆ. 2010-11ರಲ್ಲಿ ಮೀನಿನ ಉತ್ಪಾದನೆ 2 ಲಕ್ಷ ಟನ್ನಷ್ಟಿತ್ತು. ನಂತರದ ವರ್ಷಗಳಲ್ಲಿ ಶೇ.30ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಮೀನು ಉತ್ಪಾದನೆ ಪ್ರಮಾಣದಲ್ಲಿ ಶೇ.50ರಷ್ಟು ಕುಸಿತವಾಗಿದೆ. ಸದ್ಯ ಕೆರೆಗಳ ಪರಿಸ್ಥಿತಿ ಗಮನಿಸಿದರೆ ಮೀನು ಸಾಕಾಣಿಕೆ ವರ್ಷವೂ ಕುಸಿಯಲಿದೆ.
ಪರಿಹಾರವೇನು?
ಮೀನುಗಾರಿಕೆಗೆ ಮೀಸಲಾದ 3,400 ಕೆರೆಗಳಲ್ಲಿ ನೀರಿರುವ 400 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಇಲಾಖೆ ಮೀನು ಸಾಕಾಣಿಕೆಗೆ ಗುತ್ತಿಗೆ ನೀಡುತ್ತದೆ.
ಜಲಸಂವರ್ಧನ ಯೋಜನೆಯಡಿ ಇದನ್ನು ಕೆರೆ ಬಳಕೆದಾರರ ಸಂಘಕ್ಕೆ, ಮೀನು ಸಹಕಾರ ಸಂಘಗಳಿಗೆ ಹಾಗೂ ನಿರುದ್ಯೋಗಿಗಳಿರುವ ಸಹಕಾರ ಸಂಘಗಳಿಗೆ ಇಂತಿಷ್ಟು ವರ್ಷಗಳಿಗೆಂದು ಗುತ್ತಿಗೆಗೆ ನೀಡಲಾಗುತ್ತದೆ. ಉಳಿದ ಕೆರೆಗಳು ತುಂಬಿದ ನಂತರ ಟೆಂಡರ್ ಆಹ್ವಾನಿಸಿ ಒಂದು ವರ್ಷದ ಅವಧಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ, ಈ ವರ್ಷ ಕರೆಗಳಲ್ಲಿ ನೀರಿಲ್ಲದೆ ಟೆಂಡರ್ ಆಹ್ವಾನಿಸುವುದು ಕಷ್ಟವಾಗುತ್ತಿದೆ.
ಹೀಗಾಗಿ ಸರ್ಕಾರ ಈಗ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸಬೇಕು. ಆ ಮೂಲಕ ಕೆರೆಗಳನ್ನು ತುಂಬಿಸಬೇಕು. ಗೋವಿಂದ ಕಾರಜೋಳ ಅವರು ಸಣ್ಣ ನೀರಾವರಿ ಸಚಿವರಾಗಿದ್ದಾಗ ಬಿಜಾಪುರದ ಕೆಲವೆಡೆ ಈ ಕಾರ್ಯಕ್ರಮ ಆರಂಭವಾಗಿತ್ತು. ಆನಂತರ ಸ್ಥಗಿತವಾಯಿತು. ಇದೇ ಕಾರ್ಯಕ್ರಮ ಮತ್ತೆ ಆರಂಭವಾದರೆ ಕೆರೆಗಳಿಗೆ ಒಂದಷ್ಟು ನೀರು ಸಿಕ್ಕಿ ಮೀನುಗಳು ಉಳಿಯುತ್ತವೆ.
ಒಂದು ವೇಳೆ ಉತ್ತಮ ಮಳೆಯಾದರೂ ಬಹುತೇಕ ಕೆರೆಗಳು ತುಂಬುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಕೆರೆಗಳಲ್ಲಿ ಹೂಳು ತುಂಬಿ ತುಳುಕುತ್ತಿದೆ. ಹಿಂದೆ ರೈತರು ಕೆರೆ ಮಣ್ಣನ್ನು (ಗೊಡು) ಜಮೀನುಗಳಿಗೆ ಹಾಕುತ್ತಿದ್ದರು. ಈಗ ಆ ಪದ್ಧತಿಯೂ ದೂರವಾಗಿದೆ. ಹೀಗಾಗಿ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರು ಸಂಗ್ರಹವಾಗುವುದಕ್ಕೂ ಅವಕಾಶವಿಲ್ಲದಂತಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.
ರಾಜ್ಯದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಮೀನುಗಾರಿಕೆ ಶೇ.1ರಷ್ಟು ಕಾಣಿಕೆ ನೀಡುತ್ತಿತ್ತು. ಆದರೆ, ಇತ್ತೀಚಿಗೆ ಮಳೆ ಕೊರತೆ, ಕೆರೆಗಳ ದುಸ್ಥಿತಿಯಿಂದ ಇಲಾಖೆ ಕಾಣಿಕೆ ಕಡಿಮೆಯಾಗುತ್ತಿದೆ.
- ರಾಮಕೃಷ್ಣ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು
- ಶಿವಕುಮಾರ್ ಬೆಳ್ಳಿತಟ್ಟೆ