ಅಂದು ಅಂದಿಗೆ ಇಂದು ಇಂದಿಗೆ...
'ದೋಸ್ತಿ ದೋಖಾ'ದಿಂದ ದೂರವಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಮತ್ತೆ ಹತ್ತಿರವಾಗಿದ್ದಾರೆ!ರಾಜಕೀಯದಲ್ಲಿ ಯಾರೂ ...
ಕನ್ನಡಪ್ರಭ ವಾರ್ತೆ ಮೈಸೂರು ಆ.12
'ದೋಸ್ತಿ ದೋಖಾ'ದಿಂದ ದೂರವಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಮತ್ತೆ ಹತ್ತಿರವಾಗಿದ್ದಾರೆ!
ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುವೂ ಅಲ್ಲ ಎಂಬ ಗಾದೆಗೆ ಅನ್ವರ್ಥವೆಂಬಂತೆ ಸೋಮವಾರ ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಒಂದೇ ಹಾರಕ್ಕೆ ಉಭಯ ನಾಯಕರು ಕೊರಳೊಡ್ಡಿ ಪಿಸುಮಾತಿನ ಮೂಲಕ ನಗೆ ಬೀರಿ ಆಶ್ಚರ್ಯ ಮೂಡಿಸಿದ್ದಾರೆ. ಅಲ್ಲದೇ ಆರು ವರ್ಷಗಳ ಹಗೆತನಕ್ಕೆ ತಾತ್ಕಾಲಿಕ ಇತಿಶ್ರೀ ಹಾಡುವ ಮುನ್ಸೂಚನೆ ನೀಡಿದ್ದಾರೆ.
ಕೆ.ಆರ್. ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಅವರು ಮೈಸೂರಿನ ದಟ್ಟಗಳ್ಳಿಯಲ್ಲಿ ಅತ್ಯಾಧುನಿಕ ಸಾ.ರಾ. ಸಭಾಂಗಣ ನಿರ್ಮಿಸಿದ್ದು, ಇದರ ಉದ್ಘಾಟನೆಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದಿದ್ದರೂ ಸಾ.ರಾ. ಮಹೇಶ್ ಅವರ ಆಹ್ವಾನದ ಮೇರೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ನಗು ಮುಖದ ಸ್ವಾಗತ: ಕಾರ್ಯಕ್ರಮದ ವೇದಿಕೆಯತ್ತ ಯಡಿಯೂರಪ್ಪ ಅವರು ಆಗಮಿಸುತ್ತಿರುವುದನ್ನು ಗಮನಿಸಿದ ಕುಮಾರಸ್ವಾಮಿ ನಗುಮುಖದಿಂದ ಬರಮಾಡಿಕೊಂಡರು. ಸಭಾಂಗಣ ಉದ್ಘಾಟನೆ, ದೀಪ ಬೆಳಗಿಸಲು ಯಡಿಯೂರಪ್ಪ ಅವರನ್ನು ಪ್ರೀತಿಯಿಂದಲೇ ಕುಮಾರಸ್ವಾಮಿ ಆಹ್ವಾನಿಸಿದರು. ಸನ್ಮಾನ ಸ್ವೀಕರಿಸುವ ವೇಳೆ ಒಂದೇ ಹಾರದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿಕೊಂಡರು. ಆ ಹಾರದಲ್ಲಿ ಶಾಸಕ ಸಾ.ರಾ. ಮಹೇಶ್ ಸಹ ಕೊರಳೊಡ್ಡಿದರು. ಕತ್ತಿನಲ್ಲಿ ಹಾರ ಸೇರುತ್ತಿದ್ದಂತೆ ಯಡಿಯೂರಪ್ಪ ಕಿವಿಯಲ್ಲಿ ಕುಮಾರಸ್ವಾಮಿ ಅವರು ಪಿಸುಗುಟ್ಟಿದರು. ಆ ಪಿಸು ಮಾತಿನಿಂದ ಯಡಿಯೂರಪ್ಪ ನಗು ಬೀರಿದರು.
ಕೆಜೆಪಿ ಸಭೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಕಾರ್ಯಕ್ರಮ ಮಧ್ಯದಲ್ಲೇ ನಿರ್ಗಮಿಸಿದರು. ಈ ಒಂದೇ ವೇದಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಮುಖಂಡರು ಸಂಗಮವಾಗಿತ್ತು. ಸಚಿವ ವಿ. ಶ್ರೀನಿವಾಸಪ್ರಸಾದ್ ಬಳಿ ಮಾಜಿ ಸಚಿವ ರಾಮದಾಸ್ ಕುಳಿತಿದ್ದರು. ಭಾಷಣದಲ್ಲಿ ಪರಸ್ಪರ ಸ್ನೇಹದ ಬಗ್ಗೆ ಹೇಳಿಕೊಂಡರು.
ಯಡಿಯೂರಪ್ಪ, ಕುಮಾರಸ್ವಾಮಿ ಅವರದು ಸೌಜನ್ಯದ ಭೇಟಿ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ಇದೊಂದು ಪಕ್ಷ ಅಥವಾ ಧಾರ್ಮಿಕ ಕಾರ್ಯಕ್ರಮವಲ್ಲ. ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿಲ್ಲ. ಜೆಡಿಎಸ್ ಉಳಿಸುವುದೇ ನನ್ನ ಹೋರಾಟ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ
-ಎಚ್.ಡಿ. ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ನಮ್ಮ ಪಕ್ಷದ (ಕೆಜೆಪಿ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದೆ. ಸಭಾಂಗಣ ಉದ್ಘಾಟನೆಯಲ್ಲಿ ಭಾಗವಹಿಸುವಂತೆ ಶಾಸಕ ಸಾ.ರಾ. ಮಹೇಶ್ ಅವರು ಕೋರಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ರಾಜಕೀಯದಲ್ಲಿ ಯಾರೂ ಶುತ್ರುಗಳಲ್ಲ, ಮಿತ್ರರೂ ಅಲ್ಲ. ಮುಂದಿನ ಹೆಜ್ಜೆಗಳ ಬಗ್ಗೆ ತೀರ್ಮಾನಿಸಿ ಹೇಳುತ್ತೇನೆ.
- ಬಿ.ಎಸ್. ಯಡಿಯೂರಪ್ಪ, ಕೆಜೆಪಿ ಸಂಸ್ಥಾಪಕ